ಚೆನ್ನೈ: ಪರಸ್ಪರ ದೂರವಾಗಿ ಎರಡು ವರ್ಷಗಳ ಬಳಿಕ ನಟ ಧನುಷ್ (Dhanush) ಮತ್ತು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ (Aishwaryaa Rajinikanth ) ಅವರು ಅಧಿಕೃತವಾಗಿ ವಿಚ್ಛೇದನ (divorce) ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಮಕ್ಕಳ ಪಾಲನೆ ಪೋಷಣೆ ಪ್ರಾಥಮಿಕ ಅಧಿಕಾರ ತನಗೆ ಸಿಗುವ ನೀರಿಕ್ಷೆಯೊಂದಿಗೆ ಐಶ್ವರ್ಯಾ ಸೌಹಾರ್ದಯುತವಾಗಿ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ (chennai family court) ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ವಿಚ್ಛೇದನಕ್ಕೆ ಎರಡು ವರ್ಷಗಳ ಮೊದಲೇ ಬೇರ್ಪಟ್ಟಿರುವ ಅವರು ತಾವಿಬ್ಬರೂ ಬೇರೆಬೇರೆಯಾಗಿಯೇ ಜೀವನದಲ್ಲಿ ಮುಂದುವರಿಯಬೇಕು ಎಂದು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಅವರಿಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಧನುಷ್ ಹಾಗೂ ಐಶ್ವರ್ಯಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಮದುವೆಯಾಗಿ ಬರೋಬ್ಬರಿ 18 ವರ್ಷಗಳ ಬಳಿಕ ದೂರಾಗುತ್ತಿರುವುದಾಗಿ ಹೇಳಿದ್ದರು. ವಿಚ್ಛೇದನ ವಿಚಾರ ಘೋಷಣೆ ಬಳಿಕ ಇಬ್ಬರು ತಮ್ಮ ಮಕ್ಕಳ ಶಾಲೆಯ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ಇತ್ತೀಚೆಗೆ ʻಲಾಲ್ ಸಲಾಂʼ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿದ್ದರು. ಇದರಲ್ಲಿ ರಜನಿಕಾಂತ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: Syed Abdul Rahim: ಯಾರು ʼಮೈದಾನ್ʼ ಚಿತ್ರದ ಈ ಅಸಲಿ ಹೀರೊ ಸೈಯದ್ ಅಬ್ದುಲ್ ರಹೀಮ್?
ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಇವರ ಮಧ್ಯೆ ನ್ಯಾಯಾಲಯದಲ್ಲಿ ಯಾವುದೇ ಜಗಳ ಇರುವುದಿಲ್ಲ. ಅವರಿಬ್ಬರೂ ಇದನ್ನು ಶಾಂತಿಯನ್ನು ನಡೆಸಲು ತೀರ್ಮಾನಿಸಿದ್ದಾರೆ. ಇನ್ನು ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂಬುದನ್ನು ಇಬ್ಬರೂ ಒಪ್ಪಿಕೊಂಡರು. ಪರಸ್ಪರ ಗೌರವವನ್ನು ಹೊಂದಿರುವ ಅವರು ವಿಚ್ಛೇದನ ಪ್ರಕ್ರಿಯೆಯನ್ನು ಸೌಹಾರ್ದಯುತ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.
ಮಕ್ಕಳ ಸುಪರ್ದಿ ಯಾರಿಗೆ?
2004ರಲ್ಲಿ ವಿವಾಹವಾಗಿದ್ದ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರ ಮಕ್ಕಳ ಪಾಲನೆಗೆ ಸಂಬಂಧಿಸಿ ಅವರಿಬ್ಬರೂ ಜವಾಬ್ದಾರಿ ನಿರ್ವಹಿಸಲು ಸಿದ್ಧರಿದ್ದಾರೆ. ಆದರೂ ಮಕ್ಕಳ ಪ್ರಾಥಮಿಕ ಕಸ್ಟಡಿ ಐಶ್ವರ್ಯಾ ಅವರಿಗೆ ಸಿಗುವ ನಿರೀಕ್ಷೆಯಿದೆ. ಇದರಲ್ಲಿ ಧನುಷ್ ಅಧಿಕಾರ ಕೇಳುವುದಿಲ್ಲ. ಮಕ್ಕಳಿಗಾಗಿ ತನ್ನ ಕರ್ತವ್ಯ ನಿರ್ವಹಿಸಲು ಧನುಷ್ ಸದಾ ಸಿದ್ಧನಿರುವುದಾಗಿ ಹೇಳಿಕೊಂಡಿದ್ದು, ವಿಚ್ಛೇದನ ಪ್ರಕ್ರಿಯೆ ಸುಗಮವಾಗಿ ಸಾಗಲು ಅವರಿಬ್ಬರೂ ತಮ್ಮ ಮಕ್ಕಳೊಂದಿಗೆ ಸಕ್ರಿಯ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.
2022ರಲ್ಲೇ ಘೋಷಣೆ
2022ರ ಜನವರಿಯಲ್ಲಿ ಬೇರೆಯಾಗುತ್ತಿದ್ದೇವೆ ಎಂದು ದಂಪತಿ ಘೋಷಿಸಿದ್ದರು. 18 ವರ್ಷಗಳ ಕಾಲ ಸ್ನೇಹಿತರು, ದಂಪತಿಗಳಾಗಿ , ಪೋಷಕರಾಗಿ ಹಿತೈಷಿಗಳಾಗಿ ಒಟ್ಟಿಗೆ ಇದ್ದೆವು. ಈ ಪಯಣ ನಮ್ಮಿಬ್ಬರ ಪ್ರಗತಿ, ತಿಳಿವಳಿಕೆ, ಹೊಂದಾಣಿಕೆ ಮತ್ತು ಪರಸ್ಪರ ಸ್ವೀಕಾರದ ಹಾದಿಯಾಗಿತ್ತು. ಇಂದು ನಾವು ನಮ್ಮ ಪ್ರತ್ಯೇಕ ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಐಶ್ವರ್ಯಾ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ಹಿಡಿಯಲಿದೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ. ಓಂ ನಮಶಿವಾಯ” ಎಂದು ಒಂದೂವರೆ ವರ್ಷದ ಹಿಂದೆ ಧನುಷ್ ಟ್ವೀಟ್ ಮಾಡಿದ್ದರು.