Site icon Vistara News

Pro Kabaddi Final: ಚೊಚ್ಚಲ ಟ್ರೋಫಿ ಗೆದ್ದ ಪುಣೇರಿ ಪಲ್ಟಾನ್‌

Puneri Paltan vs Haryana Steelers

ಹೈದರಾಬಾದ್​: ಹಾವು-ಏಣಿ ಆಟದಂತೆ ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ 10ನೇ ಆವೃತ್ತಿ ಪ್ರೊ ಕಬಡ್ಡಿಯ ಫೈನಲ್(Pro Kabaddi Final)​ ಪಂದ್ಯದಲ್ಲಿ ಪುಣೇರಿ ಪಲ್ಟಾನ್‌(Puneri Paltan) 28-25 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್‌(Haryana Steelers) ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ. ಪ್ರಶಸ್ತಿ ಮೊತ್ತವಾಗಿ 3 ಕೋಟಿ ರೂ. ನಗದು ಪುರಸ್ಕಾರ ಬಾಚಿಕೊಂಡಿದೆ. ರನ್ನರ್ ಅಪ್​ ಹರಿಯಾಣ ತಂಡಕ್ಕೆ 1.8 ಕೋಟಿ ರೂ. ಬಹುಮಾನ ಲಭಿಸಿತು.

ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಉಭಯ ತಂಡಗಳ ಈ ಫೈನಲ್​ ಫೈಟ್​ ಆರಂಭದಿಂದ ಹಿಡಿದು ಕೊನೆಯ ತನಕವೂ ರೋಚಕತೆ ಮತ್ತು ಕುತೂಹಲಕ್ಕೆ ಸಾಕ್ಷಿಯಾಯಿತು. ಇತ್ತಂಡಗಳ ಆಟಗಾರರು ಕೂಡ ಅಂಕ ಗಳಿಕೆಗಾಗಿ ತೀವ್ರ ಪೈಪೋಟಿ ನಡೆಸಿದರು. ಇವರ ಜತೆಗೆ ಕೋಚ್​ಗಳು ಕೂಡ ಅಗ್ರೆಸಿವ್​ ಆಗಿ ಕಂಡುಬಂದರು.

ಟರ್ನಿಂಗ್​ ಪಾಯಿಂಟ್​


ಮೊದಲಾರ್ಧದ 20 ನಿಮಿಷದ ಆಟದಲ್ಲಿ ಕೊನೆಯ 1.28 ನಿಮಿಷದವರೆಗೂ ಪುಣೆ ತಂಡ ಹಿನ್ನಡೆಯಲ್ಲಿತ್ತು. ಆದರೆ, ಈ ವೇಳೆ ಡು ಆರ್​ ಡೈ ರೇಟ್​ನಲ್ಲಿ ಪಂಕಜ್​ ಮೋಹಿತೆ ಅವರು ಪಾದರಸದಂತಹ ರೇಡಿಂಗ್​ ದಾಳಿ ನಡೆಸಿ ಒಂದೇ ಬಾರಿಗೆ 5 ಅಂಕ ಕಲೆಹಾಕಿ ಪಂದ್ಯದ ಗತಿಯನ್ನೇ ಬದಲಿಸಿದರು. ಇದು ಪಂದ್ಯ ಟರ್ನಿಂಗ್​ ಪಾಯಿಂಟ್​ ಕೂಡ ಆಯಿತು. ಅವರ ಈ ರೇಡಿಂಗ್​ ಸಾಹಸದಿಂದ ಪುಣೆ ಭರ್ಜರಿ ಲೀಡ್​ ಪಡೆಯಿತು. ಮೊದಲಾರ್ಧ ಮುಕ್ತಾಯಕ್ಕೆ 13-10 ಅಂಕದ ಮುನ್ನಡೆ ಸಾಧಿಸಿತು. ಇದೇ ಮುನ್ನಡೆಯನ್ನು ಪಂದ್ಯದಕ್ಕೂ ಕಾಯ್ದುಕೊಂಡು ಪ್ರಶಸ್ತಿ ಎತ್ತಿಹಿಡಿಯಿತು.

ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಮಾರ್ಗದರ್ಶನ


ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಮಾರ್ಗದರ್ಶನದಲ್ಲಿ ಪುಣೇರಿ ತಂಡ ಈ ಆವೃತ್ತಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿ ಆಡಿದ 22 ಪಂದ್ಯಗಳಲ್ಲಿ 17 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ತನ್ನ ಖ್ಯಾತಿಗೆ ತಕ್ಕಂತೆ ಫೈನಲ್​ನಲ್ಲಿಯೂ ಇದೇ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕಳೆದ ಬಾರಿಯೂ ಪುಣೇರಿ ತಂಡ ಫೈನಲ್​ ಆಡಿತ್ತು. ಆದರೆ ಅಲ್ಲಿ ಜೈಪುರ ವಿರುದ್ಧ ಸೋತು ರನ್ನರ್​ ಅಪ್​ ಸ್ಥಾನ ಪಡೆದಿತ್ತು. ಈ ಬಾರಿ ಪ್ರಶಸ್ತಿಗೆಲ್ಲುವಲ್ಲಿ ಯಶಸ್ಸು ಕಂಡಿತು.

ಖ್ಯಾತ ಡಿಫೆಂಡರ್‌​ ಮೊಹಮ್ಮದ್ರೇಜಾ ಚಿಯಾನೆಹ್ ಅವರು ಮೊದಲಾರ್ಧದ ಆಟದಲ್ಲಿ ವಿಫಲಗೊಂಡರೂ ಕೂಡ ದ್ವಿತೀಯಾರ್ಧದಲ್ಲಿ ಶ್ರೇಷ್ಠ ಆಟ ಪ್ರದರ್ಶಿಸಿ ತಂಡಕ್ಕೆ ನೆರವಾದರು. ಮೋಹಿತ್​ ಗೋಯತ್​ ಅವರು ಪ್ರೊ ಕಬಡ್ಡಿ ಆವೃತ್ತಿಯಲ್ಲಿ 400 ರೇಡಿಂಗ್​ ಅಂಕಗಳನ್ನು ಪೂರ್ತಿಗೊಳಿಸಿದ ದಾಖಲೆಯನ್ನು ಕೂಡ ಈ ಪಂದ್ಯದಲ್ಲಿ ಬರೆದರು.

ಹರ್ಯಾಣ ಪರ ರೇಡರ್​ ಶಿವಂ ತಕ್ಕ ಮಟ್ಟಿನ ಆಟ ಪ್ರದರ್ಶಿಸಿದರು. ಅವರು 6 ಅಂಕ ಗಳಿಸಿದರು. ನಾಯಕ ವಿನಯ್​ ಕೇವಲ 3 ಅಂಕಕ್ಕೆ ಸೀಮಿತರಾದರು. ಅವರ ವೈಫಲ್ಯ ತಂಡಕ್ಕೆ ಭಾರೀ ಹಿನ್ನಡೆ ಉಂಟುಮಾಡಿತು. ಪುಣೇರಿ ಪರ ನಾಯಕ ಅಸ್ಲಾಂ ಇನಾಮ್ದಾರ್‌ 4, ಪಂಕಜ್​ ಮೋಹಿತೆ 9 ಅಂಕ ಗಳಿಸಿ ಗೆಲುವಿನ ಹೀರೊ ಎನಿಸಿದರು.

Exit mobile version