ಒಂದು ಕಾಲದಲ್ಲಿ ಶಾಂತಿಯುತವಾದ ಗ್ರಾಮ ಎಂದು ಕರೆಸಿಕೊಂಡ ಶಕ್ತಿಗಢದ ನಾಡುರ್ ಝಪನತಾಲಾ ಆದಿವಾಸಿ ಪ್ಯಾರಾ ಎಂಬ ಗ್ರಾಮದಲ್ಲಿ (ಪಶ್ಚಿಮ ಬಂಗಾಲ) ಈಗ ಹಿಂಸಾಚಾರದ ಕೃತ್ಯಗಳೇ ನಡೆಯುತ್ತಿವೆ. ಈ ಗ್ರಾಮದಲ್ಲಿ 25 ವರ್ಷದ ಪ್ರಿಯಾಂಕಾ ಹನ್ಸ್ಡಾ ಎಂಬ ಯುವತಿಯ ತಲೆ ಕಡಿದ (Murder Case) ರಕ್ತಸಿಕ್ತ ದೇಹವು ಅವರ ಕುಟುಂಬದ ಹೊಲದಲ್ಲಿ ಪತ್ತೆಯಾಗಿದೆ. ಇದು ಅಲ್ಲಿನ ಜನರಲ್ಲಿ ಆಘಾತವನ್ನುಂಟು ಮಾಡಿದೆ. ಈ ಪ್ರದೇಶದ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳಗಳನ್ನು ಹುಟ್ಟು ಹಾಕಿದೆ.
ವರದಿ ಪ್ರಕಾರ, ಇತ್ತೀಚೆಗೆ ಬೆಂಗಳೂರಿನಿಂದ ಮನೆಗೆ ಮರಳಿದ್ದ ಪ್ರಿಯಾಂಕಾ, ಬಾತ್‍ರೂಂಗೆ ಹೋಗುತ್ತಿರುವುದಾಗಿ ಕುಟುಂಬದವರಿಗೆ ತಿಳಿಸಿದ್ದಳು. ನಂತರ ನಾಪತ್ತೆಯಾಗಿದ್ದಳು. ಅವಳು ಹಿಂತಿರುಗಿ ಬರದಿದ್ದಾಗ, ಚಿಂತೆಗೀಡಾದ ಅವಳ ತಾಯಿ ಅವಳನ್ನು ಹುಡುಕಲು ಪ್ರಾರಂಭಿಸಿದರು. ಆದರೆ ಪ್ರಿಯಾಂಕಾ ಅವಳ ನಿರ್ಜೀವ ದೇಹವು ಕುಟುಂಬದವರ ಹೊಲದಲ್ಲೇ ಬಿದ್ದಿತ್ತು. ಅವಳ ಕುತ್ತಿಗೆಯನ್ನು ಕತ್ತರಿಸಲಾಗಿತ್ತು. ಈ ಭಯಾನಕ ದೃಶ್ಯವು ಅವಳ ಕುಟುಂಬವನ್ನು ಆಘಾತಕ್ಕೀಡುಮಾಡಿದೆ. ಈ ಬಗ್ಗೆ ಅವಳ ಸಮುದಾಯವು ಆಕ್ರೋಶಗೊಂಡಿದೆ.
ಸ್ಥಳೀಯ ಪೊಲೀಸರು ಈ ಪ್ರಕರಣದ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಕ್ರೂರ ದಾಳಿಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾದಂತಾಗಿದೆ. ಅಪರಾಧಿಗಳನ್ನು ಕೂಡಲೇ ಕಂಡುಹಿಡಿದು ಶಿಕ್ಷಿಸುವಂತೆ ಜನಾಗ್ರಹ ಕೇಳಿ ಬರುತ್ತಿದೆ. ಪ್ರಿಯಾಂಕಾ ಅವರ ಹತ್ಯೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಿಳೆಯರನ್ನು ರಕ್ಷಿಸುವ ಮಮತಾ ಬ್ಯಾನರ್ಜಿ ಅವರ ರಾಜ್ಯ ಸರ್ಕಾರದ ಬದ್ಧತೆಯನ್ನು ಜನರು ಪ್ರಶ್ನಿಸುತ್ತಿದ್ದಾರೆ.
ಈ ನಡುವೆ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಅವಳು ಕೊನೆಯದಾಗಿ ಚಾಟ್ ಮಾಡಿದ ಮತ್ತು ಅವಳು ಮನೆಯಿಂದ ಹೊರಟಾಗ ಕರೆ ಮಾಡಿದ ಜನರನ್ನು ಪತ್ತೆ ಹಚ್ಚಿದ್ದಾರೆ. ಜಿಲ್ಲಾ ಪೊಲೀಸರ ಅಧಿಕಾರಿಗಳ ಪ್ರಕಾರ, ಮನೆಯಿಂದ ಹೊರಡುವ ಮೊದಲು ಸಂತ್ರಸ್ತೆಗೆ ಬಂದ ಕರೆ ಅವಳಿಗೆ ಚೆನ್ನಾಗಿ ತಿಳಿದಿರುವ ವ್ಯಕ್ತಿಯಿಂದ ಬಂದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಅಟಲ್ ಸೇತು ಮೇಲಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ? ವಿಡಿಯೊ ನೋಡಿ
ಆಗಸ್ಟ್ 12ರಂದು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಕ್ರೂರ ಸಾವಿನ ಬಗ್ಗೆ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಈ ಬೆಳವಣಿಗೆ ಸಂಭವಿಸಿದೆ. ವೈದ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸರು ಶಂಕಿತನನ್ನು ಬಂಧಿಸಿದ್ದಾರೆ. ಕೋಲ್ಕತಾ ಹೈಕೋರ್ಟ್‍ನ ಆದೇಶದ ಮೇರೆಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಯನ್ನು ವಹಿಸಿಕೊಂಡಿದೆ.