ಬೆಂಗಳೂರು: ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರದ ಕೂಗನ್ನು ಅಣಕಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿನ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು” ಎಂದು ಕೋರಿ ಬಾಲಿವುಡ್ ನಟ ರಣವೀರ್ ಸಿಂಗ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭದಲ್ಲಿ ರಣವೀರ್ ಸಿಂಗ್ ಪರ ಹಾಜರಾಗಿದ್ದ ಸುಪ್ರೀಂ ಕೋರ್ಟನ ಹಿರಿಯ ವಕೀಲ ಸಜನ್ ಪೂವಯ್ಯ, ಮೈಸೂರಿನ ಚಾಮುಂಡಿ ದೇವಾಲಯಕ್ಕೆ ರಣವೀರ್ ಸಿಂಗ್ ಭೇಟಿ ನೀಡಲಿದ್ದಾರೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಅವರು ಸುಲಭವಾಗಿ ಬಂದು ಹೋಗಲು ಕಷ್ಟವಾಗುತ್ತಿದೆ. ಹಾಗಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ದಿನಾಂಕವನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಈ ವಾದಕ್ಕೆ ವಕೀಲರೂ ಆದ ದೂರುದಾರ ಪ್ರಶಾಂತ ಮೆಥಲ್, ಕರ್ನಾಟಕ ಪೊಲೀಸರು ತುಂಬಾ ಬಲಿಷ್ಠರಾಗಿದ್ದು ಸುರಕ್ಷತೆಯನ್ನೂ ಒದಗಿಸಬಲ್ಲ ಅರ್ಹತೆ ಹೊಂದಿದ್ದಾರೆ. ಬೇಕಿದ್ದಲ್ಲಿ ರಣವೀರ್ ಖಾಸಗಿ ಭದ್ರತಾ ಸಿಬ್ಬಂದಿ ನೆರವು ಪಡೆಯಬಹುದು ಎಂದರು.
ಮಧ್ಯೆ ಪ್ರವೇಶಿಸಿ ಮಾತನಾಡಿದ ನ್ಯಾ.ನಾಗಪ್ರಸನ್ನ ಅವರು, ಕರ್ನಾಟಕದ ಪೊಲೀಸರು ಎಷ್ಟು ಪವರ್ ಫುಲ್ ಎಂಬುದನ್ನು ನಾನು ಪ್ರತಿದಿನ ನೋಡುತ್ತಲೇ ಇದ್ದೇನೆ. ಅವರು ಕೇವಲ ಪ್ರೇಮ ಪ್ರಕರಣಗಳನ್ನು ಮಾತ್ರ ಬೆನ್ನುಹತ್ತುತ್ತಿದ್ದಾರೆ. ನಿಜವಾದ ಅಪರಾಧಗಳ ತನಿಖೆಯನ್ನೇ ಮಾಡುತ್ತಿಲ್ಲ ಎಂದು ಚುಚ್ಚಿದರು.
ನಂತರ ರಣವೀರ್ ಸಿಂಗ್ ಅವರ ಬೇಷರತ್ ಕ್ಷಮಾಪಣೆ ಪ್ರಮಾಣ ಪತ್ರವನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳು, ರಣವೀರ್ ಸಿಂಗ್ ಒಂದು ತಿಂಗಳ ಒಳಗಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಬಗ್ಗೆ ನಿರ್ದೇಶನ ನೀಡುವುದಾಗಿ ತಿಳಿಸಿ ಅರ್ಜಿಯನ್ನು ಇತ್ಯರ್ಥಗೊಳಿಸಿದರು.
ಏನಿದು ಪ್ರಕರಣ?
ಗೋವಾದಲ್ಲಿ 2025ರ ನವೆಂಬರ್ 28ರಂದು ನಡೆದಿದ್ದ “ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ” (IFFI) ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಅವರು ‘ಕಾಂತಾರ ಚಾಪ್ಟರ್-1’ ಚಿತ್ರದ ಬಗ್ಗೆ ವೇದಿಕೆಯಲ್ಲಿ ಮಾತನಾಡುತ್ತಾ ಚಾಮುಂಡಿ ದೈವ ಕುರಿತು ಅಪಹಾಸ್ಯದ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ನಗರದ ವಕೀಲ ಪ್ರಶಾಂತ್ ಮೆಥಲ್ ಅವರು 1ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ನನ್ನ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದಾಖಲಾಗಿರುವ ಈ ಪ್ರಕರಣ ಮತ್ತು ಹೈಗ್ರೌಂಡ್ಸ್ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಪ್ರಮಾಣ ಪತ್ರದಲ್ಲಿ ರಣ್ ವೀರ್ ಸಿಂಗ್, ಘಟನೆ ನಡೆದ ದಿನದಂದು ನಾನು ದೈವದ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದೇನೆ ಎಂಬ ಅರಿವು ನನಗಿರಲಿಲ್ಲ. ಅದರ ಸೂಕ್ಷ್ಮತೆಗಳ ಬಗ್ಗೆಯೂ ನನಗೆ ತಿಳಿದಿರಲಿಲ್ಲ. ಆದ್ದರಿಂದ, ಈ ಪ್ರಮಾಣ ಪತ್ರದ ಮೂಲಕ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಘಟನೆಗಾಗಿ ಬೇಷರತ್ ಕ್ಷಮೆ ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಮೈಸೂರಿನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತೇನೆ ಮತ್ತು ನನ್ನ ಭಕ್ತಿಯನ್ನು ವ್ಯಕ್ತಪಡಿಸುತ್ತೇನೆ. ವಿಷಯದ ಗಂಭೀರತೆ ಅರಿವಾದ ಕೂಡಲೇ ನಾನು ಬಹಿರಂಗವಾಗಿ ಬೇಷರತ್ ಕ್ಷಮೆ ಯಾಚಿಸಿದ್ದೇನೆ ಎಂದು ಹೇಳಿದ್ದಾರೆ.
ನ್ಯಾಯಾಲಯವು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ಈ ತೀರ್ಪಿನ ಮೂಲಕ ರಣವೀರ್ ಸಿಂಗ್ ನಿರಾಳರಾಗಿದ್ದಾರೆ. ಶೀಘ್ರದಲ್ಲೇ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಹರಕೆ ತೀರಿಸಲಿದ್ದಾರೆ.
ಕಾಂತಾರ ಚಾಪ್ಟರ್-1 ಮಿಮಿಕ್ರಿ: ಬಾಲಿವುಡ್ ನಟ ರಣವೀರ್ ಸಿಂಗ್ ಮೇಲಿನ ಪ್ರಕರಣ ಇತ್ಯರ್ಥ; ಕೋರ್ಟ್ ಆದೇಶವೇನು?

