ಬೆಂಗಳೂರು: ಅಕ್ಷಯ ತೃತೀಯದ ಈ ವಿಶೇಷ ಸಂದರ್ಭದಲ್ಲಿ ಚಿನ್ನ ಖರೀದಿಸುವವರಿಗೆ ಮಾರುಕಟ್ಟೆ ಸಿಹಿ ಸುದ್ದಿ ನೀಡಿದೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಹಾಗೂ ಮಧ್ಯಪ್ರಾಚ್ಯದ ಯುದ್ಧದ ಭೀತಿಯ ನಡುವೆಯೂ ಚಿನ್ನದ ಬೆಲೆ ಇಳಿಕೆ ಹಾದಿ ಹಿಡಿದಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಹಬ್ಬದ ದಿನದಂದು ಬಂಗಾರ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇರುವ ಕಾರಣ, ಬೆಲೆ ಇಳಿಕೆಯು ಜನ ಸಾಮಾನ್ಯರಿಗೆ ತುಸು ನಿರಾಳ ತಂದಿದೆ.
ಬೆಂಗಳೂರಿನ ಇಂದಿನ ಮಾರುಕಟ್ಟೆ ದರದಂತೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 490 ರೂ. ಇಳಿಕೆಯಾಗಿದ್ದು, 1,55,290 ರೂಪಾಯಿಗೆ ತಲುಪಿದೆ. ಇನ್ನು ಆಭರಣ ಚಿನ್ನ ಅಂದರೆ 22 ಕ್ಯಾರೆಟ್‌ನ 10 ಗ್ರಾಂ ಬೆಲೆಯು 450 ರೂ. ಕಡಿಮೆಯಾಗಿ 1,42,350 ರೂಪಾಯಿ ದಾಖಲಾಗಿದೆ. ಈ ಇಳಿಕೆಯು ಅಕ್ಷಯ ತೃತೀಯದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದು, ಜ್ಯುವೆಲ್ಲರಿ ಶಾಪ್‌ಗಳಲ್ಲಿ ಇಂದು ಗ್ರಾಹಕರ ಸಂಖ್ಯೆ ಏರುವ ಸಾಧ್ಯತೆಯಿದೆ.
ಚಿನ್ನದ ಬೆಲೆ ಇಳಿಕೆಯಾಗಿದ್ದರೂ, ಬೆಳ್ಳಿಯ ದರದಲ್ಲಿ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಳ್ಳಿ ಬೆಲೆ ತಟಸ್ಥವಾಗಿದ್ದು, ಒಂದು ಕೆಜಿಗೆ 2,75,000 ರೂಪಾಯಿ ಹಾಗೂ ಒಂದು ಗ್ರಾಂಗೆ 275 ರೂಪಾಯಿ ನಿಗದಿಯಾಗಿದೆ. ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಡಾಲರ್ ಮೌಲ್ಯದ ಏರಿಳಿತದ ನಡುವೆಯೂ ಬಂಗಾರದ ದರ ಇಳಿಕೆಯಾಗಿರುವುದು ಈ ಬಾರಿ ಅಕ್ಷಯ ತೃತೀಯದ ವಿಶೇಷ ಆಕರ್ಷಣೆಯಾಗಿದೆ.

