Site icon Vistara News

PM Modi: ಕುಣಿಯಲು ಬಾರದವರು ನೆಲ ಡೊಂಕು ಅಂದಂತೆ! ಮತಯಂತ್ರ ಆಕ್ಷೇಪಿಸುವ ಪ್ರತಿಪಕ್ಷಗಳಿಗೆ ಮೋದಿ ಟಾಂಗ್‌

PM Modi

ಹೊಸದಿಲ್ಲಿ: ಕುಣಿಯಲು ಬಾರದವರು ನೆಲ ಡೊಂಕು ಅಂದಂತೆ ಎನ್ನುವ ಮೂಲಕ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

ಜಾರಿ ನಿರ್ದೇಶನಾಲಯ (ED), ಸಿಬಿಐ (CBI) ಅಥವಾ ಚುನಾವಣಾ ಆಯೋಗ (EC) ಇದಕ್ಕೆ ಸಂಬಂಧಿಸಿದ ಕಾನೂನನ್ನು ನನ್ನ ಸರ್ಕಾರ ಮಾಡಿದಲ್ಲ. ಅವುಗಳಿಗೆ ಸಂಬಂಧಿಸಿದ ಕಾನೂನುಗಳನ್ನು ತಮ್ಮ ಅಧಿಕಾರವಧಿಯ ಮೊದಲೇ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದರು.

ಎಎನ್‌ಐ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲೋಕಸಭೆ ಚುನಾವಣೆಯಲ್ಲಿ (loksabha election) ಸಮಬಲದ ಕೊರತೆಯಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ಮೂವರು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ತ್ರಿಸದಸ್ಯ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕನಿಗೂ ಸ್ಥಾನ ನೀಡುವ ಮಸೂದೆಯನ್ನು ನಮ್ಮ ಸರ್ಕಾರ ಅಂಗೀಕರಿಸಿದೆ ಎಂದು ತಿಳಿಸಿದರು.

ಜಾರಿ ನಿರ್ದೇಶನಾಲಯವನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸುತ್ತಿದೆ ಎಂಬ ವಿಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಕೇವಲ ಶೇ. 3ರಷ್ಟು ಮಾತ್ರ ರಾಜಕೀಯ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಿಂದಿನದಕ್ಕೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ಸಂಸ್ಥೆಯಿಂದ ಹೆಚ್ಚಿನ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Loksabha Election 2024: ಕೆ ಅಣ್ಣಾಮಲೈ ಗೆಲುವು ಸಾಧಿಸಬಹುದೆ? ಪ್ರಬಲ ಪೈಪೋಟಿಗೆ ಸಾಕ್ಷಿಯಾಗಲಿದೆ ಕೊಯಮತ್ತೂರು

ಚುನಾವಣಾ ಆಯೋಗದಲ್ಲಿ ನಾವು ಹೆಚ್ಚಿನ ಸುಧಾರಣೆ ಮಾಡಿದ್ದೇವೆ. ಪ್ರಸ್ತುತ ಚುನಾವಣಾ ಆಯೋಗ ರಚನೆಯಾಗುವುದಕ್ಕೆ ವಿರೋಧ ಪಕ್ಷದ ಅಧಿಕಾರವೂ ಇದೆ. ಆದರೆ ಈ ಹಿಂದೆ ಪ್ರಧಾನಿ ಕಡತಕ್ಕೆ ಸಹಿ ಹಾಕಿ ಚುನಾವಣಾ ಆಯೋಗವನ್ನು ರಚಿಸಲಾಗುತ್ತಿತ್ತು. ಅವರ ಕುಟುಂಬಗಳಿಗೆ ಹತ್ತಿರವಿರುವವರನ್ನು ಚುನಾವಣಾ ಆಯುಕ್ತರನ್ನಾಗಿ ಮಾಡಲಾಗಿತ್ತು ಎಂದು ದೂರಿದರು.

ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾಗಿದ್ದವರು ಚುನಾವಣಾ ಆಯುಕ್ತರಾಗಿದ್ದರು. ಬಳಿಕ ಅವರಿಗೆ ರಾಜ್ಯಸಭಾ ಟಿಕೆಟ್ ಮತ್ತು ಮಂತ್ರಿ ಸ್ಥಾನವನ್ನು ನೀಡಲಾಯಿತು ಎಂದು ಆರೋಪಿಸಿದ ಅವರು, ಆದರೆ ನಾವು ಹಾಗೆ ಮಾಡಿಲ್ಲ. ನಾವು ಸರಿ ದಾರಿಯಲ್ಲಿ ಹೋಗಬೇಕು, ತಪ್ಪು ದಾರಿಯಲ್ಲಿ ಹೋಗಬಾರದು ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.

ಪ್ರತಿಪಕ್ಷಗಳು ಸುಳ್ಳುಗಳನ್ನು ಸೃಷ್ಟಿಸುತ್ತಿವೆ ಮತ್ತು ತಮ್ಮ ಮುಂಬರುವ ಸೋಲಿಗೆ ಕಾರಣವನ್ನು ನೀಡುತ್ತಿವೆ ಎಂದ ಪ್ರಧಾನಿ ಮೋದಿ, ಒಂದು ಗಾದೆ ಮಾತಿದೆ… ನಾಚ್ ನಾ ಜಾನೆ ಅಂಗನ್ ತೇರಾ (ನೃತ್ಯ ಮಾಡಲು ಬಾರದವರು ನೆಲ ಸರಿ ಇಲ್ಲ ಎಂದರಂತೆ) ಹಾಗೆ ಇದು ಎಂದು ಹೇಳಿದರು.


2023ರ ಹೊಸ ಮಸೂದೆ

ಸಂಸತ್ತು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಮಸೂದೆಯನ್ನು 2023ರ ಡಿಸೆಂಬರ್‌ನಲ್ಲಿ ಅಂಗೀಕರಿಸಿತು. ಹೊಸ ವ್ಯವಸ್ಥೆಯಡಿ ಪ್ರಧಾನ ಮಂತ್ರಿ, ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯು ಮೂವರು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುತ್ತದೆ. ಕಳೆದ ತಿಂಗಳು ಹೊಸ ವ್ಯವಸ್ಥೆಯಡಿ ಇಬ್ಬರು ಚುನಾವಣಾ ಆಯುಕ್ತರಾಗಿ ಸುಖಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ನೇಮಿಸಲಾಗಿತ್ತು ಎಂದು ತಿಳಿಸಿದರು.


ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಷ್ಟು ವಿರೋಧ ಪಕ್ಷದ ನಾಯಕರು ಜೈಲಿನಲ್ಲಿದ್ದಾರೆ? ಯಾರಾದರೂ ನನಗೆ ಹೇಳಬಹುದೇ? ಮತ್ತು ಈ ವಿರೋಧ ಪಕ್ಷದ ನಾಯಕರು ತಮ್ಮ ಸರ್ಕಾರವನ್ನು ಮಾತ್ರ ನಡೆಸುತ್ತಿದ್ದಾರೆಯೇ? ಒಬ್ಬ ಪ್ರಾಮಾಣಿಕ ವ್ಯಕ್ತಿಗೆ ಏನು ಭಯ? ಅವರು ನಮ್ಮ ಈಗಿನ ಗೃಹ ಸಚಿವ ಅಮಿತ್ ಶಾ ಅವರನ್ನೂ ಜೈಲಿಗೆ ಹಾಕಿದ್ದರು. ಆಗ ನಾನು ಮುಖ್ಯಮಂತ್ರಿಯಾಗಿದ್ದೆ ಎಂದರು.

1 ಲಕ್ಷ ಕೋಟಿ ಮೌಲ್ಯದ ಆಸ್ತಿ ಜಪ್ತಿ

ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಗಳ ಬಗ್ಗೆ ವಿವರಿಸಿದ ಪ್ರಧಾನಿ ಮೋದಿ, 2014ರ ಮೊದಲು 5000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ

ಇಡಿ ದಾಖಲಿಸಿರುವ ಎಲ್ಲಾ ಪ್ರಕರಣಗಳಲ್ಲಿ ಕೇವಲ ಶೇ. 3ರಷ್ಟು ಮಾತ್ರ ರಾಜಕೀಯ ವ್ಯಕ್ತಿಗಳಿದ್ದಾರೆ. ಶೇ. 97ರಷ್ಟು ಮಂದಿಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ಡ್ರಗ್ ಮಾಫಿಯಾ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳು, ಶೇ. 97ರಷ್ಟು ಬೇನಾಮಿ ಆಸ್ತಿಗಳನ್ನು ಸೃಷ್ಟಿಸಿದ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೆಲಸ ಮಾಡಲು ಬಿಡಿ

ಜಾರಿ ನಿರ್ದೇಶನಾಲಯ ಸ್ವತಂತ್ರವಾಗಿ ಕೆಲಸ ಮಾಡಬೇಕಾದಾಗ ನಾವು ಅದನ್ನು ಮಾಡಲು ಬಿಡಬೇಕಲ್ಲವೇ? ಅದನ್ನು ಏಕೆ ರಚಿಸಲಾಯಿತು? 2014ರ ಮೊದಲು ಅದರ ಕಾರ್ಯಗಳನ್ನು ಯಾರು ತಡೆಯುತ್ತಿದ್ದರು. ಇದರಿಂದ ಯಾರಿಗೆ ಲಾಭವಾಗುತ್ತಿತ್ತು? ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳಿಂದ 1 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದು ದೇಶದ ಜನರ ಹಣವಲ್ಲವೇ ಎಂದು ಪ್ರಶ್ನಿಸಿದರು.

ಇಡಿ ತನ್ನ ಕೆಲಸವನ್ನು ಚೆನ್ನಾಗಿ ಮಾಡುತ್ತಿದೆ. ನಾವು ನಮ್ಮ ಸಂಪೂರ್ಣ ಶಕ್ತಿಯೊಂದಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಇದು ನನ್ನ ವೈಯಕ್ತಿಕ ನಿಲುವಾಗಿದೆ ಎಂದು ಹೇಳಿದರು.

Exit mobile version