- – ಆರ್ ಕೆ ಬಾಲಚಂದ್ರ
- ಲೇಖಕರು, ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ , ಸಾಫ್ಟ್ ಸ್ಕಿಲ್ ತರಬೇತುದಾರರು, ವೃತ್ತಿ ಮಾರ್ಗದರ್ಶಕರು
ಬ್ಯಾಂಕ್‌ಗಳಲ್ಲಿ ಗುಮಾಸ್ತ (ಕ್ಲರ್ಕ್) ಹುದ್ದೆಗೆ ಸೇರಬೇಕು ಎಂಬ ಕನಸು ಹೊತ್ತವರಿಗೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್ ) ಸಿಹಿ ಸುದ್ದಿಯೊಂದನ್ನು ನೀಡಿದೆ. ದೇಶದ ಹನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿಯಿರುವ ಕ್ಲರಿಕಲ್ ಕೇಡರ್ ಹುದ್ದೆಗಳ ನೇಮಕಕ್ಕಾಗಿ ‘ಸಾಮಾನ್ಯ ಪ್ರವೇಶ ಪರೀಕ್ಷೆ’(CRP ಗುಮಾಸ್ತರು–XIV)ನಡೆಸುತ್ತಿದ್ದು, ಸೋಮವಾರ ಅಧಿಸೂಚನೆ ಹೊರಡಿಸಿದೆ. ಈ ಬಾರಿ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿಯಿರುವ 6128 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ನಮ್ಮ ರಾಜ್ಯದಲ್ಲಿ 457 ಹುದ್ದೆಗಳು ಖಾಲಿ ಇವೆ. ಎಂದಿನಂತೆ, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನವಾಗಿರುತ್ತದೆ. ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯಿದ್ದು ಪೂರ್ವಭಾವಿ ಪರೀಕ್ಷೆ, ಹಾಗೂ ಮುಖ್ಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಈ ವರ್ಷದ ಸೆಪ್ಟೆಂಬರ್ನಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು ಅಕ್ಟೋಬರ್ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ. ನಮ್ಮ ರಾಜ್ಯದವರಿಗೆ ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲೂ ಪರೀಕ್ಷೆ ಬರೆಯುವ ಅವಕಾಶ ನೀಡಲಾಗಿದೆ. ರಾಜ್ಯದ 457 ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ 75, ಪರಿಶಿಷ್ಟ ಪಂಗಡಕ್ಕೆ 39, ಹಿಂದುಳಿದ ವರ್ಗದವರಿಗೆ 108, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 44 ಹಾಗೂ ಸಾಮಾನ್ಯ ವರ್ಗದವರಿಗೆ 191 ಹುದ್ದೆಗಳನ್ನು ಮೀಸಲಿಡಲಾಗಿದೆ.
ರಾಜ್ಯದ ಯಾವ ಬ್ಯಾಂಕ್, ಎಷ್ಟು ಹುದ್ದೆ?
ರಾಜ್ಯದ ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆಗಳು? | ||
ಕ್ರಮ ಸಂಖ್ಯೆ | ಬ್ಯಾಂಕ್ನ ಹೆಸರು | ಹುದ್ದೆಗಳು |
1 | ಬ್ಯಾಂಕ್ ಆಫ್ ಇಂಡಿಯಾ | 5 |
2 | ಕೆನರಾ ಬ್ಯಾಂಕ್ | 364 |
3 | ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | 49 |
4 | ಇಂಡಿಯನ್ ಓವರ್ಸೀಸ್ ಬ್ಯಾಂಕ್ | 14 |
5 | ಪಂಜಾಬ್ ನ್ಯಾಷನಲ್ ಬ್ಯಾಂಕ್ | 15 |
6 | ಪಂಜಾಬ್ ಆ್ಯಂಡ್ ಸಿಂಥ್ ಬ್ಯಾಂಕ್ | 10 |
ಒಟ್ಟು | 457 |
ಜುಲೈ 1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಜುಲೈ 21, 2024 ಕೊನೆ ದಿನ.
ಅರ್ಜಿ ಸಲ್ಲಿಸಲು ಹಾಗೂ ನೋಂದಣಿಗೆ ಬಳಸಬೇಕಾದ ಲಿಂಕ್: www.ibps.in ಅಥವಾ https://ibpsonline.ibps.in/crpcl14jun24/
ಶೈಕ್ಷಣಿಕ ಅರ್ಹತೆ: (21.07.2024 ಕ್ಕೆ ಅನ್ವಯಿಸುವಂತೆ)
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನೂ ಹೊಂದಿರಬೇಕು (ಕಂಪ್ಯೂಟರ್ ಗೆ ಸಂಬಂಧಿಸಿದ ವಿಷಯದಲ್ಲಿ ಸರ್ಟಿಫಿಕೇಟ್/ ಡಿಪ್ಲೊಮಾ ಅಥವಾ ಡಿಗ್ರಿ ಪಡೆದಿರುವುದು ಅಥವಾ ಶಾಲೆ ಅಥವಾ ಕಾಲೇಜಿನಲ್ಲಿ ಕಂಪ್ಯೂಟರ್ ಅಥವಾ ಐಟಿ (InformationTechnology) ಯನ್ನು ಒಂದು ವಿಷಯವಾಗಿ ಓದಿರಬೇಕು. ಅಲ್ಲದೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಮಾತನಾಡುವ, ಬರೆಯುವ ಸಾಮರ್ಥ್ಯ ಹೊಂದಿರಬೇಕು. ಪದವಿ ಪೂರ್ಣ ಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ.
ಇದನ್ನೂ ಓದಿ: Job Alert: ಬೆಂಗಳೂರಿನಲ್ಲಿದೆ ಉದ್ಯೋಗಾವಕಾಶ; 10, 12ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ
ವಯೋಮಿತಿ: ಕನಿಷ್ಠ 20 ವರ್ಷಗಳು ಗರಿಷ್ಠ 28 ವರ್ಷಗಳು. (01.07.2024 ಕ್ಕೆ ಅನ್ವಯಿಸುವಂತೆ). ಅಂದರೆ ಅಭ್ಯರ್ಥಿಗಳು 1996 ರ ಜುಲೈ 2 ಮತ್ತು 2004 ರ ಜುಲೈ 1 ರ ನಡುವೆ ಜನಿಸಿರಬೇಕು.ಸರ್ಕಾರದ ನಿಯಮದಂತೆ ಎಸ್ ಸಿ/ ಎಸ್ ಟಿ ಅಭ್ಯ ರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ: GST ಒಳಗೊಂಡಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹850. ಎಸ್ ಸಿ/ಎಸ್ ಟಿ/ಅಂಗವಿಕಲ ಅಭ್ಯರ್ಥಿಗಳು/ಮಾಜಿ ಯೋಧರಿಗೆ ₹175.ಬ್ಯಾಂಕ್ ಸೇವಾ ಶುಲ್ಕ ಮತ್ತು ಇಂಟಿಮೇಷನ್ ಫೀ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.
ಶುಲ್ಕಪಾವತಿ: ನೋಂದಣಿ ನಂತರ ಅಭ್ಯ ರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಆನ್ ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
ನೆನಪಿಡಿ: ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯ ರ್ಥಿಗಳು ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಆನ್ ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗ ವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗ ಸೂಚಿಗಳ ಪ್ರಕಾರ ಕೆನೆರಹಿತ ಲೇಯರ್ (Non cremy layer) ಷರತ್ತಿನೊಂದಿಗೆ ಒಬಿಸಿ ಪ್ರಮಾಣಪತ್ರ ವನ್ನು ಹೊಂದಿರಬೇಕು.
ಪರೀಕ್ಷಾ ಪ್ರಕ್ರಿಯೆ: ಇದೇ ಆಗಸ್ಟ್ ನಲ್ಲಿ ಪೂರ್ವ ಭಾವಿ ಪರೀಕ್ಷೆ, ಅಕ್ಟೋಬರ್ ನಲ್ಲಿ ಮುಖ್ಯ ಪರೀಕ್ಷೆಗಳು ನಡೆಯಲಿದ್ದು ಎರಡೂ ಪರೀಕ್ಷೆಗಳು ಆನ್ ಲೈನ್ ನಲ್ಲಿ ನಡೆಯಲಿದೆ.
ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿ?: ರಾಜ್ಯದ 10 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು 5 ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆಗಳು ಆನ್ ಲೈನ್ ನಲ್ಲಿ ನಡೆಯಲಿದೆ.
ಪೂರ್ವಭಾವಿ ಪರೀಕ್ಷೆ: ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ,ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ,ಉಡುಪಿ.
ಮುಖ್ಯ ಪರೀಕ್ಷೆ: ಬೆಂಗಳೂರು,ಧಾರವಾಡ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು
ಪೂರ್ವಭಾವಿ ಪರೀಕ್ಷೆಗೆ ತರಬೇತಿ
ಐಬಿಪಿಎಸ್‌ನ ಎಲ್ಲ ನೇಮಕಾತಿ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ.ಕ್ಲರ್ಕ್ ಹುದ್ದೆಗಳ ನೇಮಕಾತಿಗೆ 2024 ರ ಅಗಸ್ಟ್ 12 ರಿಂದ 17 ರವರೆಗೆ ತರಬೇತಿಗೆಂದು ದಿನಾಂಕ ನಿಗದಿ ಮಾಡಲಾಗಿದೆ. ಪರಿಶಿಷ್ಟರು, ಅಂಗವಿಕಲರು, ಹಿಂದುಳಿದವರರು ಹಾಗೂ ಅಲ್ಪಸಂಖ್ಯಾತ, ಮಾಜಿ ಸೈನಿಕರಿಗೆ ಈ ಸೌಲಭ್ಯ ಒದಗಿಸಲಾಗುತ್ತದೆ. ಒಂದು ವೇಳೆ ಅಭ್ಯರ್ಥಿಗಳು ಪರೀಕ್ಷಾ ಪೂರ್ವ ತರಬೇತಿ ಬಯಸಿದಲ್ಲಿ ಅಂಥವರು ಆನ್‌ಲೈನ್ ಅರ್ಜಿ ಸಲ್ಲಿಸುವಾಗಲೇ ತರಬೇತಿ ಪಡೆಯುವ ಬಗ್ಗೆ ಅರ್ಜಿಯಲ್ಲಿ ನಮೂದಿಸಬೇಕು.
ರಾಜ್ಯದಲ್ಲಿ 4 ಪೂರ್ವಭಾವಿ ಪರೀಕ್ಷಾ ತರಬೇತಿ ಕೇಂದ್ರಗಳು:
ರಾಜ್ಯದ ಬೆಂಗಳೂರು, ಮೈಸೂರು ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಈ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ಸ್ಥಳದ ಖರ್ಚು ವೆಚ್ಚ ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ.
ಕ್ರೆಡಿಟ್ ಇತಿಹಾಸ
(i) ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅವರು ಆರೋಗ್ಯಕರ ಕ್ರೆಡಿಟ್ ಇತಿಹಾಸ (Credit History) ಹೊಂದಿರಬೇಕು. ಬ್ಯಾಂಕ್‌ಗೆ ಸೇರುವ ಸಮಯದಲ್ಲಿ ಕನಿಷ್ಠ ಸಿಬಿಲ್ (CIBIL)ಸ್ಕೋರ್ ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಕನಿಷ್ಠ ಕ್ರೆಡಿಟ್ ಸ್ಕೋರ್ ಭಾಗವಹಿಸುವ ಬ್ಯಾಂಕ್ ಗಳ ನೀತಿಯ ಪ್ರಕಾರ ಇರುತ್ತದೆ. ಕಾಲಕಾಲಕ್ಕೆ ಅವುಗಳನ್ನ ತಿದ್ದುಪಡಿ ಮಾಡಲಾಗುತ್ತದೆ.
(ii) ಹುದ್ದೆಗೆ ಸೇರ್ಪಡೆಗೊಳ್ಳುವ ದಿನಾಂಕದ ಮೊದಲು CIBIL ಸ್ಥಿತಿ ನವೀಕರಿಸಬೇಕು ಅಥವಾ CIBIL ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ ನಿರಾಪೇಕ್ಷಣಾ ಪತ್ರ (NOC)ಗಳನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ /ರದ್ದುಗೊಳಿಸಲಾಗುತ್ತದೆ.
ಗಮನಿಸಿ: ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರದ ಅಭ್ಯರ್ಥಿಗಳು CIBIL ಸ್ಥಿತಿಯನ್ನು ಒದಗಿಸುವ ಅಗತ್ಯ ವಿಲ್ಲ.
ಈ ದಿನಗಳು ನೆನಪಿರಲಿ
- ಪೂರ್ವಭಾವಿ ಪರೀಕ್ಷೆಯ ಪ್ರವೇಶಪತ್ರ ಬಿಡುಗಡೆ : ಆಗಸ್ಟ್ 2024
- ಪೂರ್ವಭಾವಿ ಆನ್‌ಲೈನ್ ಪರೀಕ್ಷೆ :ಆಗಸ್ಟ್ 2024
- ಪೂರ್ವಭಾವಿ ಪರೀಕ್ಷೆಯ ಫಲಿತಾಂಶ :ಸೆಪ್ಟೆಂಬರ್, 2024
- ಮುಖ್ಯ ಪರೀಕ್ಷೆಯ ಪ್ರವೇಶಪತ್ರ ಬಿಡುಗಡೆ: ಸೆಪ್ಟೆಂಬರ್/ಅಕ್ಟೋಬರ್, 2024
- ಮುಖ್ಯ ಪರೀಕ್ಷೆಯ ಆಯೋಜನೆ: ಅಕ್ಟೋಬರ್, 2024
- ಪ್ರಾತಿನಿಧಿಕ ಹುದ್ದೆ ಹಂಚಿಕೆ : ಎಪ್ರಿಲ್ 2025
- ಅರ್ಜಿ ಸಲ್ಲಿಕೆ, ಹಾಗೂ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 21.07.2024
ಇದನ್ನೂ ಓದಿ: Job Alert: ಇಂಡಿಯನ್ ಹೈವೇ ಮ್ಯಾನೇಜ್‌ಮೆಂಟ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಇಂದೇ ಅಪ್ಲೈ ಮಾಡಿ
ಅರ್ಜಿ ಸಲ್ಲಿಸುವಾಗ
ಅಭ್ಯರ್ಥಿ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಆನ್ ಲೈನ್ ಅರ್ಜಿ ನಮೂನೆಯಲ್ಲಿ ಬ್ಯಾಂಕ್ ಆದ್ಯತೆಯ ಆದೇಶವನ್ನು ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು. ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ/ಜಿಲ್ಲೆಗಳಲ್ಲಿ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ನಂತರದ ದಿನಗಳಲ್ಲಿ ಬ್ಯಾಂಕ್/ಸ್ಥಳ ಬದಲಾವಣೆಗಾಗಿ ಸಲ್ಲಿಸುವ ವಿನಂತಿಯನ್ನು ಪರಿಗಣಿಸಲಾಗುವುದಿಲ್ಲ. ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್ ಮೆಂಟ್ ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯ ರ್ಥಿಯ ಉಮೇದುವಾರಿಕೆಯನ್ನ ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.
ಪರೀಕ್ಷೆಗಳ ಸ್ವರೂಪ ಹೀಗಿದೆ:
ಪೂರ್ವ ಭಾವಿ ಪರೀಕ್ಷೆ:
ಕ್ರಮ ಸಂಖ್ಯೆ | ಪರೀಕ್ಷೆಗಳ ಹೆಸರು | ಪರೀಕ್ಷೆಯ ಮಾಧ್ಯಮ | ಪ್ರಶ್ನೆಗಳು | ಗರಿಷ್ಠ ಅಂಕಗಳು | ಪ್ರತಿಪರೀಕ್ಷೆಗೆ ಪ್ರತ್ಯೇಕವಾಗಿನಿಗದಿಪಡಿಸಲಾದ ಸಮಯ |
1 | ಆಂಗ್ಲಭಾಷೆ | ಇಂಗ್ಲಿಷ್ | 30 | 30 | 20 ನಿಮಿಷಗಳು |
2 | ಸಂಖ್ಯಾತ್ಮಕಸಾಮರ್ಥ್ಯ(Numerical Ability) | ಕನ್ನಡ, ಕೊಂಕಣಿ, ಇಂಗ್ಲಿಷ್ಮತ್ತುಹಿಂದಿ –ಇವುಗಳಲ್ಲಿ ಯಾವುದಾದರೊಂದುಭಾಷೆಯಆಯ್ಕೆ | 35 | 35 | 20 ನಿಮಿಷಗಳು |
3 | ತಾರ್ಕಿಕಸಾಮರ್ಥ್ಯ | 35 | 35 | 20 ನಿಮಿಷಗಳು | |
ಒಟ್ಟು | 100 | 100 | 60 ನಿಮಿಷಗಳು |
ಕನ್ನಡದಲ್ಲಿ ಪರೀಕ್ಷೆ
ಕರ್ನಾಟಕದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜೊತೆಗೆ ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಭಾಷೆ ನಮೂದಿಸಬೇಕು.(ಪರೀಕ್ಷಾ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶವಿಲ್ಲ ಎಂಬುದನ್ನು ಮರೆಯದಿರಿ)
ಹೇಗೆ ಭಿನ್ನವಾಗಿವೆ?
ಸಂಖ್ಯಾ ಸಾಮರ್ಥ್ಯ ಪರೀಕ್ಷೆಯು ಒಂದು ಮೂಲಭೂತ ಕೌಶಲ. ಇದರ ಮೂಲಕ ಸಂಖ್ಯೆಗಳ ವಿಷಯದಲ್ಲಿ ಅಭ್ಯರ್ಥಿಗಿರುವ ವೇಗ ಹಾಗೂ ನಿಖರತೆಯನ್ನು ಪರೀಕ್ಷಿಸಲಾಗುತ್ತದೆ. ಸಂಖ್ಯಾ ಸಾಮರ್ಥ್ಯ ಪರೀಕ್ಷೆಯಲ್ಲಿ, ಲೆಕ್ಕಾಚಾರದ ಸಾಮರ್ಥ್ಯ ಮತ್ತು ನಿಖರತೆಯನ್ನು ಸರಳ ಸಂಖ್ಯೆಯ ಪ್ರಶ್ನೆಗಳ ಮೂಲಕ ಪರೀಕ್ಷಿಸಲಾಗುತ್ತದೆ.
ಕ್ಲಿಷ್ಟತೆಯ ಮಟ್ಟ :
ಸಂಖ್ಯಾತ್ಮಕ ಸಾಮರ್ಥ್ಯ ಪರೀಕ್ಷೆಯಲ್ಲಿ ಸರಳೀಕರಣ, ಸಂಖ್ಯಾ ಸರಣಿ, ಅಂಕಗಣಿತದ ಪ್ರಶ್ನೆಗಳು, ಬೀಜಗಣಿತದ ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆ ಮೂಲಕ ಅಭ್ಯರ್ಥಿಗೆ ಸಂಖ್ಯೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಆ ಪ್ರಶ್ನೆಗಳಲ್ಲಿ ತಾರ್ಕಿಕ ಅಂಶವಿರುವುದಿಲ್ಲ.
ಅಭ್ಯರ್ಥಿಗಳು ಐಬಿಪಿಎಸ್ ನಿರ್ಧರಿಸಿದಂತೆ ಮೂರು ಪರೀಕ್ಷೆಗಳಲ್ಲಿಯೂ ಕಟ್-ಆಫ್ ಅಂಕಗಳನ್ನು ಪಡೆಯುವದರ ಮೂಲಕ ಅರ್ಹತೆ ಪಡೆಯಬೇಕು. ಪ್ರತಿ ವರ್ಗದಲ್ಲಿ ಸಾಕಷ್ಟು ಸಂಖ್ಯೆಯ ಅಭ್ಯರ್ಥಿಗಳು ಐಬಿಪಿಎಸ್ ಪರೀಕ್ಷೆಯಲ್ಲಿ ಭಾಗವಹಿಸುವುದರಿಂದ ಕೇವಲ ಪಾಸಾದರೆ ಸಾಕಾಗುವುದಿಲ್ಲ. ಅವಶ್ಯಕತೆಗಳಿಗೆ ತಕ್ಕಂತೆ ಆನ್‌ಲೈನ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಅಭ್ಯರ್ಥಿಗಳನ್ನು ಮಾತ್ರ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
ಮುಖ್ಯ ಪರೀಕ್ಷೆ:
ಕ್ರಮ ಸಂಖ್ಯೆ | ಪರೀಕ್ಷೆಗಳ ಹೆಸರು (ಅನುಕ್ರಮದಿಂದ ಅಲ್ಲ) | ಪರೀಕ್ಷೆ ಮಧ್ಯಮ | ಪ್ರಶ್ನೆಗಳು | ಗರಿಷ್ಠ ಅಂಕಗಳು | ಪ್ರತಿಪರೀಕ್ಷೆಗೆ ಪ್ರತ್ಯೇಕವಾಗಿನಿಗದಿಪಡಿಸಲಾದ ಸಮಯ |
1 | ಆಂಗ್ಲಭಾಷೆ | ಆಂಗ್ಲ | 40 | 40 | 35 ನಿಮಿಷಗಳು |
2 | ಸಾಮಾನ್ಯ/ಹಣಕಾಸುಅರಿವು | ಕನ್ನಡ, ಕೊಂಕಣಿ, ಇಂಗ್ಲಿಷ್ಮತ್ತುಹಿಂದಿ –ಇವುಗಳಲ್ಲಿ ಯಾವುದಾದರೊಂದುಭಾಷೆಯಆಯ್ಕೆ | 50 | 50 | 35 ನಿಮಿಷಗಳು |
3 | ತಾರ್ಕಿಕಸಾಮರ್ಥ್ಯ& ಕಂಪ್ಯೂಟರ್ಆಪ್ಟಿಟ್ಯೂಡ್ | 50 | 60 | 45 ನಿಮಿಷಗಳು | |
4 | ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ | 50 | 50 | 45 ನಿಮಿಷಗಳು | |
ಒಟ್ಟು | 190 | 200 | 160 ನಿಮಿಷಗಳು |
ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ, ಪ್ರಶ್ನೆ ಅರ್ಥಮಾಡಿಕೊಳ್ಳುವುದರ ಜೊತೆಗೆ ಅದನ್ನ ಬಿಡಿಸಲು ಜ್ಞಾನದ ಮೂಲವನ್ನು (Basic concept) ಅನ್ವಯಿಸುವುದು ಮುಖ್ಯ ಉದ್ದೇಶವಾಗಿದೆ. ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಬೀಜಗಣಿತ ಮತ್ತು ಅಭಿವ್ಯಕ್ತಿಗಳನ್ನು ಒಳಗೊಂಡಿರುವ ಪ್ರಶ್ನೆಗಳನ್ನು ಹೊಂದಿದೆ. ಇದರಲ್ಲಿ ಪ್ರಶ್ನೆಗಳನ್ನು ಬಿಡಿಸಲು ಅಭ್ಯರ್ಥಿಗಳು ತರ್ಕ ಮತ್ತು ಜ್ಞಾನವನ್ನು ಅನ್ವಯಿಸುವ ಅಗತ್ಯವಿದೆ.
ಕ್ಲಿಷ್ಟತೆಯ ಮಟ್ಟ
ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ವಿಷಯದಲ್ಲಿ ತಾರ್ಕಿಕ ಅರ್ಹತೆ ಮತ್ತು ಸಂಖ್ಯೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಇದು ಎರಡೂ ವಿಷಯಗಳ ಸಂಯೋಜನೆ. ಇದರಲ್ಲಿ ಪ್ರಶ್ನೆಗಳು ತುಂಬಾ ಕಠಿಣವಾಗಿರುವುದಿಲ್ಲ, ಆದರೆ ಇವುಗಳನ್ನು ಬಿಡಿಸಲು ಹೆಚ್ಚು ಅಭ್ಯಾಸ ಮಾಡಿರಬೇಕು. ಆದ್ದರಿಂದ ನೀವು ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ ಸಮಯವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಅರಿಯುವಿರಿ. ಆದರೆ ಚಕ್ರ ಬಡ್ಡಿ(compound interest) ಕುರಿತ ಪ್ರಶ್ನೆಗಳು ಬಿಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಅವುಗಳನ್ನು ವಿಭಾಗದ ಕೊನೆಯಲ್ಲಿ ಬಿಡಿಸಬೇಕು.
ಋಣಾತ್ಮಕ ಮೌಲ್ಯಮಾಪನ ಇದೆ
ಪೂರ್ವ ಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ ಎರಡೂ ವಸ್ತುನಿಷ್ಠ ಮಾದರಿಯ ಪರೀಕ್ಷೆಗಳಾಗಿದ್ದು ಋಣಾತ್ಮಕ ಮೌಲ್ಯಮಾಪನ ಇದೆ. ಒಂದು ತಪ್ಪು ಉತ್ತರಕ್ಕೆ, ಅದಕ್ಕೆ ನಿಗದಿಪಡಿಸಿದ ಅಂಕಗಳಲ್ಲಿ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಪ್ರಶ್ನೆ ಖಾಲಿ ಬಿಟ್ಟರೆ, ಯಾವುದೇ ಅಂಕ ಕಳೆಯುವುದಿಲ್ಲ.
ಪ್ರತಿ ಅಭ್ಯರ್ಥಿಯು ಆನ್‌ಲೈನ್ ಮುಖ್ಯ ಪರೀಕ್ಷೆಯ ಪ್ರತಿ ಪರೀಕ್ಷೆಯಲ್ಲಿ ಕನಿಷ್ಠ ಸ್ಕೋರ್ ಪಡೆಯಬೇಕಾಗುತ್ತದೆ. ಹಾಗೂ ಒಟ್ಟಾರೆ ಕನಿಷ್ಟ ಅಂಕ ಕೂಡ ಪಡೆಯಬೇಕಾದ ಅನಿವಾರ್ಯತೆ ಇದೆ. ಪ್ರತಿ ರಾಜ್ಯದಲ್ಲಿರುವ ಖಾಲಿ ಹುದ್ದೆಗಳನ್ನು ಆಧರಿಸಿ, ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ತಯಾರಿಸಲಾಗುತ್ತದೆ. ಅದರ ವಿವರಗಳನ್ನು ಅಧಿಕೃತ ಐಬಿಪಿಎಸ್ ವೆಬ್‌ಸೈಟ್‌ನಲ್ಲಿ ನಂತರ ಲಭ್ಯವಾಗುವಂತೆ ಮಾಡಲಾಗುತ್ತದೆ.
ಪೂರ್ವಭಾವಿ ಪರೀಕ್ಷೆ ಅರ್ಹತಾ ಸ್ವರೂಪದ್ದಾಗಿದ್ದು, ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನಷ್ಟೇ ಮೆರಿಟ್ ಪಟ್ಟಿಗೆ ಪರಿಗಣಿಸಲಾಗುತ್ತದೆ.ಮುಖ್ಯ ಪರೀಕ್ಷೆಯ 200 ಅಂಕಗಳನ್ನು ನೂರಕ್ಕೆ ಇಳಿಸಿ ಮೆರಿಟ್ ಪಟ್ಟಿ ರಚಿಸಲಾಗುತ್ತದೆ. ಈ ಕಾರಣಕ್ಕಾಗಿ ಹೆಚ್ಚಿನ ಅಂಕಗಳಿಸುವತ್ತ ಅಭ್ಯರ್ಥಿಗಳು ಗಮನ ನೀಡಬೇಕಾಗುತ್ತದೆ.ಹುದ್ದೆಗಳಿಗೆ ಆಯ್ಕೆ ಮಾಡುವಾಗ ಮುಖ್ಯ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು.
ಇನ್ನೊಂದಿಷ್ಟು ಮಾಹಿತಿ…
ಲಿಖಿತ ದೃಢೀಕರಣ:
ಅರ್ಜಿ ಸಲ್ಲಿಕೆಯ ವೇಳೆ ಕೈಬರಹದ ಘೋಷಣೆಯ ಪಠ್ಯ ಈ ರೀತಿಯಲ್ಲಿ ಬರೆದು ಅಪ್‌ಲೋಡ್ ಮಾಡಬೇಕು:
(ಅಭ್ಯ ರ್ಥಿಯ ಹೆಸರು),. …….. ಆದ ನಾನು ಈ ಮೂಲಕ ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ ಮತ್ತು ನಿಜ ಮಾನ್ಯವಾಗಿದೆ ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೂರಕ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ. ಲಿಖಿತ ಘೋಷಣೆಯು ಇಂಗ್ಲಿಷ್ ನಲ್ಲಿ ಮಾತ್ರ ಇರಬೇಕು. ಕ್ಯಾಪಿಟಲ್ ಲೆಟರ್ಸ್‌ನಲ್ಲಿ ಇರಬಾರದು. ಕ್ಯಾಪಿಟಲ್ ಲೆಟರ್ ಗಳಲ್ಲಿ ಹಾಕಿದ ಸಹಿಯನ್ನು ಸ್ವೀಕರಿಸಲಾಗುವುದಿಲ್ಲ. ಎಡ ಹೆಬ್ಬೆರಳಿನ ಗುರುತು ಸರಿಯಾಗಿ ಸ್ಕ್ಯಾನ್ ಮಾಡಬೇಕು ಮತ್ತು ಮಸುಕಾಗಿರಬಾರದು. ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್ ಮೆಂಟ್ ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹದಲ್ಲಿ ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.
ಸಂದರ್ಶನವಿಲ್ಲ:
ಪೂರ್ವಭಾವಿ ಪರೀಕ್ಷೆ ಯಲ್ಲಿ ಅರ್ಹತೆ ಪಡೆಯುವ ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು ಆಧಾರದ ಮೇಲೆ ಆಯ್ಕೆಯಾದವರಿಗೆ ತಾತ್ಕಾಲಿಕವಾಗಿ ನೇಮಕಾತಿ ಪತ್ರ ವಿತರಿಸಲಾಗುತ್ತದೆ.