ಬೆಳಗಾವಿ: ಸಿಎಂ ಸಿದ್ದರಾಮಯ್ಯ ವಿಶೇಷ ವಿಮಾನಕ್ಕೆ ಬೆಳಗಾವಿ ವಿಮಾನ ನಿಲ್ದಾಣ ಎಂಟ್ರಿಗೆ ನಿರಾಕರಣೆ ಮಾಡಲಾಗಿದೆ.ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ವಿಮಾನ ಇದೇ ಏರ್ಪೋರ್ಟ್ನಲ್ಲಿರುವ ಕಾರಣ ಸಿಎಂ ವಿಮಾನಕ್ಕೆ ಅನುಮತಿ ದೊರಕಿಲ್ಲ.
ಸಿಎಂ ಸಿದ್ದರಾಮಯ್ಯ ಅವರು ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಹೊರಟಿದ್ದರು. ಆದರೆ, ಅಲ್ಲಿ ಲ್ಯಾಂಡಿಂಗ್ ಗೆ ಅನುಮತಿ ಸಿಕ್ಕಿಲ್ಲ. ಬೆಳಗ್ಗೆ 11.05ಕ್ಕೆ ಬೆಂಗಳೂರಿನಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಿಎಂ ವಿಮಾನ ಬರಬೇಕಿತ್ತು. ಅಲ್ಲಿಂದ ಅವರು ಶಿರಸಿಗೆ ತೆರಳಲು ಯೋಜನೆ ಹಾಕಲಾಗಿತ್ತು. ಆದರೆ ಪಿಎಂ ವಿಮಾನ ಇರುವ ಕಾರಣ ಅಲ್ಲಿ ಅವಕಾಶ ಸಿಕ್ಕಿಲ್ಲ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಬದಲಿಗೆ ಪಕ್ಕದ ಕೊಲ್ಲಾಪುರ ವಿಮಾನ ನಿಲ್ದಾಣದಲ್ಲಿ ಸಿಎಂ ವಿಮಾನ ಲ್ಯಾಂಡ್ ಆಗಲಿದೆ. ಮಧ್ಯಾಹ್ನ 12 ಗಂಟೆಗೆ ಕೊಲ್ಲಾಪುರದ ಛತ್ರಪತಿ ರಾಜಾರಾಮ್ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ಅವರ ವಿಮಾನ ಇಳಿಯಲಿದೆ. ಬಳಿಕ ಹೆಲಿಕಾಪ್ಟರ್ ಮೂಲಕ ಕಾಗವಾಡ ತಾಲೂಕಿನ ಉಗಾರ್ ಖುರ್ದ ಗೆ ಅವರು ಹೋಗಲಿದ್ದಾರೆ.
ಇಂದು ಮೋದಿಯಿಂದ ಬಹಿರಂಗ ಪ್ರಚಾರ
ನರೇಂದ್ರ ಮೋದಿ ಅವರು ಶನಿವಾರ (ಏಪ್ರಿಲ್ 27) ರಾತ್ರಿ 10 ಗಂಟೆಗೆ ಬೆಳಗಾವಿಗೆ ಆಗಮಿಸಿದ್ದಾರೆ. ಕುಂದಾ ನಗರಿಯಲ್ಲಿಯೇ ಐಟಿಸಿ ವೆಲ್ಕಮ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶನಿವಾರ ರಾತ್ರಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 15 ಮಂದಿಗೆ ಸ್ವಾಗತ ಕೋರಲು ಅವಕಾಶ ನೀಡಲಾಗಿತ್ತು. ಬಾಳೇಶ್ ಚವ್ವನ್ನವರ್, ರಾಜೇಶ್ವರಿ ಒಡೆಯರ್, ಸುಭಾಷ್ ಸಣ್ಣ ವೀರಪ್ಪನವರ್ ಸೇರಿ ಬೆಳಗಾವಿಯ 15 ಹಲವು ಸಮುದಾಯಗಳ ಮುಖಂಡರಿಗೆ ಮೋದಿ ಅವರನ್ನು ಸ್ವಾಗತಿಸಲು ಅವಕಾಶ ಮಾಡಿಕೊಡಲಾತ್ತು.
ಏಪ್ರಿಲ್ 28ರಂದು ಎಲ್ಲೆಲ್ಲಿ ರ್ಯಾಲಿ?
ಏಪ್ರಿಲ್ 28ರಂದು ಬೆಳಗಾವಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಗದೀಶ್ ಶೆಟ್ಟರ್ ಪರ ಮತಯಾಚಿಸಲಿರುವ ಅವರು ಬಳಿಕ 12 ಗಂಟೆಗೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ಮಾಡಲಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆಗೆ ದಾವಣಗೆರೆಯ ಹೈಸ್ಕೂಲ್ ಗ್ರೌಂಡ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ 4 ಗಂಟೆಗೆ ಬಳ್ಳಾರಿಯ ಸಮಾವೇಶದ ಮೂಲಕ ಇಡೀ ದಿನದ ಪ್ರಚಾರಕ್ಕೆ ತೆರೆ ಎಳೆಯಲಿದ್ದಾರೆ.
ಇದನ್ನೂ ಓದಿ: Hassan Pen Drive Case: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ; ಎಸ್ಐಟಿ ತನಿಖೆಗೆ ಸಿದ್ದರಾಮಯ್ಯ ಆದೇಶ
ಏಪ್ರಿಲ್ 29ರಂದು ಒಂದೇ ಸಮಾವೇಶ
ಬಳ್ಳಾರಿಯಲ್ಲಿ ಪ್ರಚಾರ ಮುಗಿಸುವ ನರೇಂದ್ರ ಮೋದಿ ಅವರು ಏಪ್ರಿಲ್ 29ರಂದು ಬಾಗಲಕೋಟೆಯಲ್ಲಿ ನಡೆಯುವ ಒಂದೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅವರು ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಮೂಲಕ ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಬಿಜೆಪಿ ಇಷ್ಟೆಲ್ಲ ಪ್ಲಾನ್ ಮಾಡಿದೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮೋದಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಯುವ ಸಮುದಾಯಕ್ಕೆ ಮೋದಿ ಅಚ್ಚುಮೆಚ್ಚು. ಇಂತಹ ಯುವ ವರ್ಗದ ಮತಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸೆಳೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.