Site icon Vistara News

ಬೆಸ್ಕಾಂ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಚಾಲನೆ; ಹೆಚ್‌ಟಿ ಗ್ರಾಹಕರಿಗೆ ಅನುಕೂಲ

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ ‘ಹೆಚ್‌ಟಿ ಮಿತ್ರ’ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಇಂದು ಚಾಲನೆ ನೀಡಿದರು.
ಬೆಸ್ಕಾಂ ಕಾರ್ಪೋರೇಟ್‌ ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿದ ಸಚಿವರು, “ಹೆಚ್‌ಟಿ ಗ್ರಾಹಕರು ವಿದ್ಯುತ್‌ ಸಂಬಂಧಿತ ಸೇವೆಗಳ ಕೋರಿಕೆಗೆ ಹಾಗೂ ದೂರುಗಳನ್ನು ದಾಖಲಿಸಿ ಪರಿಹಾರ ಕಂಡುಕೊಳ್ಳಲು ಈ ಪೋರ್ಟಲ್‌ ಪಾರದರ್ಶಕ ಮತ್ತು ಪರಿಣಾಮಕಾರಿ ವೇದಿಕೆಯಾಗಲಿದೆ. ಈ ಸೌಲಭ್ಯವು ಬೆಸ್ಕಾಂ ವ್ಯಾಪ್ತಿಯಲ್ಲಿರುವ ಒಟ್ಟು 18,000ಕ್ಕೂ ಹೆಚ್ಚು ಗ್ರಾಹಕರಿಗೆ ಅನುಕೂಲವಾಗಲಿದೆ,” ಎಂದರು.
“ಈ ಮೊದಲು ಹೆಚ್‌ಟಿ ಗ್ರಾಹಕರು ದೂರು ದಾಖಲಿಸಲು 1912 ಸಹಾಯವಾಣಿ ಅವಲಂಬಿಸಬೇಕಿತ್ತು ಅಥವಾ ಖುದ್ದು ಬೆಸ್ಕಾಂ ಕಚೇರಿಗೆ ಭೇಟಿ ನೀಡಬೇಕಿತ್ತು. ಆದರೆ, ಗ್ರಾಹಕರಿಗೆ ತಮ್ಮ ದೂರಿನ ನೈಜ-ಸಮಯದ ಟ್ರ್ಯಾಕಿಂಗ್ ಸಾಧ್ಯವಾಗುತ್ತಿರಲಿಲ್ಲ. ‘ಹೆಚ್‌ಟಿ ಮಿತ್ರ’ ಪೋರ್ಟಲ್‌ ಈ ಎಲ್ಲ ಕೊರತೆಗಳನ್ನು ನೀಗಿಸಲಿದ್ದು, ದೂರು ಪ್ರಕ್ರಿಯೆಯನ್ನು ಒಂದೇ ಡಿಜಿಟಲ್ ವೇದಿಕೆಯಡಿ ಸಂಯೋಜಿಸುತ್ತದೆ. ಗ್ರಾಹಕರು ಲಾಗಿನ್ ಆಗಿ, ದೂರು ದಾಖಲಿಸಿದ ಕೂಡಲೇ ನೈಜ ಸಮಯದಲ್ಲಿ ಅದರ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಈ ಅಪ್ಲಿಕೇಶನ್‌ನಿಂದಲೇ ಗ್ರಾಹಕರ ಮೊಬೈಲ್‌ಗೆ ಎಸ್‌ಎಂಎಸ್‌ ಸಂದೇಶಗಳು ರವಾನೆಯಾಗಲಿದೆ,”ಎಂದು ಪೋರ್ಟಲ್‌ ವಿಶೇಷತೆಯನ್ನು ವಿವರಿಸಿದರು.
“ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್‌ ಪೂರೈಸುವುದು ನಮ್ಮ ಸರ್ಕಾರದ ಆದ್ಯತೆ. ಸಮಸ್ಯೆಗಳು ಕಂಡುಬಂದಾಗ ತ್ವರಿತವಾಗಿ ಸ್ಪಂದಿಸಿ, ದೂರು ಪರಿಹರಿಸಲು ತಂತ್ರಜ್ಞಾನದ ಬಳಕೆ ಮಾಡಲಾಗಿದ್ದು, ಬೆಸ್ಕಾಂ ಇಂಜಿನಿಯರಿಗಳೇ ಇದನ್ನು ಸಿದ್ಧಪಡಿಸಿರುವುದು ಶ್ಲಾಘನೀಯ. ಇಂಥ ಗ್ರಾಹಕ ಸ್ನೇಹಿ ನೀತಿ ಹಾಗೂ ಕ್ರಮಗಳಿಗೆ ಸರ್ಕಾರದ ಬೆಂಬಲ ಸದಾ ಇರುತ್ತದೆ,”ಎಂದು ಸಚಿವರು ಹೇಳಿದರು.
ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, “ಹೆಚ್ಚಿನ ಪ್ರಮಾಣದ ವಿದ್ಯುತ್‌ ಲೋಡ್‌ ಬಳಸುವ ಕೈಗಾರಿಕೆಗಳು, ಐಟಿ ಬಿಟಿ ಉದ್ಯಮ, ವಾಣಿಜ್ಯ ಸಂಕೀರ್ಣಗಳನ್ನು ನಡೆಸುವ ಗ್ರಾಹಕರಿಗೆ ತಂತ್ರಜ್ಞಾನ ಆಧಾರಿತ ಈ ಪಾರದರ್ಶಕ ವ್ಯವಸ್ಥೆಯು ಸಕಾಲಿಕವಾಗಿ ಪರಿಹಾರ ಒದಗಿಸುತ್ತದೆ. ಸುಲಲಿತ ವ್ಯವಹಾರಕ್ಕೆ ಒತ್ತು ನೀಡಿ, ತ್ವರಿತ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಗೆ ಈ ಉಪಕ್ರಮ ಸಾಕ್ಷಿಯಾಗಿದೆ” ಎಂದರು.
‘ಹೆಚ್‌ಟಿ ಮಿತ್ರ’ ವೈಶಿಷ್ಟ್ಯಗಳು:
ಹೆಚ್‌ಟಿ ಗ್ರಾಹಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಮಗ್ರ ಡಿಜಿಟಲ್ ವೇದಿಕೆಯಲ್ಲಿ ಫೋನ್‌ ನಂಬರ್‌ ದಾಖಲಿಸುವ ಮೂಲಕ ಸುಲಭ ನೋಂದಣಿ ಮತ್ತು ಲಾಗಿನ್ ಸಾಧ್ಯ. ಟಿಕೆಟಿಂಗ್‌ ವ್ಯವಸ್ಥೆಯಿರುವ ತ್ವರಿತ ದೂರು ದಾಖಲು ಮತ್ತು ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಈ ವೇದಿಕೆ ಸಕ್ರಿಯಗೊಳಿಸುತ್ತದೆ. ಗ್ರಾಹಕರು ಮತ್ತು ಬೆಸ್ಕಾಂ ಅಧಿಕಾರಿಗಳ ನಡುವೆ ನೇರ ಸಂವಹನವನ್ನು ಈ ಪೋರ್ಟಲ್‌ ಸಾಧ್ಯವಾಗಿಸುತ್ತದೆ. ದೂರು ನಿರ್ವಹಣೆಯ ಪ್ರತಿ ಹಂತದಲ್ಲೂ ಗ್ರಾಹಕರಿಗೆ ಸ್ವಯಂಚಾಲಿತ ಸಂದೇಶಗಳನ್ನೂ ಇದು ರವಾನಿಸುತ್ತದೆ.
ದೂರುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕ್ಷೇತ್ರ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಒದಗಿಸುವ ಜತೆಗೆ ಟ್ರ್ಯಾಕಿಂಗ್‌ ಹಾಗೂ ವರದಿ ವೀಕ್ಷಣೆಗೆ ಅವಕಾಶ ಒದಗಿಸುತ್ತದೆ. ಪೋರ್ಟಲ್‌ನ ಕೇಂದ್ರೀಕೃತ ಡ್ಯಾಶ್‌ಬೋರ್ಡ್‌ ಮೇಲ್ವಿಚಾರಣೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಂದ ಆಗಲಿದೆ. ಅಲ್ಲದೇ, ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ ಪಾಲನೆ ಮಾಡುವುದರಿಂದ ವಿಳಂಬವಾದಾಗ ಎಚ್ಚರಿಕೆ ಸಂದೇಶ ರವಾನೆಯಾಗಿ, ಹೊಣೆಗಾರಿಕೆಯನ್ನು ಖಾತ್ರಿಪಡಿಸುತ್ತದೆ.

Exit mobile version