ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ವಿವಿಧ ಗುಂಪುಗಳಿಗೆ ಒಳ ಮೀಸಲಾತಿ ಜಾರಿ ಮಾಡುವ ಮಹತ್ವದ ನಿರ್ಧಾರವನ್ನು ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಶೇ.15 ರಷ್ಟು ಮೀಸಲಾತಿಯಲ್ಲಿ ದಲಿತ ಎಡಗೈ ಸಮುದಾಯಕ್ಕೆ ಶೇ. 5.25, ದಲಿತ ಬಲಗೈ ಸಮುದಾಯಕ್ಕೆ ಶೇ. 5.25, ಇತರೆ ಸಮುದಾಯಗಳಿಗೆ (ಅಲೆಮಾರಿ, ಅರೆ ಅಲೆಮಾರಿ, ಸ್ಪೃಶ್ಯ ಜಾತಿಗಳು) ಶೇ.4.5 ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇಂದು ನಡೆದ ಸಚಿವ ಸಂಪುಟದಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ನಂತರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸುದ್ದಿಗೋಷ್ಠಿಯಲ್ಲಿ ಸಚಿವ ಸಂಪುಟದ ನಿರ್ಣಯವನ್ನು ವಿವರಿಸಿದರು.
ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಎಡ ಸಮುದಾಯದಲ್ಲಿ 18 ಪ್ರಮುಖ ಜಾತಿಗಳಿವೆ. ಬಲಗೈ ಸಮುದಾಯದಲ್ಲಿ 20 ಜಾತಿಗಳಿವೆ. ಸ್ಪೃಶ್ಯ ಸಮುದಾಯದಲ್ಲಿ 63 ಜಾತಿಗಳಿವೆ. ಶೇ.17ರ ಬದಲಿಗೆ ಶೇ.15 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಮೀಸಲಾತಿ ಶೇ.50 ಮೀರುವಂತಿಲ್ಲ. ಹಾಗಾಗಿ ಸರ್ಕಾರ ಈ ಮಿತಿಯೊಳಗೆ ಮೀಸಲಾತಿ ಹಂಚಿಕೆ ಮಾಡಿದೆ.
ಸರ್ಕಾರದ ನಿರ್ಧಾರ ಪ್ರಕಟವಾಗುತಿದ್ದಂತೆ ಮಾಜಿ ಸಚಿವ ಎಚ್. ಆಂಜನೇಯ ಸಿಹಿ ಹಂಚಿ ಸಂಭ್ರಮಿಸಿದರು. ಈ ಮೂಲಕ ಒಳ ಮೀಸಲಾತಿಗಾಗಿ ನಡೆದ ಮೂರು ದಶಕಗಳ ಹೋರಾಟಕ್ಕೆ ಜಯ ಲಭಿಸಿದೆ.
ಸಿದ್ದರಾಮಯ್ಯ ಮಾತನಾಡಿ ಒಳಮೀಸಲಾತಿ ವಿಚಾರವಾಗಿ ಸುದೀರ್ಘವಾಗಿ ಹೋರಾಟ ನಡೆದಿದೆ. ನಂತರ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಲಾಗಿತ್ತು. ಎಐಸಿಸಿ ಅಧ್ಯಕ್ಷ ಖರ್ಗೆಯವರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಸಮಾವೇಶದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲ ಸಮುದಾಯಗಳು ಭಾಗಿಯಾಗಿದ್ದವು. ಒಳ ಮೀಸಲಾತಿ ಜಾರಿಗೆ ಸಮಾವೇಶದಲ್ಲಿ ಎಲ್ಲರೂ ಒಪ್ಪಿಕೊಂಡಿದ್ದೆವು ಎಂದು ಹೇಳಿದರು.
ಒಳ ಮೀಸಲಾತಿ ಹಂಚಿಕೆ: ಎಡಗೈ, ಬಲಗೈ ಜಾತಿಗಳಿಗೆ ತಲಾ ಶೇ. 5.25 ಸ್ಪೃಶ್ಯ ಜಾತಿಗೆ ಶೇ.4.5 ಹಂಚಿಕೆ; ಸಚಿವ ಸಂಪುಟ ಮಹತ್ವದ ನಿರ್ಧಾರ

