Site icon Vistara News

Panaji tour: ಮೋಡಿ ಮಾಡುವ ಪಣಜಿ; ಗೋವಾ ಸುಂದರ ಲೋಕದ ಗೇಟ್‌ವೇ!

Panaji tour

ಗೋವಾ ಪ್ರವಾಸ (goa tour) ಮಾಡುವ ಯೋಚನೆಯಲ್ಲಿದ್ದರೆ ಗೋವಾದ ರಾಜಧಾನಿ ಪಣಜಿಗೆ (panaji tour) ಭೇಟಿ ನೀಡಲು ಮರೆಯದಿರಿ. ಮಹಾನದಿ (mahanadi), ಮಹದಾಯಿ ಎಂದು ಕರೆಯಲ್ಪಡುವ ಮಾಂಡೋವಿ ನದಿ ದಡದಲ್ಲಿರುವ ಈ ಸುಂದರ ನಗರ ಜನನಿಬಿಡವಾಗಿದ್ದರೂ ಅಲ್ಲಿನ ದೃಶ್ಯಾವಳಿಗಳು ಪ್ರವಾಸಿಗರನ್ನು ಮಂತ್ರಮುಗ್ದರಾಗುವಂತೆ ಮಾಡುತ್ತದೆ. ಪ್ರಪಂಚದಾದ್ಯಂತ ಇಲ್ಲಿಗೆ ದೋಣಿ, ಹಡಗುಗಳ ಸಂಪರ್ಕವಿದೆ. ಹೊರದೇಶಗಳಿಂದಲೂ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಪಣಜಿಯನ್ನು ಇಷ್ಟಪಡಲು ಸಾಕಷ್ಟು ಕಾರಣಗಳಿವೆ. ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಹೊಂದಿರುವ ಸುಂದರ ದೃಶ್ಯಾವಳಿಗಳನ್ನು ನಗರದಲ್ಲಿ ಕಾಣಬಹದು. ಜನನಿಬಿಡ ಪ್ರದೇಶವಾಗಿರುವ ನಗರದ ಬೀದಿಗಳು ಯಾವಾಗಲೂ ಗದ್ದಲದಿಂದ ಕೂಡಿರುತ್ತದೆ. ಈ ನಡುವೆಯೇ ಅತ್ಯಂತ ಸುಂದರವಾದ ವಸಾಹತುಶಾಹಿ ವಾಸ್ತುಶೈಲಿಯು ಗಮನ ಸೆಳೆಯುತ್ತದೆ.

ಇಲ್ಲಿನ ಶ್ರೀಮಂತ ಪರಂಪರೆ, ಸಾಂಸ್ಕೃತಿಕ ಆಕರ್ಷಣೆಗಳು, ಪ್ರಶಾಂತ ವಾತಾವರಣ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಶಾಂತಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ದೇಶ, ವಿದೇಶಗಳಿಂದ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಪಣಜಿ ಅಷ್ಟೊಂದು ಪ್ರಸಿದ್ಧವಾಗಲು ಹಲವು ಕಾರಣಗಳಿವೆ. ಅದೇನು ಗೊತ್ತೇ?

ಇದನ್ನೂ ಓದಿ: Tour Guide: ದೇವಾಲಯಗಳ ಪಟ್ಟಣ ತಿರುವಣ್ಣಾಮಲೈ; ಒಮ್ಮೆ ನೋಡಲೇಬೇಕಾದ ಸ್ಥಳ

ವಸಾಹತುಶಾಹಿ ಪರಂಪರೆ

ಭೂತಕಾಲಕ್ಕೆ ಒಂದು ಹೆಜ್ಜೆಯಂತೆ ಕಾಣುವ ಪಣಜಿ ವಸಾಹತು ಪರಂಪರೆ ಹಜ್ಜೆಗುರುತಾಗಿದೆ. ಇಲ್ಲಿನ ನಗರದ ಬೀದಿಗಳು ವರ್ಣಮಯವಾಗಿದ್ದು, ನಡೆದಾಡುವಾಗ ಉದ್ದಕ್ಕೂ ಚಿತ್ರಕಲೆಯೊಳಗೆ ಹೆಜ್ಜೆ ಹಾಕಿದಂತೆ ಭಾಸವಾಗುತ್ತದೆ. ಎಲ್ಲಿ ನೋಡಿದರೂ ಗೋವಾದ ಮೇಲೆ ಪೋರ್ಚುಗಲ್‌ನ ಸ್ಟಾಂಪ್‌ನ ಪುರಾವೆಗಳನ್ನು ಕಾಣಬಹುದು. ಎಷ್ಟು ನೋಡಿದರೂ ಕಣ್ಣಿಗೆ ದಣಿವಾಗದು. ಅಂಕುಡೊಂಕಾದ ದಾರಿಯಲ್ಲಿ ನಡೆದು ನೀಲಿಬಣ್ಣದ ಮನೆಗಳನ್ನು ಕಾಣಬಹುದು. ಇಲ್ಲಿ ಪ್ರಸಿದ್ದವಾಗಿರುವ ಫಾಂಟೈನ್‌ಹಾಸ್‌ ಪೋರ್ಚುಗೀಸ್ ಆಳ್ವಿಕೆಯಲ್ಲಿದ್ದಾಗ ಪಣಜಿಯ ಐತಿಹಾಸಿಕ ಕ್ವಾರ್ಟರ್ ಎಂದು ಕರೆಯಲಾಗುತ್ತಿತ್ತು. ಸಂಕೀರ್ಣವಾದ ಬಾಲ್ಕನಿಗಳು, ಅಲಂಕೃತ ಬಾಗಿಲುಗಳನ್ನು ಹೊಂದಿರುವ ಕಟ್ಟಡ ಗಳು ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ.

ಚರ್ಚು, ದೇವಾಲಯಗಳು

ಪಣಜಿಯಲ್ಲಿ ಪ್ರತಿ ಕಿಲೋ ಮೀಟರ್‌ಗೆ ಒಂದರಂದೇ ಧಾರ್ಮಿಕ ಹೆಗ್ಗುರುತುಗಳಿವೆ. ಪ್ರಪಂಚದ ಎಲ್ಲೂ ಇರದಷ್ಟು ಚರ್ಚು, ದೇವಾಲಯಗಳು ಇಲ್ಲಿ ನೆಲೆಯಾಗಿದೆ. ಅವರ್ ಲೇಡಿ ಆಫ್ ದಿ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್ ಗೋವಾದ ಅತ್ಯಂತ ಹಳೆಯ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಒಂದು. ಇದರ ಹೊರಗೆ ಪ್ರಕಾಶಮಾನವಾದ ಬಿಳಿ ಬಣ್ಣವು ಸೂರ್ಯನ ಬೆಳಕಿನಲ್ಲಿ ಮತ್ತಷ್ಟು ಪ್ರಕಾಶಮಾನವಾಗಿ ಹೊಳೆಯುತ್ತದೆ. ಇಲ್ಲಿನ ಮತ್ತೊಂದು ಪ್ರಸಿದ್ಧ ದೇವಾಲಯ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿರುವ ಮಹಾಲಕ್ಷ್ಮಿ ದೇವಸ್ಥಾನ. ಸಾಕಷ್ಟು ಮಂದಿ ಭಕ್ತರು ಮತ್ತು ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ.

ವಾಯುವಿಹಾರ ತಾಣ

ಮನಸ್ಸಿಗೆ ಶಾಂತಿ, ನಿಶ್ಯಬ್ದವಿರುವ ಸ್ಥಳವನ್ನು ಅರಸುತ್ತಿದ್ದರೆ ಪಣಜಿ ನದಿಯ ಮುಂಭಾಗದಲ್ಲಿರುವ ವಾಯುವಿಹಾರ ತಾಣಕ್ಕೆ ಭೇಟಿ ನೀಡಬಹುದು. ಇಲ್ಲಿ ಕುಳಿತುಕೊಳ್ಳಲು ನೂರಾರು ಬೆಂಚುಗಳು ಅಥವಾ ನೀನೆರಳು ನೀಡುವ ತಾಳೆ ಮರಗಳು ಇವೆ. ಒಂದಕ್ಕೊಂದು ಸಾಲಾಗಿ ನಿಂತಿರುವ ತಾಳೆ ಮರಗಳನ್ನು ನೋಡುವುದು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಉದ್ಯಾನಗಳು ಸುತ್ತಲೂ ನಡೆಯಲು ಉತ್ತಮವಾದ ಸ್ಥಳವಿದೆ.


ಸಾಂಸ್ಕೃತಿಕ ಕೇಂದ್ರ

ಪಣಜಿಯನ್ನು ಸಾಂಸ್ಕೃತಿಕ ಕೇಂದ್ರವೆಂದು ಪರಿಗಣಿಸಲಾಗಿದೆ. ಇಲ್ಲಿನ ಸ್ಥಳೀಯ ಗ್ಯಾಲರಿಗಳಲ್ಲಿ ನಿರಂತರ ಕಲಾ ಪ್ರದರ್ಶನಗಳು ನಡೆಯುತ್ತಿರುತ್ತದೆ. ಪಟ್ಟಣದಾದ್ಯಂತ ಇರುವ ಥಿಯೇಟರ್‌ಗಳಲ್ಲಿ ವಿವಿಧ ಪ್ರದರ್ಶನಗಳು, ಲೈವ್ ಸಂಗೀತ ಕಛೇರಿಗಳು ನಿರಂತರವಾಗಿ ನಡೆಯುತ್ತದೆ. ಇಲ್ಲಿ ಫೆಬ್ರವರಿಯಲ್ಲಿ ಕಾರ್ನೀವಲ್ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ವರ್ಣರಂಜಿತ ಮೆರವಣಿಗೆ, ನೃತ್ಯ ಪ್ರದರ್ಶನಗಳು ತಿಂಗಳಾದ್ಯಂತ ಬೀದಿಯಲ್ಲಿ ನಡೆಯುತ್ತದೆ. ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಆಹಾರ ವಿಶೇಷ

ಪಣಜಿಯಲ್ಲಿ ಬಗೆಬಗೆಯ ಖಾದ್ಯಗಳ ರುಚಿ ನೋಡಬಹುದು. ಎಲ್ಲಾ ರೀತಿಯ ಸುವಾಸನೆಗಳಿಂದ ತುಂಬಿರುವ ಈ ನಗರವು ಸಾಂಪ್ರದಾಯಿಕ ಪಾಕವಿಧಾನಗಳಿಗೆ ಮತ್ತು ಅಂತಾರಾಷ್ಟ್ರೀಯ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ. ರುಚಿಕರವಾದ ಆಹಾರವನ್ನೊದಗಿಸುವ ಸಾಕಷ್ಟು ರೆಸ್ಟೋರೆಂಟ್‌ ಗಳು ಇಲ್ಲಿವೆ. ಅದರಲ್ಲೂ ಇಲ್ಲಿನ ತಾಜಾ ಸಮುದ್ರಾಹಾರ ವಿಶ್ವಪ್ರಸಿದ್ಧವಾಗಿದೆ. ಇಲ್ಲಿ ಪೋರ್ಚುಗೀಸರ ಖಾದ್ಯಗಳ ಅದರಲ್ಲೂ ಮುಖ್ಯವಾಗಿ ಚೊರಿಜೊ ಪಾವೊ ನ ರುಚಿ ನೋಡಲು ಮರೆಯದಿರಿ.


ಗೋವಾ ಗೇಟ್‌ವೇ

ಗೋವಾದ ರಾಜಧಾನಿ ಪಣಜಿಯನ್ನು ಗೋವಾದ ಗೇಟ್ ವೇ ಎಂದು ಕರೆಯಬಹುದು. ಪ್ರತಿ ವರ್ಷ ಅಪಾರ ಸಂಖ್ಯೆಯ ಜನರನ್ನು ಆಕರ್ಷಿಸುವ ಈ ನಗರವು ಹಲವಾರು ಸಾಂಸ್ಕೃತಿಕ ತಾಣಗಳು ಮತ್ತು ನೈಸರ್ಗಿಕ ವಿಸ್ಮಯಗಳನ್ನು ಹೊಂದಿದೆ.

ಪಣಜಿಗೆ ಹತ್ತಿರವಾಗಿ ಬೀಚ್‌ಗಳಾದ ಕಾಲಾಂಗುಟ್, ಬಾಗಾ ಅಥವಾ ಅಂಜುನಾ ಕ್ಕೂ ಪ್ರವಾಸಿಗರು ಭೇಟಿ ನೀಡಬಹುದು. ಇಲ್ಲಿ ಈಜಬಹುದು, ಸರ್ಫಿಂಗ್ ಮಾಡಬಹುದು. ಅಲ್ಲದೇ ಹಳೆಯ ಗೋವಾದ ಚರ್ಚ್‌ಗಳು, ಫೋರ್ಟ್ ಅಗುಡಾ ಮತ್ತು ದೂದ್‌ಸಾಗರ್ ಜಲಪಾತಗಳು ಪಣಜಿಗೆ ಹತ್ತಿರವಾಗಿ ಇದೆ.

Exit mobile version