ಲೋಕಸಭಾ ಚುನಾವಣೆ- 2024ರ (lok sabha election-2024) ಮೊದಲ ಹಂತದ ( first phase) ಚುನಾವಣೆ (election) ನಾಳೆ ದೇಶದ ಕೆಲವು ಕಡೆ ನಡೆಯಲಿದೆ. ಮತದಾರರಲ್ಲಿ (voters) ಹಲವು ಪ್ರಶ್ನೆಗಳು, ಗೊಂದಲಗಳು ಕಾಡುತ್ತಿದೆ. ಇದರಲ್ಲಿ ನಮ್ಮ ಮತವನ್ನು (vote) ಬೇರೆಯವರು ಚಲಾವಣೆ ಮಾಡಿದರೆ ಏನಾಗುತ್ತದೆ, ಈ ಸಂದರ್ಭದಲ್ಲಿ ನಾವು ಏನು ಮಾಡಬೇಕು ಎಂಬುದು ಕೂಡ ಒಂದು.
ದೇಶದ ಬಹುದೊಡ್ಡ ಚುನಾವಣೆಗಾಗಿ ಚುನಾವಣಾ ಅಧಿಕಾರಿಗಳು (election officers), ವಿವಿಧ ಪಕ್ಷಗಳ ಅಭ್ಯರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಈಗಾಗಲೇ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಆದರೆ ಇದರಲ್ಲಿ ಬಹುದೊಡ್ಡ ಪಾಲುದಾರ ಪ್ರತಿಯೊಬ್ಬ ಮತದಾರ. ಅವರ ಅಧಿಕಾರ, ಹಕ್ಕನ್ನು ಬೇರೆಯವರು ಚಲಾಯಿಸಲು ಸಾಧ್ಯವಿಲ್ಲ.
ಒಂದು ವೇಳೆ ಅಕ್ರಮವಾಗಿ ಅಥವಾ ಆಕಸ್ಮಿಕವಾಗಿ ನಮ್ಮ ಮತವನ್ನು ಬೇರೆಯವರು ಚಲಾಯಿಸಿಸಿದರೆ ಏನು ಮಾಡಬೇಕು, ಹೀಗಾದಾಗ ನಮ್ಮ ಮತದಾನದ ಹಕ್ಕನ್ನು ನಾವು ಮತ್ತೆ ಚಲಾಯಿಸಲು ಸಾಧ್ಯವೇ ? ಈ ಸಂದರ್ಭದಲ್ಲಿ ನಾವು ಏನು ಕ್ರಮ ಕೈಗೊಳ್ಳಬಹುದು ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಇದನ್ನೂ ಓದಿ: Modi Letter: ಸಾಮಾನ್ಯ ಎಲೆಕ್ಷನ್ ಅಲ್ಲ; ರಾಮನವಮಿ ದಿನವೇ ಎನ್‌ಡಿಎ ಅಭ್ಯರ್ಥಿಗಳಿಗೆ ಮೋದಿ ಪತ್ರ!
ಬೇರೆಯವರು ನಮ್ಮ ಮತ ಚಲಾಯಿಸಬಹುದೇ?
ಬೇರೆಯವರು ನಮ್ಮ ಮತ ಚಲಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ಚಲಾಯಿಸಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗದಿಂದ ಒಂದು ನಿಬಂಧನೆಯನ್ನು ಮಾಡಲಾಗಿದೆ. ಮತದಾರನ ಬಳಿ ವೋಟರ್ ಐಡಿ ಮತ್ತು ವೋಟಿಂಗ್ ಸ್ಲಿಪ್ ಇದ್ದರೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ನಿಮ್ಮ ಮತವನ್ನು ಟೆಂಡರ್ಡ್ ಬ್ಯಾಲೆಟ್ ಪೇಪರ್ ಎಂದು ಗುರುತಿಸಲಾಗುತ್ತದೆ ಮತ್ತು ಪ್ರತ್ಯೇಕವಾಗಿ ಇರಿಸಲಾಗುತ್ತದೆ.
ತಕ್ಷಣ ದೂರು ನೀಡಿ
ಮತಗಟ್ಟೆ ಅಧಿಕಾರಿಯು ಮತಗಟ್ಟೆಯೊಳಗೆ ಬರುವಾಗ ನಿಮ್ಮ ಮತವು ಈಗಾಗಲೇ ಚಲಾವಣೆಯಾಗಿದೆ ಎಂದು ತಿಳಿಸಿದರೆ ಭಾರತೀಯ ಚುನಾವಣಾ ಕಾಯಿದೆ 1961ರ ಅಡಿಯಲ್ಲಿ ಯಾರಾದರೂ ನಿಮ್ಮ ಹೆಸರಿನಲ್ಲಿ ಮತ ಚಲಾಯಿಸಿದರೆ ತಕ್ಷಣ ಸ್ಥಳದಲ್ಲಿರುವ ಪ್ರಿಸೈಡಿಂಗ್ ಅಧಿಕಾರಿಗೆ ದೂರು ನೀಡಿ. ಆಗ ಟೆಂಡರ್ಡ್ ಮತವನ್ನು ಚಲಾಯಿಸಲು ಕಾನೂನು ನಿಮಗೆ ಅವಕಾಶ ನೀಡುತ್ತದೆ.
ಚುನಾವಣಾ ನಿಯಮಗಳ ನಿಯಮ 49ಪಿ ಪ್ರಕಾರ ಟೆಂಡರ್ಡ್ ಬ್ಯಾಲೆಟ್ ಪೇಪರ್ ಅನ್ನು ನಿಮಗೆ ನೀಡಲಾಗುತ್ತದೆ ಮತ್ತು ಟೆಂಡರ್ ಮಾಡಿದ ಮತಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸಹಿ ಮಾಡಬೇಕಾಗುತ್ತದೆ. ವಿದ್ಯುನ್ಮಾನ ಮತಯಂತ್ರದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ಟೆಂಡರ್ ಮಾಡಿದ ಮತಪತ್ರವು ಬ್ಯಾಲೆಟ್ ಯೂನಿಟ್‌ನಲ್ಲಿ ಪ್ರದರ್ಶಿಸಲಾದ ಬ್ಯಾಲೆಟ್ ಪೇಪರ್‌ನಂತೆಯೇ ಇರುತ್ತದೆ. ಟೆಂಡರ್ಡ್ ಬ್ಯಾಲೆಟ್ ಪೇಪರ್ ಅನ್ನು ಪ್ರಿಸೈಡಿಂಗ್ ಅಧಿಕಾರಿಗೆ ಮರಳಿ ನೀಡಬೇಕು.
ಹೇಗೆ ಮತ ಹಾಕುವುದು?
ಬಾಣದ ಕ್ರಾಸ್ ಮಾರ್ಕ್ ರಬ್ಬರ್ ಸ್ಟಾಂಪ್ ಸಹಾಯದಿಂದ ನಿಮ್ಮ ಅಭ್ಯರ್ಥಿಯ ಆಯ್ಕೆಯನ್ನು ಗುರುತಿಸಿದ ಅನಂತರ ನೀವು ಟೆಂಡರ್ ಮಾಡಿದ ಮತಪತ್ರವನ್ನು ಪ್ರಿಸೈಡಿಂಗ್ ಅಧಿಕಾರಿಗೆ ಹಸ್ತಾಂತರಿಸಬೇಕು. ಅವರು ಅದನ್ನು ಪ್ರತ್ಯೇಕ ಕವರ್‌ನಲ್ಲಿ ಇಡುತ್ತಾರೆ.
ಚಾಲೆಂಜ್ಡ್ ವೋಟ್
ಟೆಂಡರ್ ಮಾಡಿದ ಬ್ಯಾಲೆಟ್ ಪೇಪರ್ ಅನ್ನು ಚಾಲೆಂಜ್ಡ್ ವೋಟ್ ಎಂದೂ ಕರೆಯುತ್ತಾರೆ. ಬಳಿಕ ನಿಮ್ಮ ಜಾಗದಲ್ಲಿ ಯಾರು ಮತ ಹಾಕಿದ್ದಾರೆ ಎಂಬುದನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ಅದನ್ನು ತೆಗೆದು ನಿಮ್ಮ ಮತವನ್ನು ಎಣಿಕೆಗೆ ಹಾಕಲಾಗುತ್ತದೆ.
ಗುರುತಿನ ಪುರಾವೆ ನೀಡಬೇಕು
ಮತದಾರರಾಗಿ ನಿಮ್ಮ ಗುರುತಿನ ಬಗ್ಗೆ ಯಾವುದೇ ಅಭ್ಯರ್ಥಿಯ ಪೋಲಿಂಗ್ ಏಜೆಂಟ್ ಪ್ರಶ್ನಿಸಿದರೆ ಚುನಾವಣಾ ಅಧಿಕಾರಿಗಳು ನಿಮ್ಮ ಗುರುತಿನ ಪುರಾವೆಯನ್ನು ಕೇಳುತ್ತಾರೆ. ಇದಕ್ಕಾಗಿ ನೀವು ಎಪಿಕ್ ಅಥವಾ ಪಾಸ್‌ಪೋರ್ಟ್, ರೇಷನ್ ಕಾರ್ಡ್‌ನಂತಹ ಯಾವುದೇ ದಾಖಲೆಯನ್ನು ಹೊಂದಿರಬೇಕು. ಆದರೂ ಅವರು ಸವಾಲು ಮಾಡಿ ಮತದಾನಕ್ಕೆ ಅನುಮತಿ ನೀಡದೇ ಇದ್ದರೆ ಪ್ರಿಸೈಡಿಂಗ್ ಅಧಿಕಾರಿಯಿಂದ ಲಿಖಿತ ದೂರನ್ನು ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ.
ಎಷ್ಟು ಮತದಾರರು?
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಸುಮಾರು 97 ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಭಾರತದಲ್ಲಿ 96.88 ಕೋಟಿ ಜನರು ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ, ಇದು ವಿಶ್ವದ ಅತಿದೊಡ್ಡ ಮತದಾರರ ಪೂಲ್ ಆಗಿದೆ. ಆಯೋಗದ ಪ್ರಕಾರ, 2019 ರ ಲೋಕಸಭಾ ಚುನಾವಣೆ ಬಳಿಕ ನೋಂದಾಯಿತ ಮತದಾರರ ಸಂಖ್ಯೆ ಶೇ. 6ರಷ್ಟು ಹೆಚ್ಚಾಗಿದೆ.
ಯಾವಾಗ ನಡೆಯಲಿದೆ ಚುನಾವಣೆ?
2024ರ ಲೋಕಸಭೆ ಚುನಾವಣೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್ 19 ರಂದು ಪ್ರಾರಂಭವಾಗಲಿದೆ. ಬಳಿಕ ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1ರಂದು ಮತದಾನ ನಡೆದು ಮತ ಎಣಿಕೆಯು ದೇಶಾದ್ಯಂತ ಜೂನ್ 4 ರಂದು ನಡೆಯಲಿದೆ.