Site icon Vistara News

Lok sabha election 2024: ಮಥುರಾದಲ್ಲಿ ಹೇಮಾಮಾಲಿನಿ ಗೆಲುವು ಪಕ್ಕಾ; ಏನು ಹೇಳುತ್ತೆ ಲೆಕ್ಕ?

Lok sabha election-2024

ಮಥುರಾ: ಲೋಕ ಸಭಾ ಚುನಾವಣೆಯಲ್ಲಿ (Lok sabha election-2024) ಈ ಬಾರಿ ಹಲವಾರು ಕ್ಷೇತ್ರಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದರಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷದ (BJP) ಭದ್ರಕೋಟೆಯಾದ ಮಥುರಾ (mathura) ಲೋಕಸಭಾ ಕ್ಷೇತ್ರವೂ ಒಂದು. ಮಥುರಾದಲ್ಲಿ ಬಿಜೆಪಿ ಮತ್ತೆ ಹಾಲಿ ಸಂಸದೆ (MP) ಹೇಮಾ ಮಾಲಿನಿ (hema malini) ಅವರನ್ನು ಮತ್ತೊಮ್ಮೆ ಕಣಕ್ಕಿಳಿಸಿದೆ.

ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ವಿಧಿಸಿಕೊಂಡಿರುವ ಅಲಿಖಿತ ವಯಸ್ಸಿನ ಮಿತಿ ನಿರ್ಬಂಧವನ್ನು ಮುರಿದು 75ರ ಹರೆಯದ ನಟಿ ಹೇಮಮಾಲಿನಿ ಅವರಿಗೆ ಇಲ್ಲಿ ಟಿಕೆಟ್ ನೀಡಲಾಗಿದೆ.

ಬಿಜೆಪಿಯ ಭದ್ರಕೋಟೆ

ಜಾಟ್ ಪ್ರಾಬಲ್ಯದ ಮಥುರಾವು ಸಾಂಪ್ರದಾಯಿಕವಾಗಿ ಭಾರತೀಯ ಜನತಾ ಪಕ್ಷ ಅಥವಾ ಅದರ ಮಿತ್ರ ಪಕ್ಷಗಳ ಭದ್ರಕೋಟೆಯಾಗಿದೆ. ಭಾರತದ ಪ್ರಸಿದ್ಧ ಜಾಟ್ ಸಮಾಜವಾದಿ ನಾಯಕರಲ್ಲಿ ಒಬ್ಬರಾದ ಮಣಿ ರಾಮ್ ಬಗ್ರಿ ನೇತೃತ್ವದಲ್ಲಿ ಬಿಜೆಪಿ 1977ರಲ್ಲಿ ಮೊದಲ ಇಲ್ಲಿ ಪ್ರಾಬಲ್ಯ ಸಾಧಿಸಿತ್ತು.

ಇದನ್ನೂ ಓದಿ: Lok sabha election: ತಮಿಳುನಾಡಿನಲ್ಲಿ ಬಿಜೆಪಿ ಆಗಲಿದೆ 2ನೇ ಅತಿದೊಡ್ಡ ಪಕ್ಷ; ಸಮೀಕ್ಷೆ ಹೇಳೋದಿಷ್ಟು

ಬಿಜೆಪಿ ರಚನೆ ಬಳಿಕ…

1975- 77ರ ತುರ್ತು ಪರಿಸ್ಥಿತಿಯ ಬಳಿಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಎದುರಿಸಲು ಭಾರತೀಯ ಜನತಾ ಪಕ್ಷವನ್ನು ಬಲಪಡಿಸಲಾಯಿತು. ಭಾರತೀಯ ಜನಸಂಘ, ಜನತಾ ಮೋರ್ಚಾ, ಭಾರತೀಯ ಲೋಕದಳ, ಸ್ವತಂತ್ರ ಪಕ್ಷ ಮತ್ತು ಸೋಷಿಯಲಿಸ್ಟ್ ಪಾರ್ಟಿ ಆಫ್ ಇಂಡಿಯಾದಂತಹ ಪಕ್ಷಗಳ ಆದರ್ಶ ನಾಯಕರನ್ನು ಒಳಗೊಂಡಿರುವ ಬಿಜೆಪಿ ಮೂಲಭೂತವಾಗಿ ಒಂದು ಸಂಯುಕ್ತ ವಿರೋಧ ಪಕ್ಷವಾಗಿ ಜನರ ಪ್ರೀತಿಗೆ ಪಾತ್ರವಾಗಿತ್ತು.

ವಾಜಪೇಯಿ ಅವರನ್ನು ಸೋಲಿಸಿದ್ದ ಪ್ರತಾಪ್

1977ರ ಲೋಕಸಭಾ ಚುನಾವಣೆಯ ಮೊದಲು ಸ್ವತಂತ್ರ ಅಭ್ಯರ್ಥಿಗಳಾದ ಸ್ವಾತಂತ್ರ್ಯ ಹೋರಾಟಗಾರ ರಾಜಾ ಗಿರಿರಾಜ್ ಸರಣ್ ಸಿಂಗ್ (1952) ಮತ್ತು ರಾಜಾ ಮಹೇಂದ್ರ ಪ್ರತಾಪ್ (1957) ಅವರು ಇಲ್ಲಿ ಅಧಿಕಾರವನ್ನು ಸ್ಥಾಪಿಸಿದ್ದರು. ಪ್ರತಾಪ್ ಅವರು ಆ ವರ್ಷ ಭಾರತೀಯ ಜನಸಂಘದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋಲಿಸಿದ್ದರು.

1962ರಲ್ಲಿ ರೈತ ನಾಯಕ ಚೌಧರಿ ದಿಗಂಬರ ಸಿಂಗ್ ಅವರು ಪ್ರತಾಪ್ ಅವರನ್ನು ಸೋಲಿಸಿ ಗೆದ್ದಾಗ ಕಾಂಗ್ರೆಸ್ ಮೊದಲ ಬಾರಿಗೆ ಇಲ್ಲಿ ಅಧಿಕಾರಕ್ಕೆ ಬಂದಿತು. ಅವರ ಅನಂತರ ಮತ್ತೊಬ್ಬ ಕಾಂಗ್ರೆಸ್ ನಾಯಕ ಚಕಲೇಶ್ವರ್ ಸಿಂಗ್ ಅಧಿಕಾರ ವಹಿಸಿಕೊಂಡರು.

ಚೌಧರಿ ದಿಗಂಬರ್ ಸಿಂಗ್ 1980ರಲ್ಲಿ ಜನತಾ ಪಕ್ಷದ ಟಿಕೆಟ್‌ನಲ್ಲಿ ಲೋಕಸಭೆಗೆ ಮರಳಿದರು. ಅವರು 1969ರಲ್ಲಿ ಚರಣ್ ಸಿಂಗ್ ಅವರ ಭಾರತೀಯ ಕ್ರಾಂತಿ ದಳಕ್ಕೆ ಸೇರಿದರು. 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ಅನಂತರ ಮನ್ವೇಂದ್ರ ಸಿಂಗ್ ಸ್ಥಾನವನ್ನು ಗೆದ್ದಾಗ ಕಾಂಗ್ರೆಸ್ ಇಲ್ಲಿ ಮರಳಿ ಅಧಿಕಾರಕ್ಕೆ ಬಂದಿತ್ತು. ಆದರೆ ಅವರು ಜನತಾ ದಳಕ್ಕೆ ಸೇರಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಜಗಜೀವನ್ ರಾಮ್ ಅವರು ಜನ ಮೋರ್ಚಾ ಮತ್ತು ಲೋಕದಳವನ್ನು ಒಳಗೊಂಡಿರುವ ಜನತಾ ಪಕ್ಷದ ಒಡೆದ ಘಟಕಕ್ಕೆ ಸೇರಿದರು. ಮತ್ತೆ ಜನತಾ ದಳ ಟಿಕೆಟ್‌ನಲ್ಲಿ ಗೆದ್ದರು.

ಭಾರತೀಯ ಜನಸಂಘ ವಿಕಸನಗೊಂಡ ಬಳಿಕ ಸ್ವಾಮಿ ಸಚ್ಚಿದಾನಂದ ಹರಿ ಸಾಕ್ಷಿ ಜಿ. ಮಹಾರಾಜ್ ಅವರು 1991 ರಲ್ಲಿ ಮಥುರಾದಲ್ಲಿ ಬಿಜೆಪಿಗೆ ಮೊದಲ ಬಾರಿಗೆ ಗೆಲುವು ತಂದು ಕೊಟ್ಟರು. ಈ ಗೆಲುವಿನಲ್ಲಿ ಸಾಕ್ಷಿ ಮಹಾರಾಜ್ ಜಾಟ್ ಪ್ರಾಬಲ್ಯದ ಕ್ಷೇತ್ರದಲ್ಲಿ ಗೆದ್ದ ಮೊದಲ ಒಬಿಸಿ ನಾಯಕರಾದರು. ಮುಂದಿನ ಮೂರು ಚುನಾವಣೆಗಳಲ್ಲಿ 1996, 1998 ಮತ್ತು 1999ರಲ್ಲಿ ಚೌಧರಿ ತೇಜ್ವೀರ್ ಸಿಂಗ್ ಬಿಜೆಪಿಯಿಂದ ಮಥುರಾ ಸ್ಥಾನವನ್ನು ಗೆದ್ದರು.

2004ರಲ್ಲಿ ಮನ್ವೇಂದ್ರ ಸಿಂಗ್ ಗೆಲುವಿನ ಮೂಲಕ ಮತ್ತೆ ಕಾಂಗ್ರೆಸ್ ಮಥುರಾಗೆ ಮರಳಿತ್ತು. 2009ರಲ್ಲಿ ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ, ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ ಅವರು ಕಣಕ್ಕಿಳಿದು ಗೆದ್ದಿದ್ದರು. 2014ರಲ್ಲಿ ಜಯಂತ್ ಚೌಧರಿ ವಿರುದ್ಧ ಹೇಮಾ ಮಾಲಿನಿ ಅವರನ್ನು ಬಿಜೆಪಿ ಕಣಕ್ಕಿಳಿಸಿ ಗೆಲುವು ಸಾಧಿಸಿತು. 2019ರಲ್ಲೂ ಗೆಲುವು ಹೇಮಾ ಮಾಲಿನಿ ಅವರದಾಯಿತು.


ಕೃಷ್ಣನ ನಗರಿಯಲ್ಲಿ ಡ್ರೀಮ್ ಗರ್ಲ್

ಹೇಮಾ ಮಾಲಿನಿ ಅವರಿಗೆ ಸೆಲೆಬ್ರಿಟಿ ಸ್ಥಾನಮಾನ ಇತ್ತು ಮತ್ತು ಅವರು ಜಾಟ್ ಸಮುದಾಯದ ಸೊಸೆ ಎಂಬುದು ಪ್ಲಸ್ ಪಾಯಿಂಟ್. ನಟ ಧರ್ಮೇಂದ್ರ ಡಿ’ಯೋಲ್ ಅವರೊಂದಿಗಿನ ವಿವಾಹದಿಂದಾಗಿ ಅವರು ಜಾಟ್‌ಗಳು ಮತ್ತು ರೈತರ ಸಮುದಾಯದಿಂದ ಬೆಂಬಲವನ್ನು ಪಡೆದು ಚೌಧರಿ ಕುಟುಂಬ ರಾಜಕಾರಣವನ್ನು ಉರುಳಿಸಿದರು.

ಶೇ. 35ಕ್ಕಿಂತ ಹೆಚ್ಚು ಚಾಟ್ ಮತದಾರರ ಒಲವು ಹೊಂದಿರುವ ಹೇಮಾ ಮಾಲಿನಿ ಈ ಬಾರಿ ಮತ್ತೆ ಮಥುರಾದಿಂದ ಲೋಕಸಭೆಗೆ ಮರಳಲು ಬಯಸಿದ್ದಾರೆ. ಜಯಂತ್ ಚೌಧರಿ ಈಗ ಎನ್‌ಡಿಎ ಸೇರಿಕೊಂಡಿರುವುದರಿಂದ ಕೃಷ್ಣ ನಗರಿಯ ಮತಗಳು ಬಿಜೆಪಿಗೆ ಸಿಗುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ಇಲ್ಲಿ ಬಿಜೆಪಿ ಆಡಳಿತ

ಮಥುರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಾದ ಛಾಟಾ, ಮಂತ್, ಗೋವರ್ಧನ್, ಮಥುರಾ ಮತ್ತು ಬಲದೇವ್ 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಬಿಜೆಪಿಯ ಹೇಮಾ ಮಾಲಿನಿಯ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

2011 ರ ಜನಗಣತಿಯ ಪ್ರಕಾರ ಮಥುರಾ ಜಿಲ್ಲೆಯ ಒಟ್ಟು ಜನಸಂಖ್ಯೆ ಸುಮಾರು 25.5 ಲಕ್ಷ. ಮಥುರಾ ಕ್ಷೇತ್ರವು 2019 ರಲ್ಲಿ 18 ಲಕ್ಷ ಮತದಾರರನ್ನು ಹೊಂದಿತ್ತು ಮತ್ತು ಶೇ. 61ರಷ್ಟು ಇಲ್ಲಿ ಮತದಾನವಾಗಿತ್ತು.

Exit mobile version