Site icon Vistara News

Fire Accident : ಬೆಂಗಳೂರು ನಗರ ವಲಯದಲ್ಲಿ ಅರಣ್ಯಕ್ಕೆ ಬೆಂಕಿ, ಭಾರೀ ಹಾನಿ

Fire Accident

ಬೆಂಗಳೂರು: ಮಹಾನಗರದ ಹೊರವಲಯದ ಸುಮನ್ನಹಳ್ಳಿ ಬ್ರಿಡ್ಜ್ ಬಳಿ ಶ್ರೀಗಂಧ ಕಾವಲ್ ನಲ್ಲಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ಮೂರು ಎಕರೆ ಅರಣ್ಯ ಪ್ರದೇಶದಲ್ಲಿ ಹೊತ್ತಿ ಮರಗಳು ಹೊತ್ತಿ ಉರಿದಿವೆ. ಒಣ ಕಸಕ್ಕೆ ಬೆಂಕಿ ಹಾಕಿರುವ ಹಿನ್ನಲೆ ಮರಗಳಿಗೆ ಬೆಂಕಿ ತಗುಲಿದೆ ಎಂದು ಶಂಕಿಸಲಾಗಿದೆ. ಬೆಂಗಳೂರು ನಗರದಲ್ಲಿ ಬೇಸಿಗೆ ಪ್ರಭಾವ ಹೆಚ್ಚಾಗಿದೆ. ಹೀಗಾಗಿ ಕಸಕ್ಕೆ ಹಾಕಿದ ಬೆಂಕಿ ಅರಣಕ್ಕೆ ತಾಗಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ರಾತ್ರಿ ವೇಳೆ ಅರಣ್ಯ ಪ್ರದೇಶಕ್ಕೆ ಬೆಂಕಿ ತಾಗಿದೆ. ಎರಡು ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದೆ. ಅರಣ್ಯವು ಬಿಬಿಎಂಪಿ ವ್ಯಾಪ್ತಿಗೆ ಸೇರಿದ್ದು, ಅದರಲ್ಲಿ 1.5 ಎಕರೆ ಜಾಗಕ್ಕೆ ಸಂಪೂರ್ಣ ಬೆಂಕಿ ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ತೆರವುಗೊಳಿಸಿದ ಮರಗಳನ್ನು ಇಲ್ಲಿ ತಂದು ಡಂಪ್ ಮಾಡಲಾಗುತ್ತಿತ್ತು. ಅದೇ ರೀತಿ ಹೊರಗಡೆ ಮಾರಟ ಮಾಡುವ ಕಟ್ಟಿಗೆಗಳನ್ನು ಇಲ್ಲಿ ತಂದು ಹಾಕಿ ಹರಾಜು ಮಾಡಲಾಗ್ತಿತ್ತು. ಹರಾಜು ಆಗದೇ ಉಳಿದಿದ್ದ ಕಟ್ಟಿಗೆಗಳೆಲ್ಲ ಅರಣ್ಯ ವ್ಯಾಪ್ತಿಯಲ್ಲಿ ರಾಶಿ ಬಿದ್ದಿದ್ದವು. ತೀವ್ರ ಬಿಸಿಲಿನ ಕಾರಣ ಸಂಪೂರ್ಣ ಒಣಗಿದ್ದ ಮರದ ತುಂಡುಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಸಾಧ್ಯತೆಯೂ ಇದೆ ಎಂಬುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸತತ 9 ಗಂಟೆಗಳಿಂದ ನಿರಂತರ ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಉತ್ತರಾಖಂಡದಲ್ಲಿ ಕಾಡಿನ ಬೆಂಕಿ ನಂದಿಸಲು ವಾಯು ಪಡೆಯ ಹೆಲಿಕಾಪ್ಟರ್‌ ಬಳಕೆ


ಡೆಹ್ರಾಡೂನ್‌: ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಕಾಡ್ಗಿಚ್ಚು (Forest Fires) ಶನಿವಾರ ಪೈನ್‌ ಪ್ರದೇಶದ ಹೈಕೋರ್ಟ್‌ ಕಾಲನಿಯ ಸಮೀಪಕ್ಕೂ ವ್ಯಾಪಿಸಿದ್ದು, ನಂದಿಸಲು ಐಎಎಫ್ (Indian Air Force) ಹೆಲಿಕಾಪ್ಟರ್‌ (Air Force Chopper) ಬಳಸಲಾಗಿದೆ. ಸದ್ಯ ಹೆಲಿಕಾಪ್ಟರ್‌ ಕಾರ್ಯಾಚರಣೆಯ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Karnataka Weather : ಹುಷಾರ್‌.. ನಾಲ್ಕೈದು ದಿನ ಮತ್ತಷ್ಟು ಏರಲಿದೆ ಉರಿ ಬಿಸಿಲು; ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

ಅಗ್ನಿಯ ಕೆನ್ನಾಲಗೆ ಅಪಾಯಕಾರಿಯಾಗಿ ವ್ಯಾಪಿಸುತ್ತಿದ್ದು, ಜನವಸತಿ ಪ್ರದೇಶಗಳತ್ತ ನುಗ್ಗ ತೊಡಗಿದೆ. ಪೈನ್‌ನ ಈ ಪ್ರದೇಶದಿಂದ ಸುಮಾರು 5 ಕಿ.ಮೀ. ದೂರಲ್ಲಿ ಸೇನಾ ಕಂಟೋನ್‌ಮೆಂಟ್‌ ಇದ್ದು, ಅಧಿಕಾರಿಗಳ ತ್ವರಿತವಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ʼʼಎಂಐ-17 ವಿ5 (Mi-17 V5) ಹೆಲಿಕಾಪ್ಟರ್‌ ಅನ್ನು ಬೆಂಕಿ ನಿಯಂತ್ರಣ ಕಾರ್ಯಾಚರಣೆಗಾಗಿ ಬಳಸಲಾಗಿದೆʼʼ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಕಾರ್ಯಾಚರಣೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ. “ನೈನಿತಾಲ್ ಬಳಿಯ ವಾಯುಪಡೆ ನಿಲ್ದಾಣದ ಸಮೀಪದ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ನಿಯಂತ್ರಿಸಲು ಐಎಎಫ್‌ ತನ್ನ ವೈಮಾನಿಕ ಸಾಹಸ ಪ್ರದರ್ಶಿಸಿದೆʼʼ ಎಂದು ಐಎಎಫ್ ಬರೆದುಕೊಂಡಿದೆ.

ಕಾರ್ಯಾಚರಣೆ ಹೇಗಿತ್ತು?

ʼʼಹೆಲಿಕಾಪ್ಟರ್ ನೈನಿ ಮತ್ತು ಭೀಮ್ತಾಲ್ ಸರೋವರಗಳಿಂದ ಬಾಂಬಿ ಬಕೆಟ್‌ (Bambi bucket)ನಲ್ಲಿ ನೀರನ್ನು ಸಂಗ್ರಹಿಸಿ ಪೈನ್ಸ್, ಭೂಮಿಧರ್, ಜ್ಯೋಲಿಕೋಟ್, ನಾರಾಯಣ್ ನಗರ, ಭವಾಲಿ, ರಾಮ್ಗಢ್ ಮತ್ತು ಮುಕ್ತೇಶ್ವರ ಪ್ರದೇಶಗಳಲ್ಲಿ ಕಾಣಿಸಿಕೊಂಡ ಬೆಂಕಿಯ ಮೇಲೆ ಸುರಿದಿದೆʼʼ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಕೆಟ್ ಏಕಕಾಲದಲ್ಲಿ 5,000 ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ನೈನಿ ಸರೋವರದಲ್ಲಿ ನೀರಿನ ಮಟ್ಟ ಕಡಿಮೆಯಾದ ಕಾರಣ ದೋಣಿ ವಿಹಾರದ ಚಟುವಟಿಕೆಗಳನ್ನು ಕೆಲವು ದಿನಗಳ ಹಿಂದೆಯೇ ಸ್ಥಗಿತಗೊಳಿಸಲಾಗಿತ್ತು. ಇದೀಗ ಕಾರ್ಯಾಚರಣೆಗಾಗಿ ಭೀಮ್ತಾಲ್ ಸರೋವರದಲ್ಲಿ ದೋಣಿ ವಿಹಾರ ನಿಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ʼʼಬೆಂಕಿಯನ್ನು ನಿಯಂತ್ರಣಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆʼʼ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಅವರು ಬೆಂಕಿ ಆವರಿಸಿರುವ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡಿದ್ದಾರೆ.

Exit mobile version