ಮಳೆಗಾಲದಲ್ಲಿ ನದಿಗಳಲ್ಲಿ ನೀರು ತುಂಬಿ ಹರಿಯುವುದರಿಂದ ನದಿಯಲ್ಲಿರುವ ಮೊಸಳೆಗಳು ದಡಕ್ಕೆ ಬಂದು ಸೇರುತ್ತವೆ. ಅವುಗಳಿಗೆ ಆಹಾರ ಸಿಗದಿದ್ದಾಗ ಕೆಲವೊಮ್ಮೆ ಅವುಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಅಂತಹದೊಂದು ಘಟನೆ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಮೀನುಗಾರಿಕೆಗಾಗಿ ನದಿಗೆ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ಮೊಸಳೆ ದಾಳಿ (Crocodile Attack)ಮಾಡಿದ್ದು, ಆಗ ಆತನ ಜೊತೆಗಿದ್ದ 12 ವರ್ಷದ ಬಾಲಕನೊಬ್ಬ ತನ್ನ ತಂದೆಯನ್ನು ಮೊಸಳೆ ಹಿಡಿತದಿಂದ ರಕ್ಷಿಸಲು ಮೊಸಳೆ ಜೊತೆಗೆ ಹೋರಾಡಿದ್ದಾನೆ.
ರಬಿಯುಲ್ ಶೇಖ್ ಎಂಬ 12 ವರ್ಷದ ಬಾಲಕ ತನ್ನ ತಂದೆಯನ್ನು ಉಳಿಸುವ ಪ್ರಯತ್ನದಲ್ಲಿ ಸುಂದರ್ ಬನ್‌ನಲ್ಲಿ 10 ಅಡಿ ಉಪ್ಪುನೀರಿನ ಮೊಸಳೆಯೊಂದಿಗೆ ಹೋರಾಡಿದ್ದಾನೆ. ಆದರೆ ಆತನ ನಿರಂತರ ಹೋರಾಟದ ಹೊರತಾಗಿಯೂ, ಅವನು ತನ್ನ ತಂದೆಯನ್ನು ಮೊಸಳೆಯ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ದಕ್ಷಿಣ 24-ಪರಗಣದ ಪಥರ್ ಪ್ರತಿಮಾದ ಸತ್ಯದಾಸ್ಪುರ ಗ್ರಾಮದ ಜಗದ್ದಲ್ ನದಿಯ ದಡದಲ್ಲಿ ಭಾನುವಾರ ಈ ಘಟನೆ ನಡೆದಿದೆ. ತಂದೆ ಮಗ ಇಬ್ಬರೂ ನದಿಗೆ ಮೀನುಗಾರಿಕೆಗೆ ಹೋಗಿದ್ದರು. ಮೀನುಗಾರಿಕೆ ಬಲೆಯನ್ನು ಹಿಂಪಡೆಯಲು ಪ್ರಯತ್ನಿಸುತ್ತಿದ್ದ 45 ವರ್ಷದ ಅಸ್ಮುದ್ದೀನ್ ಶೇಖ್ ಮೇಲೆ ಮೊಸಳೆ ದಾಳಿ ಮಾಡಿದೆ. ಇದನ್ನು ನೋಡಿದ ಮಗ ಮೊಸಳೆಯ ಮೇಲೆ ಹಾರಿ ತನ್ನ ತಂದೆಯ ತೋಳನ್ನು ಮೊಸಳೆಯ ಬಾಯಿಂದ ಬಿಡಿಸಲು ತನ್ನ ಕೈಗಳಿಂದ ಅದರ ದವಡೆಗಳನ್ನು ತೆರೆಯಲು ಪ್ರಯತ್ನಿಸಿದನು. ತನ್ನ ಮಗ ಹೆಣಗಾಡುತ್ತಿರುವುದನ್ನು ನೋಡಿದ ಅಸ್ಮಾವುದ್ದೀನ್, ಹಳ್ಳಿಗೆ ಹೋಗಿ ಕೆಲವು ಜನರನ್ನು ತನ್ನೊಂದಿಗೆ ಕರೆತರುವಂತೆ ಮಗನಿಗೆ ಹೇಳಿದ್ದಾನೆ. ಬಾಲಕ ನದಿಯ ದಡಕ್ಕೆ ಧಾವಿಸಿ ಕೆಲವು ನಿಮಿಷಗಳಲ್ಲಿ ಕೆಲವು ಜನರೊಂದಿಗೆ ಹಿಂದಿರುಗಿದನು. ಆದರೆ ಅಷ್ಟರಲ್ಲಿ ಮೊಸಳೆ ಆತನ ತಂದೆಯನ್ನು ನದಿಗೆ ಎಳೆದುಕೊಂಡು ಹೋಗಿತ್ತು.
ಇದನ್ನೂ ಓದಿ: ಕೆಸರು ಗದ್ದೆಯಲ್ಲಿ ಹೊರಳಾಡಿದ ದಂಪತಿ; ವೈರಲ್ ಆಯ್ತು ಇವರಿಬ್ಬರ ನಾಗಿನಿ ಡ್ಯಾನ್ಸ್!
ಆನಂತರ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅರಣ್ಯ ಅಧಿಕಾರಿಗಳ ಸಹಾಯದಿಂದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಅಸ್ಮುದ್ದೀನ್ ಅವರ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನ್ನ ತಂದೆಯನ್ನು ಉಳಿಸಲು ಅಸಾಮಾನ್ಯ ಧೈರ್ಯವನ್ನು ತೋರಿಸಿದ ಹುಡುಗನನ್ನು ಪೊಲೀಸರು ಹೊಗಳಿದ್ದಾರೆ. ಆದರೆ ಎಷ್ಟೇ ಹೋರಾಡಿದರೂ ತನ್ನ ತಂದೆಯ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗದೆ ಆತ ದುಃಖಿಸುತ್ತಿದ್ದಾನೆ.