Site icon Vistara News

PM Modi: ಚುನಾವಣಾ ಬಾಂಡ್ ರದ್ದುಪಡಿಸಿದ್ದಕ್ಕೆ ಮುಂದೊಮ್ಮೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದ ಮೋದಿ

PM Modi

ಹೊಸದಿಲ್ಲಿ: ಕಪ್ಪುಹಣವನ್ನು (black money) ತಡೆಗಟ್ಟುವ ಗುರಿ ಹೊಂದಿದ್ದ ಚುನಾವಣಾ ಬಾಂಡ್‌ಗಳ (electoral bond) ಯೋಜನೆಯನ್ನು ಸುಪ್ರೀಂ ಕೋರ್ಟ್ (Supreme Court ) ಆದೇಶದನ್ವಯ ಫೆಬ್ರವರಿಯಲ್ಲಿ ರದ್ದು ಪಡಿಸಿರುವುದಕ್ಕೆ ಮುಂದೆ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದ್ದಾರೆ. ಈ ಯೋಜನೆ ರದ್ದತಿಯಿಂದಾಗಿ ಕಪ್ಪು ಹಣವನ್ನು ಪ್ರೋತ್ಸಾಹಿಸಿದಂತಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಚುನಾವಣಾ ಬಾಂಡ್ ಯೋಜನೆ ಬಗ್ಗೆ ವಿರೋಧ ಪಕ್ಷಗಳು ಸುಳ್ಳನ್ನು ಹರಡುತ್ತಿವೆ. ಪ್ರಾಮಾಣಿಕವಾಗಿ ಯೋಚಿಸಿದಾಗ ಪ್ರತಿಯೊಬ್ಬರೂ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹೇಳಿದರು.

ತಮ್ಮ ಸರ್ಕಾರ ಪ್ರಾರಂಭಿಸಿದ್ದ ಚುನಾವಣಾ ಬಾಂಡ್‌ಗಳ ಯೋಜನೆಯು ‘ಕಪ್ಪುಹಣ’ದ ಬಳಕೆಯ ವಿರುದ್ಧ ಹೋರಾಡಲು ಉದ್ದೇಶಿಸಿತ್ತು ಎಂದ ಅವರು, ಚುನಾವಣಾ ಸಮಯದಲ್ಲಿ ‘ಕಪ್ಪುಹಣ’ಕ್ಕೆ ಕಡಿವಾಣ ಹಾಕಲು ತಮ್ಮ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿತ್ತು ಎಂದರು.

ಇದನ್ನೂ ಓದಿ: PM Modi: ಕುಣಿಯಲು ಬಾರದವರು ನೆಲ ಡೊಂಕು ಅಂದಂತೆ! ಮತಯಂತ್ರ ಆಕ್ಷೇಪಿಸುವ ಪ್ರತಿಪಕ್ಷಗಳಿಗೆ ಮೋದಿ ಟಾಂಗ್‌

ಕಪ್ಪು ಹಣವು ಚುನಾವಣೆ ಸಮಯದಲ್ಲಿ ಅಪಾಯಕಾರಿ ಆಟಗಳನ್ನು ಆಡುತ್ತದೆ. ಈ ಬಗ್ಗೆ ದೇಶದಲ್ಲಿ ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ. ಕಪ್ಪು ಹಣವನ್ನೇ ಎಲ್ಲರೂ ಚುನಾವಣೆ ವೇಳೆ ಖರ್ಚು ಮಾಡುತ್ತಾರೆ. ಇದನ್ನು ಯಾರೂ ನಿರಾಕರಿಸುವುದಿಲ್ಲ. ನಮ್ಮ ಪಕ್ಷವೂ ಖರ್ಚು ಮಾಡುತ್ತದೆ. ಈ ಹಣವನ್ನು ಏನಾದರೂ ಮಾಡಿ ಪಾರದರ್ಶಕ ಮಾಡಲು ಪ್ರಯತ್ನಿಸಲು ನಾನು ಬಯಸಿದ್ದೆ ಎಂದು ಮೋದಿ ಹೇಳಿದರು.

ಸುಪ್ರೀಂ ಕೋರ್ಟ್ ಆದೇಶವೇನು?

ಚುನಾವಣಾ ಬಾಂಡ್ ಗಳ ಮೂಲಕ ಖಾಸಗಿ ವ್ಯಕ್ತಿಗಳು ಮತ್ತು ಕಾರ್ಪೊರೇಟ್‌ಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸಂಪೂರ್ಣ ಅನಾಮಧೇಯವಾಗಿ ದೇಣಿಗೆ ನೀಡಬಹುದಿತ್ತು. ಆದರೆ ಇದನ್ನು ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ನಿಂದ ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಈ ಯೋಜನೆಯು ಎರಡು ಅಂಶಗಳಲ್ಲಿ ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ಇದು ಜನರ ಮಾಹಿತಿ ಹಕ್ಕು ಮತ್ತು ಸಮಾನತೆಯ ಹಕ್ಕನ್ನು ಉಲ್ಲಂಘಿಸಿದೆ. ಖರೀದಿದಾರರು ಮತ್ತು ಫಲಾನುಭವಿಗಳ ಬಗ್ಗೆ ಡೇಟಾವನ್ನು ಬಿಡುಗಡೆ ಮಾಡುವಂತೆ ಬಾಂಡ್‌ಗಳ ಏಕೈಕ ಮಾರಾಟದ ಕೇಂದ್ರವಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು.

ಮಸೂದೆ ಸುಧಾರಣೆಗೆ ಅವಕಾಶವಿದೆ

ಚುನಾವಣಾ ಬಾಂಡ್ ಗಳು ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂಬುದನ್ನು ತೋರಿಸಲು ಅವಕಾಶ ಮಾಡಿಕೊಟ್ಟಿದೆ. ಈ ಯೋಜನೆಯ ಮೂಲಕ ರಾಜಕೀಯ ಪಕ್ಷಗಳಿಗೆ ಸಾಕಷ್ಟು ಮಂದಿ ಕೊಡುಗೆಗಳನ್ನು ನೀಡಿದ್ದಾರೆ. ಯೋಜನೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ.
ಸಂಬಂಧಿತ ಮಸೂದೆಯನ್ನು ಅಂಗೀಕರಿಸಿದಾಗ ಚುನಾವಣಾ ಬಾಂಡ್‌ಗಳ ಯೋಜನೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದಿತ್ತು ಮತ್ತು ಈಗ ಅದರ ಬಗ್ಗೆ ಪ್ರತಿಕ್ರಿಯಿಸುತ್ತಿರುವ ಕೆಲವರು ಅದನ್ನು ಬೆಂಬಲಿಸಿದ್ದಾರೆ ಎಂದು ಮೋದಿ ಹೇಳಿದರು.

ಈ ಯೋಜನೆಯ ಮೂಲಕ ದೇಣಿಗೆ ನೀಡಿದ 3,000 ಕಂಪನಿಗಳ ಪೈಕಿ 26 ಕಂಪನಿಗಳು ಮಾತ್ರ ಇಡಿಯಂತಹ ತನಿಖಾ ಸಂಸ್ಥೆಗಳಿಂದ ಕ್ರಮವನ್ನು ಎದುರಿಸುತ್ತಿವೆ. ಈ 26 ಕಂಪನಿಗಳಲ್ಲಿ 16 ಮಂದಿ ಚುನಾವಣಾ ಬಾಂಡ್‌ಗಳನ್ನು ತೆಗೆದುಕೊಂಡಿದ್ದರು. ಈ 16 ಕಂಪನಿಗಳಲ್ಲಿ ಶೇಕಡಾ 37ರಷ್ಟು ಮೊತ್ತವು ಬಿಜೆಪಿಗೆ ಮತ್ತು ಶೇಕಡಾ 63ರಷ್ಟು ವಿರೋಧ ಪಕ್ಷಗಳಿಗೆ ಹೋಗಿದೆ ಎಂದು ಮೋದಿ ವಿವರಿಸಿದರು.

Exit mobile version