ಕೇರಳಂನಲ್ಲಿ ಹತ್ತು ವರ್ಷಗಳ ನಂತರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಬಹುಮತ ಪಡೆದಿದೆ. ಕರ್ನಾಟಕ, ತೆಲಂಗಾಣ ನಂತರ ಕೇರಳಂನಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ದಶಕದ ಆಡಳಿತದ ನಂತರ ಎಲ್‌ಡಿಎಫ್ ಅಧಿಕಾರ ಕಳೆದು ಕೊಂಡಿದೆ.
ಕಾಂಗ್ರೆಸ್ ಕೇರಳ ಜಯಭೇರಿಗೆ ಸಪ್ತ ಕಾರಣಗಳು
1. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು:
ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆದ್ದಾಗಲೇ, ಅಸೆಂಬ್ಲಿಯ ಚುನಾವಣೆ ದಿಕ್ಸೂಚಿ ಸ್ಪಷ್ಟವಾಗಿತ್ತು. ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದ ಕಾಂಗ್ರೆಸ್, ಮೊದಲು ಪಕ್ಷದಲ್ಲಿ ಇದ್ದ ಭಿನ್ನಮತ ಬಗೆಹರಿಸಿತು. ಎಲ್ಲಾ ನಾಯಕರನ್ನು ಮಾತುಕತೆ ಮೂಲಕ ಮನವೊಲಿಸಿ ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿತು. ಇದು ಗೆಲುವಿಗೆ ಮೂಲ ಕಾರಣ
2. ಟಿಕೆಟ್ ನೀಡುವಲ್ಲಿ ಸ್ಪಷ್ಟತೆ:
ಟಿಕೆಟ್ ಗೊಂದಲ ತಪ್ಪಿಸಲು ಕಾಂಗ್ರೆಸ್ ಹೈಕಮಾಂಡ್, ಕೇರಳಕ್ಕೆ ಮದುಸೂಧನ್ ಮಿಸ್ತ್ರಿ ಅವರನ್ನು ರವಾನಿಸಿತ್ತು. ಹಾಲಿ ಸಂಸದರಿಗೆ ಟಿಕೆಟ್ ನೀಡಲೇ ಇಲ್ಲ. ಪ್ರಬಲ ಅಭ್ಯರ್ಥಿಗಳಿಗೆ ಮೊದಲು ಮಣೆ ಹಾಕಿತು. ಕೇರಳ ಕಾಂಗ್ರೆಸ್‌ನಲ್ಲಿ ಟಿಕೆಟ್ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಯಿತು.
3. ಶಿಸ್ತಿನ ಪಕ್ಷವಾಗಿ ರೂಪುಗೊಂಡಿದ್ದು :
ಚುನಾವಣೆಗೆ ಕೆಲವೇ ತಿಂಗಳು ಮೊದಲು ಕಾಂಗ್ರೆಸ್‌ನಲ್ಲಿ ಅದ್ಭುತ ಬದಲಾವಣೆ ಉಂಟಾಗಿತ್ತು. ಪರಸ್ಪರ ಕಿತ್ತಾಡುತ್ತಿದ್ದ ನಾಯಕರು ಒಂದಾಗಿದ್ದರು. ಪಕ್ಷದ ಇಮೇಜ್ ಸಂಪೂರ್ಣವಾಗಿ ಬದಲಾಗಿತ್ತು. ಕಾಂಗ್ರೆಸ್ ಘಟಕ ಸಂಪೂರ್ಣ ಸಂಯೋಜಿತ ತಂಡವಾಗಿ ಮಾರ್ಪಾಡಾಗಿತ್ತು. ಈ ರಣತಂತ್ರ ರೂಪಿಸಿದ್ದು ಪಕ್ಷದ ಉಸ್ತುವಾರಿ ದೀಪ್ ದಾಸ್ ಮುನ್ಶಿ.
4. ಯುವ, ಹೊಸ ಮುಖಗಳಿಗೆ ಮಣೆ:
ಎಲ್‌ಡಿಎಫ್ ಶಾಸಕರ ದೌರ್ಬಲ್ಯಗಳನ್ನು ಕಾಂಗ್ರೆಸ್ ಚೆನ್ನಾಗಿ ಅಧ್ಯಯನ ಮಾಡಿತ್ತು. ಹಾಗಾಗಿ, ಶಾಸಕರ ವಿರೋಧಿ ಅಲೆ ಹೆಚ್ಚಿರುವ ಕಡೆ ಯುವ ಹಾಗೂ ಹೊಸ ಮುಖಗಳಿಗೆ ಮಣೆ ಹಾಕಿತ್ತು. ಹಾಗಾಗಿ, ಬದಲಾವಣೆ ಬಯಸುವ ಮತದಾರ ಹೊಸ ನಾಯಕತ್ವಕ್ಕೆ ಮತಹಾಕಿದ್ದ. ಯುವಕರಿಗೆ ಮಣೆ ಹಾಕುವ ರಣತಂತ್ರ ಫಲ ನೀಡಿತ್ತು.
5. ಆಡಳಿತ ವಿರೋಧಿ ಅಲೆ:
ಪಿಣರಾಯಿ ಸರ್ಕಾರದ ಲೋಪದೋಷಗಳನ್ನು ಕಾಂಗ್ರೆಸ್ ಯಶಸ್ವಿಯಾಗಿಯೇ ಎಕ್ಸ್‌ಪೋಸ್ ಮಾಡಿತ್ತು. ಅಲ್ಲದೇ, ಹತ್ತು ವರ್ಷಗಳ ಆಡಳಿತದ ಕಾರಣ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ದಟ್ಟವಾಗಿತ್ತು. ಆ ಅಲೆಯ ಮೇಲೆ ಸವಾರಿ ಮಾಡಿದ್ದ ಕಾಂಗ್ರೆಸ್ ಗೆಲುವಿನ ದಡ ಸೇರಿತ್ತು.
6. ಪವರ್‌ಫುಲ್ ಪ್ರಚಾರ:
ಪ್ರಚಾರದಲ್ಲಿ ಕೂಡಾ ಕಾಂಗ್ರೆಸ್ ಹಿಂದೆ ಬೀಳಲಿಲ್ಲ. ಗ್ಯಾರಂಟಿ ಯೋಜನೆಗಳು ಮುನ್ನೆಲೆಗೆ ಬಂತು. ರಾಹುಲ್ ಗಾಂಧಿ ಖುದ್ದು ಪ್ರಚಾರದ ಚುಕ್ಕಾಣಿ ಹಿಡಿದಿದ್ದರು. ಎಡರಂಗ ಸರ್ಕಾರದ ಲೋಪದೋಷಗಳನ್ನು ಜನರ ಮುಂದಿಡುವಲ್ಲಿ ಕಾಂಗ್ರೆಸ್ ಸಕ್ಸಸ್ ಆಯಿತು. ಕಾಂಗ್ರೆಸ್ ಪಿಣರಾಯಿಯವರನ್ನು ಟಾರ್ಗೆಟ್ ಮಾಡಿ ಪ್ರಚಾರ ನಡೆಸುತಿತ್ತು. ಕರ್ನಾಟಕವೂ ಸೇರಿ, ದೇಶಾದ್ಯಂತ ಇರುವ ಕಾಂಗ್ರೆಸ್ ನಾಯಕರ ನೆರವನ್ನೂ ಪಡೆಯಲಾಗಿತ್ತು.
೭. ಮುಸ್ಲಿಂ, ಕ್ರೈಸ್ತ ಹಾಗೂ ನಾಯರ್ ಸಮುದಾಯದ ಬೆಂಬಲ:
ಮುಸ್ಲಿಂ ಲೀಗ್ ಜೊತೆ ಮೈತ್ರಿ ಇತ್ತು. ಈ ಕಾರಣಕ್ಕೆ ಮುಸ್ಲಿಂ ಮತಗಳು ಸುಲಭವಾಗಿ ಸಿಕ್ಕಿತು. ಇಮ್ರಾನ್ ಪ್ರತಾಪ್‌ಗಡಿಯಂತಹ ನಾಯಕರನ್ನು ಮುಸ್ಲಿಮ್ ಮತಗಳಿಗಾಗಿಯೇ ನಿಯೋಜಿಸಲಾಗಿತ್ತು. ಸಂಪ್ರದಾಯಿಕ ಕ್ರೈಸ್ತರ ಮತಗಳೂ ಕಾಂಗ್ರೆಸ್ ಪಾಲಾಗಿತ್ತು. ಸಿಎಂ ರೇಸ್‌ನಲ್ಲಿರುವ ಕೆ.ಸಿ ವೇಣುಗೋಪಾಲ್, ವಿ.ಡಿ ಸತೀಶನ್ ಮತ್ತು ರಮೇಶ್ ಚೆನ್ನಿಂತಲ – ಮೂವರೂ ನಾಯರ್ ಸಮುದಾಯದ ನಾಯಕರಾಗಿರುವ ಕಾರಣಕ್ಕೆ, ಆ ಸಮುದಾಯವೂ ಕಾಂಗ್ರೆಸ್‌ನ್ನು ಸಂಪೂರ್ಣವಾಗಿ ಬೆಂಬಲಿಸಿತ್ತು.
ಕೇರಳಂ: ಯುಡಿಎಫ್ ಗೆಲುವಿನ ಹಿಂದಿನ ಏಳು ರಣತಂತ್ರ!

