Site icon Vistara News

IPL 2024 : ಕೊಹ್ಲಿಯ ಸ್ಟ್ರೈಕ್ ರೇಟ್ ಪ್ರಶ್ನಿಸುವವರಿಗೆ ತಕ್ಕ ಪಾಠ ಹೇಳಿದ ಕೈಫ್​, ಪಠಾಣ್​​

IPL 2024

ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್​ 2024ರ (IPL 2024) ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್ (SRH) ತಂಡದ ಆರಂಭಿಕ ಬ್ಯಾಟರ್​ ಟ್ರಾವಿಸ್ ಹೆಡ್ (Travis Head)) 44 ಎಸೆತಗಳಲ್ಲಿ 58 ರನ್ ಗಳಿಸಿದ್ದಾರೆ. ಸಾಮಾನ್ಯವಾಗಿ, ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಆಟಗಾರ ಆರಂಭದಿಂದಲೂ ಬೌಲರ್​ಗಳನ್ನು ದಂಡಿಸುತ್ತಾರೆ. ಪವರ್​ಪ್ಲೇನಲ್ಲಿ ಪ್ರಾಬಲ್ಯ ಸಾಧಿಸುತ್ತಾರೆ. ಆದಾಗ್ಯೂ, ಅವರು ತಮ್ಮ ಪಾಲುದಾರರಾದ ಅಭಿಷೇಕ್ ಶರ್ಮಾ ಮತ್ತು ಅನ್ಮೋಲ್​ಪ್ರೀತ್​ ಸಿಂಗ್ ಅವರನ್ನು ಬೇಗನೆ ಕಳೆದುಕೊಂಡಿದ್ದರಿಂದ ಹೆಡ್ ಇನ್ನಿಂಗ್ಸ್ ಕಟ್ಟಲು ನಿರ್ಧರಿಸಿದ್ದರು. ಹೀಗಾಗಿ ಅವರು ಸ್ಟ್ರೈಕ್​​ರೇಟ್ (Strike Rate)​ ಕುಸಿಯಿತು.

ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಮೊಹಮ್ಮದ್ ಕೈಫ್ ಇದನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಕೊಹ್ಲಿಯ ಸ್ಟ್ರೈಕ್​ರೇಟ್​ ಬಗ್ಗೆ ಮಾತನಾಡುವವರಿಗೆ ಪಾಠ ಹೇಳಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ಅಂತಹ ಇನ್ನಿಂಗ್ಸ್ ಆಡಿದ್ದರೆ ಅವರ ಸ್ಟ್ರೈಕ್ ರೇಟ್ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿದ್ದವು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಕಷ್ಟು ರನ್ ಗಳಿಸಿ, ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಐಪಿಎಲ್ 2024 ರಾದ್ಯಂತ ಕೊಹ್ಲಿ ಅವರ ಸ್ಟ್ರೈಕ್ ರೇಟ್​ ಕಾರಣಕ್ಕೆ ಟೀಕೆ ಎದುರಿಸಿದ್ದಾರೆ. ಹೆಡ್ ಅವರ ಇನ್ನಿಂಗ್ಸ್ ಅನ್ನು ನೋಡಿದ ಪಠಾಣ್ ಮತ್ತು ಕೈಫ್ ಕೊಹ್ಲಿಯ ರಕ್ಷಣೆಗೆ ಧಾವಿಸಿದ್ದಾರೆ. ಪ್ರತಿಯೊಬ್ಬ ಕ್ರಿಕೆಟಿಗನನ್ನು ಸಮಾನವಾಗಿ ಪರಿಗಣಿಸಬೇಕು ಎಂದು ವಾದ ಮಂಡಿಸಿದ್ದಾರೆ.

ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರವರು ಆಡುತ್ತಾರೆ. ಉತ್ತಮ ಬೌಲಿಂಗ್ ಮತ್ತು ಎಲ್ಲವೂ ಇದಕ್ಕೆ ಸೇರ್ಪಡೆಯಾಗುತ್ತದೆ. ಏನೇ ಹೇಳಿದರೂ ಪ್ರತಿಯೊಬ್ಬ ಕ್ರಿಕೆಟಿಗನನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಇರ್ಫಾನ್ ವೀಕ್ಷಕವಿವರಣೆಯ ಸಮಯದಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೈಫ್​​ “ನೀವು ಹೇಳಿದ್ದು ಸರಿ. ಇದು ವಿರಾಟ್ ಕೊಹ್ಲಿ ಆಗಿದ್ದರೆ, ಜನರು 44 ಎಸೆತಗಳಲ್ಲಿ ಕೇವಲ 58 ರನ್ ಗಳಿಸುತ್ತಿದ್ದಾರೆ ಎಂದು ಟೀಕಿಸುತ್ತಿದ್ದರು. ಅದು ಕಡಿಮೆ ಎಂದು ಅವರು ಹೇಳುತ್ತಿದ್ದರು ಮತ್ತು ಅವರ ಸ್ಟ್ರೈಕ್ ರೇಟ್ ಬಗ್ಗೆ ಚರ್ಚೆಗಳು ನಡೆಯುತ್ತಿತ್ತು. ಇದು ಹೆಡ್ ಅವರ ಉತ್ತಮ ಇನ್ನಿಂಗ್ಸ್ ಎಂದು ನಾನು ನಂಬುತ್ತೇನೆ,” ಎಂದು ಕೈಫ್ ಹೇಳಿದರು.

ಇದನ್ನೂ ಓದಿ: IPL 2024 : ರಾಜಸ್ಥಾನ್​ ಸೋಲಿನ ಬಳಿಕ ಮೊಹಮ್ಮದ್ ಕೈಫ್​ ಟ್ರೋಲ್ ಮಾಡಿದ ವಾಸಿಮ್ ಜಾಫರ್​!

“ಆದರೆ ವಿರಾಟ್ ಕೊಹ್ಲಿ ಇದ್ದಿದ್ದರೆ, ಜನರು ಸ್ಟ್ರೈಕ್ ರೇಟ್​​ಗೆ ಅಂಟಿಕೊಳ್ಳುತ್ತಿದ್ದರು. ಆದರೆ ಇಲ್ಲಿ ನಾವು ತಂಡದ ಗೆಲುವಿನ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೇವೆ. ಆದ್ದರಿಂದ ದಯವಿಟ್ಟು ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ” ಎಂದು ಇರ್ಫಾನ್ ಅಭಿಪ್ರಾಯ ಮಂಡಿಸಿದರು.

ಹೆಡ್ ಅವರ 58 ಮತ್ತು ನಿತೀಶ್ ರೆಡ್ಡಿ ಅವರ 76* ರನ್​ಗಳ ನೆರವಿನಿಂದ ಎಸ್​ಆರ್​ಎಚ್​ ರಾಜಸ್ಥಾನ್ ವಿರುದ್ಧ 201 ರನ್ ಗಳಿಸಲು ನೆರವಾಯಿತು. ಚೇಸಿಂಗ್ ವಿಷಯಕ್ಕೆ ಬಂದಾಗ, ಸಂಜು ಸ್ಯಾಮ್ಸನ್ ನೇತೃತ್ವದ ತಂಡವು ಹೆಚ್ಚಿನ ಸಮಯ ಗೆಲುವಿಗಾಗಿ ಹಂಬಲಿಸಿತು. ಆದರೆ ಕೊನೆಯಲ್ಲಿ ಕೇವಲ ಒಂದು ರನ್​ನಿಂದ ಸೋತಿತು. ಈ ಗೆಲುವಿನೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರೆ, ರಾಜಸ್ಥಾನ ಅಗ್ರಸ್ಥಾನದಲ್ಲಿದೆ.

Exit mobile version