Site icon Vistara News

Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

Kolkata Doctor Murder Case


ಕೋಲ್ಕತಾ: ಕೋಲ್ಕತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನೀಡುತ್ತಿದ್ದ ವೈದ್ಯೆಯ (Kolkata Doctor Murder Case) ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ದೇಶದ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ತಾರೆಯರು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಬೆಂಬಲ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳಾದ ಜೆನಿಲಿಯಾ ದೇಶ್‌ಮುಖ್‌, ಆಯುಷ್ಮಾನ್ ಖುರಾನಾ, ರಿಚಾ ಚಡ್ಡಾ, ನವ್ಯಾ ನವೇಲಿ ನಂದಾ, ಜೋಯಾ ಅಖ್ತರ್ ಮತ್ತು ಇತರರು ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಕೊರತೆಯ ವಿರುದ್ಧ ತಮ್ಮ ಆಕ್ರೋಶವನ್ನು ಕಟುವಾದ ಪದಗಳ ಮೂಲಕ ಹೊರಹಾಕಿದ್ದಾರೆ ಮತ್ತು ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಕವಿತೆ ರಚಿಸುವ ಕಲೆ ಹೊಂದಿರುವಂತಹ ನಟ ಆಯುಷ್ಮಾನ್ ಖುರಾನಾ ಅವರು ಕಾಶ್ ಮೈ ಭಿ ಲಡ್ಕಾ ಹೋತಿ (ನಾನು ಹುಡುಗನಾಗಬೇಕೆಂದು ಬಯಸುತ್ತೇನೆ) ಎಂಬ ಭಾವನಾತ್ಮಕ ಕವಿತೆಯನ್ನು ಬರೆದು ಆ ಕವಿತೆಯನ್ನು ಹೇಳುತ್ತಾ ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಕವಿತೆಯಲ್ಲಿ ಅವರು ನಾನು ಹುಡುಗನಾಗಬೇಕೆಂದು ಬಯಸುತ್ತೇನೆ. ಯಾಕೆಂದರೆ ನಾನು ಬಾಗಿಲನ್ನು ಲಾಕ್ ಮಾಡದೆ ಮಲಗಬಹುದು. ನಿರಾತಂಕವಾಗಿ ಎಲ್ಲಿ ಬೇಕಾದರೂ ಓಡಾಡಬಹುದು, ಹಾರಾಡಬಹುದು, ರಾತ್ರಿಯಿಡೀ ಸ್ನೇಹಿತರೊಂದಿಗೆ ತಿರುಗಾಡಬಹುದು. ಆದರೆ ಈ ಸ್ವಾತಂತ್ರ್ಯ ಮಹಿಳೆಯರಿಗೆ ಇಲ್ಲವಲ್ಲ ಎಂಬುದನ್ನು ತಮ್ಮ ಕವಿತೆಯ ಮೂಲಕ ಮಾರ್ಮಿಕವಾಗಿ ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ಕೃತಿ “ನಾವು ನಮ್ಮ 78ನೇ ಸ್ವಾತಂತ್ರ್ಯ ವರ್ಷವನ್ನು ಆಚರಿಸುತ್ತಿರುವಾಗ ಜಾಗತಿಕವಾಗಿ ಒಂದು ದೇಶವಾಗಿ ನಾವು ಎಷ್ಟು ದೂರ ಬಂದಿದ್ದೇವೆ ಎಂಬುದರ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ತಮ್ಮ ದೇಶದಲ್ಲಿ ಮಹಿಳೆಯರು ಇನ್ನೂ ಸುರಕ್ಷಿತವಾಗಿಲ್ಲ ಎಂಬ ಭಯಾನಕ ವಾಸ್ತವವನ್ನು ನೋಡಿದಾಗ ನನಗೆ ಬೇಸರವಾಗುತ್ತದೆ. ಈ ಅಮಾನವೀಯ ಕೃತ್ಯಗಳನ್ನು ಮಾಡುವ ಜನರಿಗೆ ಯಾವುದೇ ಭಯವಿರುವುದಿಲ್ಲ. ಆದರೆ ಇಂದಿಗೂ, ಇದರಲ್ಲಿ ಬಲಿಪಶುವಾಗಿರುವುದಕ್ಕೆ ಮಹಿಳೆಯನ್ನು ದೂಷಿಸಲಾಗುತ್ತಿದೆ ಎಂದು ವಿಷಾದಿಸಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಮರಣದಂಡನೆ ವಿಧಿಸಬೇಕೆಂದು ನಟಿ ಜೆನಿಲಿಯಾ ದೇಶ್‌ಮುಖ್‌ ಆಗ್ರಹಿಸಿದ್ದಾರೆ. ತಮ್ಮ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಅವರು, “ರಾಕ್ಷಸರನ್ನು ಗಲ್ಲಿಗೇರಿಸಬೇಕಾಗಿದೆ. ಬಲಿಪಶು ಅನುಭವಿಸಿದ್ದನ್ನು ಓದಿದಾಗ ನನ್ನ ರಕ್ತ ಕುದಿಯುತ್ತದೆ. ಸೆಮಿನಾರ್ ಹಾಲ್‍ನಲ್ಲಿ ಕರ್ತವ್ಯದಲ್ಲಿದ್ದ ಒಬ್ಬ ಮಹಿಳೆ, ಇಂತಹ ಘೋರ ಭಯಾನಕತೆಯನ್ನು ಎದುರಿಸಿದಳು. ಅವಳ ಕುಟುಂಬದವರು ಮತ್ತು ಪ್ರೀತಿಪಾತ್ರರು ಈ ದುರಂತವನ್ನು ಹೇಗೆ ಎದುರಿಸುತ್ತಿದ್ದಾರೆಂದು ಊಹಿಸಲು ಸಹ ಸಾಧ್ಯವಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಟ ಹೃತಿಕ್ ರೋಷನ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ತೀವ್ರ ಕೋಪ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ, ನಾವೆಲ್ಲರೂ ಸಮಾನವಾಗಿ ಸುರಕ್ಷಿತರೆಂದು ಭಾವಿಸುವ ಸಮಾಜವನ್ನು ನಿರ್ಮಿಸಬೇಕು. ಆದರೆ ಅದಕ್ಕೆ ಹಲವು ವರ್ಷಗಳು ಬೇಕಾಗುತ್ತದೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಮುಂದಿನ ತಲೆಮಾರು ಉತ್ತಮವಾಗಿರುತ್ತದೆ. ಇದೀಗ ಇಂತಹ ದೌರ್ಜನ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳುವುದು ನ್ಯಾಯವಾಗಿದೆ. ಮತ್ತು ಅದನ್ನು ಮಾಡಲು ಇರುವ ಏಕೈಕ ಮಾರ್ಗವೆಂದರೆ ಅಂತಹ ಅಪರಾಧಿಗಳಿಗೆ ಹಾಡುಹಗಲಿನಲ್ಲೇ ಕಠಿಣ ಶಿಕ್ಷೆ ನೀಡುವುದು ಎಂದು ತಿಳಿಸಿದ್ದಾರೆ ಮತ್ತು ತಾನು ಸಂತ್ರಸ್ತೆಗೆ ನ್ಯಾಯ ದೊರಕಿಸಲು ಆಕೆಯ ಕುಟುಂಬದೊಂದಿಗೆ ನಿಲ್ಲುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ತರಬೇತಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯನ್ನು ನಟಿ ಕರೀನಾ ಕಪೂರ್ ಖಾನ್ ಕೂಡ ಖಂಡಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕರೀನಾ, “12 ವರ್ಷಗಳ ನಂತರ; ಅದೇ ಕಥೆ; ಅದೇ ಪ್ರತಿಭಟನೆ. ಆದರೆ ನಾವು ಇನ್ನೂ ಬದಲಾವಣೆಗಾಗಿ ಕಾಯುತ್ತಿದ್ದೇವೆʼʼ ಎಂದಿದ್ದಾರೆ.

ಆಘಾತಕಾರಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಟಿ ಪ್ರೀತಿ ಜಿಂಟಾ, ಮಹಿಳೆಯರ ಸುರಕ್ಷತೆಗೆ ಸರ್ಕಾರವು ಆದ್ಯತೆ ನೀಡಬೇಕು ಎಂದು ತಿಳಿಸುವ ಮೂಲಕ ಅವರು ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೇ ಅತ್ಯಾಚಾರ ಮತ್ತು ಹಿಂಸಾತ್ಮಕ ಲೈಂಗಿಕ ಅಪರಾಧದ ಸಂತ್ರಸ್ತರ ಹೆಸರುಗಳು ಮತ್ತು ಮುಖಗಳು ಮಾಧ್ಯಮಗಳಲ್ಲಿ ಸೋರಿಕೆಯಾಗಿರುವಾಗ, ಅತ್ಯಾಚಾರಿಯ ಮುಖವನ್ನು ಮರೆಮಾಚುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಇಂತಹ ಘೋರ ಕೃತ್ಯಗಳಿಗೆ ಬೇಗ ನ್ಯಾಯ ಸಿಗುವುದಿಲ್ಲ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದಿಲ್ಲ. ಹಾಗಾಗಿ ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ಹೆಣ್ಣುಮಗಳ ಬಗ್ಗೆ ತಾನು ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮಿಸಿ ಎಂದು ಅವರು ಬರೆದಿದ್ದಾರೆ

ಇದನ್ನೂ ಓದಿ:ಲೈಂಗಿಕ ಕಿರುಕುಳ ನೀಡಿದವನನ್ನು ನಡು ರಸ್ತೆಯಲ್ಲಿ ಥಳಿಸಿದ ಅಕ್ಕತಂಗಿ; ವಿಡಿಯೊ ವೈರಲ್

ಆಗಸ್ಟ್ 9ರಂದು ಕೋಲ್ಕತಾದ ಆರ್‌ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆಯೊಬ್ಬರು ಶವವಾಗಿ ಪತ್ತೆಯಾಗಿದ್ದರು. ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಕೊಲೆ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ದೇಶಾದ್ಯಂತ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದು, ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

Exit mobile version