ದೇಶದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವ ಕನಸು ಎನ್ ಡಿ ಎ ಗೆ (NDA) ಆದರೆ ಕಾಂಗ್ರೆಸ್ ಗೆ (congress) ಮರಳಿ ಗದ್ದುಗೆ ಏರುವ ತವಕ. ಈ ನಡುವೆ ಬಂದೇ ಬಿಟ್ಟಿದೆ ಲೋಕಸಭಾ ಚುನಾವಣೆ- 2024ರ (Lok sabha election-2024) ಮೊದಲ ಹಂತದ (first phase) ಮತದಾನ. ದೇಶಾದ್ಯಂತ ನಡೆಯಲಿರುವ ಏಳು ಹಂತಗಳ ಲೋಕ ಸಭಾ ಚುನಾವಣೆಯ ಮೊದಲ ಹಂತದ ಮತದಾನ (voting) ಇಂದು ದೇಶದ ವಿವಿಧ ಭಾಗಗಳಲ್ಲಿ ನಡೆಯಲಿದೆ.
ಪ್ರಧಾನಿ (PM) ನರೇಂದ್ರ ಮೋದಿ (narendra modi) ಅವರ ನೇತೃತ್ವದಲ್ಲಿ ಆಡಳಿತಾರೂಢ ಬಿಜೆಪಿ (BJP) ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಗಮನಹರಿಸುತ್ತಿರುವುದರಿಂದ ಭಾರತದ 543 ಸಂಸದೀಯ ಕ್ಷೇತ್ರಗಳ ಪೈಕಿ 102 ಕ್ಷೇತ್ರಗಳ ಮತದಾನ ಇಂದು ನಡೆಯಲಿದೆ.
2024ರ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಒಟ್ಟು 1,625 ಅಭ್ಯರ್ಥಿಗಳು ಕಣದಲ್ಲಿದ್ದು, ಇವರಲ್ಲಿ 134 ಮಹಿಳಾ ಅಭ್ಯರ್ಥಿಗಳು ಮತ್ತು 1,491 ಪುರುಷರು.
ಇದನ್ನೂ ಓದಿ:Lok sabha Election 2024: ಲೋಕಸಭೆ ಚುನಾವಣೆಯಲ್ಲಿ ಈ 10 ವಿಷಯಗಳೇ ನಿರ್ಣಾಯಕ
ಎಲ್ಲಿ ಮೊದಲು?
ಮೊದಲ ಹಂತದ ಮತದಾನ ಪ್ರಕ್ರಿಯೆಯು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಇದರಲ್ಲಿ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ ಐದು, ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯದಲ್ಲಿ ತಲಾ ಎರಡು ಸ್ಥಾನಗಳಲ್ಲಿ ಮತದಾನ ನಡೆಯಲಿದೆ ಹಾಗೂ ಛತ್ತೀಸ್‌ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಸ್ಥಾನಗಳಿಗೆ ಮತದಾನ ನಡೆಯಲಿದೆ.
ರಾಜಕೀಯ ಪಕ್ಷಗಳು ಸಾಧ್ಯವಾದಷ್ಟು ಹೆಚ್ಚು ಮತದಾನ ನಡೆಯಬೇಕು ಎಂದು ಬಯಸುತ್ತಿರುವುದು ಮಾತ್ರವಲ್ಲ ಸಾಧ್ಯವಾದಷ್ಟು ಹೆಚ್ಚು ಸ್ಥಾನಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ. 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ 10 ಪ್ರಮುಖ ಕ್ಷೇತ್ರಗಳ ಸಂಕ್ಷಿಪ್ತ ಮಾಹಿತಿ
ಇಲ್ಲಿದೆ.
1. ನಾಗ್ಪುರ
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರವನ್ನು ಬಿಜೆಪಿಯ ನಿತಿನ್ ಗಡ್ಕರಿ ಅವರು 2014 ರಲ್ಲಿ ಸಂಸದರಾಗಿದ್ದ ವಿಲಾಸ್ ಮುತ್ತೇಮ್‌ವಾರ್ ಅವರನ್ನು 2.84 ಲಕ್ಷ ಮತಗಳ ಅಂತರದಿಂದ ಸೋಲಿಸಿ ವಶಪಡಿಸಿಕೊಂಡಿದ್ದರು. 2019ರಲ್ಲಿ, ಗಡ್ಕರಿ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ನಾನಾ ಪಟೋಲೆ ಅವರನ್ನು 2.16 ಲಕ್ಷ ಮತಗಳಿಂದ ಸೋಲಿಸಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು. ಈ ಬಾರಿ ಮತ್ತೆ ಗಡ್ಕರಿ ಅವರು ಇಲ್ಲಿ ಕಾಂಗ್ರೆಸ್‌ನ ವಿಕಾಸ್ ಠಾಕ್ರೆ ಅವರೊಂದಿಗೆ ಸ್ಪರ್ಧಿಸುತ್ತಿದ್ದಾರೆ.
2. ಸಹರಾನ್ಪುರ್
ಉತ್ತರ ಪ್ರದೇಶದ ಪ್ರಮುಖ ಸ್ಥಾನಗಳಲ್ಲೊಂದಾದ ಸಹರಾನ್‌ಪುರವನ್ನು 2019 ರಲ್ಲಿ ಬಿಎಸ್‌ಪಿಯ ಹಾಜಿ ಫಜ್ಲುರ್ ರೆಹಮಾನ್ ಗೆದ್ದಿದ್ದರು. ಈ ಬಾರಿ ಸಹರಾನ್‌ಪುರವು ಬಿಜೆಪಿಯ ರಾಘವ್ ಲಖನ್‌ಪಾಲ್, ಬಿಎಸ್‌ಪಿ ಅಭ್ಯರ್ಥಿ ಮಜಿದ್ ಅಲಿ ಮತ್ತು ಕಾಂಗ್ರೆಸ್‌ನ ಇಮ್ರಾನ್ ಮಸೂದ್ ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.
3. ಶಿವಗಂಗಾ
ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಭದ್ರಕೋಟೆಯಾಗಿರುವ ಶಿವಗಂಗಾ ಪ್ರಸ್ತುತ ಅವರ ಪುತ್ರ ಕಾರ್ತಿ ಚಿದಂಬರಂ ಪ್ರತಿನಿಧಿಸುತ್ತಿದ್ದಾರೆ. 2019 ರಲ್ಲಿ ಅವರು ಬಿಜೆಪಿಯ ಎಚ್. ರಾಜಾ ಅವರನ್ನು 3.32 ಲಕ್ಷ ಮತಗಳಿಂದ ಸೋಲಿಸಿದರು. ಈ ಬಾರಿ ಮತ್ತೆ ಕಣಕ್ಕೆ ಇಳಿದಿರುವ ಕಾರ್ತಿ ಚಿದಂಬರಂ ಬಿಜೆಪಿಯ ದೇವನಾಥನ್ ಯಾದವ್ ಮತ್ತು ಎಐಎಡಿಎಂಕೆಯ ಎ ಕ್ಸೇವಿಯರ್‌ದಾಸ್ ಅವರನ್ನು ಎದುರಿಸಬೇಕಿರುವುದರಿಂದ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
4. ಚಿಂದ್ವಾರಾ
ಚಿಂದ್ವಾರಾ ಬಹುತೇಕ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿದೆ. 2019 ರಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದ ಏಕೈಕ ಕ್ಷೇತ್ರವಾಗಿರುವ ಚಿಂದ್ವಾರಾ ಮಾಜಿ ಸಿಎಂ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಪ್ರತಿನಿಧಿಸಿದ್ದರು. ಈ ಬಾರಿ ನಕುಲ್ ನಾಥ್ ಅವರು ಇಲ್ಲಿಂದ ಮರುಚುನಾವಣೆ ಬಯಸಿದ್ದು, ಸ್ಥಳೀಯರ ಪ್ರಮುಖ ಬಿಜೆಪಿಯ ವಿವೇಕ್ ‘ಬಂಟಿ’ ಸಾಹು ವಿರುದ್ಧ ಕಣಕ್ಕಿಳಿದಿದ್ದಾರೆ.
5. ಜೋರ್ಹತ್
ಜೋರ್ಹತ್ ಬಿಜೆಪಿಯ ಹಾಲಿ ಸಂಸದ ಟೋಪೋನ್ ಕುಮಾರ್ ಗೊಗೊಯ್ ಹಾಗೂ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಪುತ್ರ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ನಡುವಿನ ಸಮರಕ್ಕೆ ಸಾಕ್ಷಿಯಾಗಿದೆ. ಎರಡು ಬಾರಿ ಸಂಸದರಾಗಿ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕರಾಗಿರುವ ಗೌರವ್ ಅಸ್ಸಾಂನ ಜೋರ್ಹತ್‌ನಿಂದ ಸ್ಪರ್ಧಿಸುತ್ತಿರುವುದು ಇದೇ ಮೊದಲು.
6. ಪಿಲಿಭಿತ್
ಮೂರು ದಶಕಗಳಿಗಿಂತಲೂ ಹೆಚ್ಚು ಅಕಾಲ ತಾಯಿ ಮೇನಕಾ ಗಾಂಧಿ ಮತ್ತು ಮಗ ವರುಣ್ ಗಾಂಧಿ ಅವರ ಕ್ಷೇತ್ರವಾಗಿತ್ತು. ಆದರೆ ಈ ಬಾರಿ ಬಿಜೆಪಿ ವರುಣ್ ಗಾಂಧಿ ಬದಲಿಗೆ ಉತ್ತರ ಪ್ರದೇಶದ ಸಚಿವ ಜಿತಿನ್ ಪ್ರಸಾದ ಅವರನ್ನು ಇಲ್ಲಿ ಅಭ್ಯರ್ಥಿಯನ್ನಾಗಿ ಮಾಡಿದೆ. ಸಮಾಜವಾದಿ ಪಕ್ಷದ ಭಗವತ್ ಸರನ್ ಗಂಗ್ವಾರ್ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅನಿಸ್ ಅಹ್ಮದ್ ಖಾನ್ ವಿರುದ್ಧ ಪ್ರಸಾದ ಸ್ಪರ್ಧಿಸುತ್ತಿದ್ದಾರೆ.
7. ಅರುಣಾಚಲ ಪಶ್ಚಿಮ
ಬಿಜೆಪಿಯ ಭದ್ರಕೋಟೆಯಾಗಿರುವ ಅರುಣಾಚಲ ಪಶ್ಚಿಮ ಕ್ಷೇತ್ರವು ಪ್ರಸ್ತುತ ಕಿರಣ್ ರಿಜಿಜು ಅವರ ಅಧಿಕಾರ ವ್ಯಾಪ್ತಿಯಲ್ಲಿದೆ. ನಾಲ್ಕನೇ ಬಾರಿಗೆ ಇಲ್ಲಿಂದ ಅವರು ಸ್ಪರ್ಧಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ರಿಜಿಜು ಅವರು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಬಮ್ ತುಕಿ ಅವರನ್ನು 1.74 ಲಕ್ಷ ಮತಗಳಿಂದ ಸೋಲಿಸಿದರು. ಈ ಬಾರಿ ಚುನಾವಣೆಯಲ್ಲಿ ಅವರಿಬ್ಬರು ಮತ್ತೆ ಎದುರಾಳಿಗಳಾಗಿದ್ದಾರೆ.
8. ಬಿಕಾನೆರ್
2009ರಿಂದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರ ಕ್ಷೇತ್ರವಾಗಿರುವ ಬಿಕಾನೇರ್ ನಲ್ಲಿ ಅವರು ಈ ಬಾರಿ ಮತ್ತೆ ಕಣಕ್ಕೆ ಇಳಿದಿದ್ದಾರೆ. ಇವರ ವಿರುದ್ಧ ಗೋವಿಂದ್ ರಾಮ್ ಮೇಘವಾಲ್ ಸ್ಪರ್ಧಿಸಲಿದ್ದಾರೆ. ಈ ಹಿಂದೆ ಇಲ್ಲಿ ಖ್ಯಾತ ನಟ ಧರ್ಮೇಂದ್ರ ಅವರೂ ಕಣಕ್ಕೆ ಇಳಿದಿದ್ದರು.
9. ತೂತುಕ್ಕುಡಿ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಪಾದಾರ್ಪಣೆ ಮಾಡಿದರು. ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ತಮಿಳಿಸೈ ಸೌಂದರರಾಜನ್ ಅವರನ್ನು 3.4 ಲಕ್ಷ ಮತಗಳಿಂದ ಸೋಲಿಸಿದರು. ಈ ಬಾರಿ ಡಿಎಂಕೆ ನಾಯಕ ತೂತುಕ್ಕುಡಿಯಿಂದ ಸತತ ಎರಡನೇ ಅವಧಿಗೆ ಕಣ್ಣಿಟ್ಟಿದ್ದಾರೆ ಮತ್ತು ಎಐಎಡಿಎಂಕೆಯ ಆರ್. ಶಿವಸಾಮಿ ವೇಲುಮಣಿ ಮತ್ತು ಟಿಎಂಸಿ (ಎಂ) ಎಸ್‌ಡಿಆರ್ ವಿಜಯಶೀಲನ್ ವಿರುದ್ಧ ಕಣಕ್ಕಿಳಿದಿದ್ದಾರೆ.
10. ಕೊಯಮತ್ತೂರು
ತಮಿಳುನಾಡಿನ ಪ್ರತಿಷ್ಠಿತ ಕ್ಷೇತ್ರದಿಂದ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ. ಅಣ್ಣಾಮಲೈ ಈ ಬಾರಿ ಮೊದಲ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಎಐಎಡಿಎಂಕೆಯ ಸಿಂಗೈ ಜಿ.ರಾಮಚಂದ್ರನ್ ಮತ್ತು ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ಅವರೊಂದಿಗೆ ಸ್ಪರ್ಧಿಸುತ್ತಿರುವ ಅಣ್ಣಾಮಲೈ ಗೆದ್ದರೆ ತಮಿಳುನಾಡಿನಲ್ಲಿ ಬಿಜೆಪಿಗೆ ದೊಡ್ಡ ಜಯವಾಗಲಿದೆ. 2019ರಲ್ಲಿ ಈ ಕ್ಷೇತ್ರದಿಂದ ಸಿಪಿಐ(ಎಂ)ನ ಪಿ.ಆರ್. ನಟರಾಜನ್ ಗೆದ್ದಿದ್ದರು.