Site icon Vistara News

Ragging Case: ಜೂನಿಯರ್ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಸೀನಿಯರ್‌ಗಳು! ತಲ್ಲಣ ಮೂಡಿಸುವ ವಿಡಿಯೊ

Ragging Case

ಕಠಿಣ ಕಾನೂನು ಜಾರಿಯಾದ ಬಳಿಕವೂ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆಗಾಗ ರ‍್ಯಾಗಿಂಗ್ ಮಾಡುತ್ತಲೇ ಇರುತ್ತಾರೆ. ಆಂಧ್ರಪ್ರದೇಶದ ಪಲ್ನಾಡಿನ ಎಸ್ಎಸ್ಎನ್ ಕಾಲೇಜಿನಲ್ಲಿ ನಡೆದ ರ‍್ಯಾಗಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ (Ragging Case) ಸಂಚಲನ ಮೂಡಿಸಿದೆ.

ಎನ್‍ಸಿಸಿ ತರಬೇತಿ ನೆಪದಲ್ಲಿ ಸೀನಿಯರ್ ವಿದ್ಯಾರ್ಥಿಗಳ ಗುಂಪು ಮಧ್ಯರಾತ್ರಿಯಲ್ಲಿ ಜೂನಿಯರ್ ವಿದ್ಯಾರ್ಥಿಗಳನ್ನು ತಮ್ಮ ಕೋಣೆಗೆ ಕರೆದು ಕೋಲುಗಳಿಂದ ಹೊಡೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಗುರುವಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಜೂನಿಯರ್ ವಿದ್ಯಾರ್ಥಿಗಳನ್ನು ಹೊಡೆಯುವ ಮುನ್ನ ಅವರನ್ನು ಮಲಗಿಸಿ ನಂತರ ಕೋಲುಗಳಿಂದ ಎಲ್ಲರೂ ಹೊಡೆಯುತ್ತಾರೆ. ಸೀನಿಯರ್ ವಿದ್ಯಾರ್ಥಿಗಳು ತಾವು ಮಾಡಿದ ಕಾರ್ಯಕ್ಕೆ ನಗುತ್ತಾ ತಮಾಷೆ ಮಾಡಿಕೊಳ್ಳುತ್ತಿದ್ದರೆ ಪೆಟ್ಟು ತಿಂದ ಜೂನಿಯರ್ ವಿದ್ಯಾರ್ಥಿಗಳು ಅಳುತ್ತಿದ್ದಾರೆ. ಆ ಕೋಣೆಯೊಳಗೆ ಯಾರೋ ಈ ಕೃತ್ಯವನ್ನು ವಿಡಿಯೊ ಮಾಡಿದ್ದಾರೆ.

ಈ ವಿಡಿಯೊವನ್ನು ವೈಎಸ್ಆರ್ ಸಿಪಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಕುರಿತಾದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಪ್ರಸ್ತುತ ಸರ್ಕಾರವನ್ನು ಟೀಕಿಸಿದ್ದಾರೆ. “ಪಲ್ನಾಡು ಜಿಲ್ಲೆಯ ನರಸರಾವ್ಪೇಟೆಯ ಎಸ್ಎಸ್ಎನ್ ಕಾಲೇಜಿನಲ್ಲಿ ಎನ್‍ಸಿಸಿ ತರಬೇತಿಯ ನೆಪದಲ್ಲಿ ವಿದ್ಯಾರ್ಥಿಗಳನ್ನು ತೀವ್ರ ರ‍್ಯಾಗಿಂಗ್‌ ಮಾಡಲಾಗಿದೆ. ಜೂನಿಯರ್ ವಿದ್ಯಾರ್ಥಿಗಳನ್ನು ಮಧ್ಯರಾತ್ರಿ ಕಾಲೇಜಿಗೆ ಕರೆಸಿಕೊಂಡು ಸೀನಿಯರ್ ವಿದ್ಯಾರ್ಥಿಗಳು ಕೋಲುಗಳಿಂದ ಥಳಿಸಿದ್ದಾರೆ. ಮುಖ್ಯ ರಸ್ತೆಗಳಲ್ಲಿ ಕೊಲೆ ನಡೆದಾಗಲೇ ಪೊಲೀಸರಿಗೆ ಏನೂ ಮಾಡಲು ಆಗಲಿಲ್ಲ, ಅಂತಹದರಲ್ಲಿ ಕೋಲುಗಳನ್ನು ಬಳಸಿ ಹಲ್ಲೆ ಮಾಡಿದ್ದಕ್ಕೆ ಅವರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ @Anitha_TDP ಪ್ರತಿಕ್ರಿಯಿಸಿದ್ದಾರೆ. ಇದು ನಮ್ಮ ರಾಜ್ಯದ ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಪಕ್ಷವು ತಿಳಿಸಿದೆ.

ಇದನ್ನೂ ಓದಿ:ಜಾರಿ ಬಿದ್ದ ವಧುವನ್ನು ಎತ್ತದ ವರ; ಸಹೋದರನಿಂದ ಮದುವೆ ಮಂಟಪದಲ್ಲೇ ಬಿತ್ತು ಗೂಸಾ!

ಈ ಘಟನೆಗೆ ಸಂಬಂಧಿಸಿದಂತೆ ಬುಧವಾರ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಪೊಲೀಸರ ಪ್ರಕಾರ, ಫೆಬ್ರವರಿ 2ರಂದು ಆರು ಅಂತಿಮ ವರ್ಷದ ವಿದ್ಯಾರ್ಥಿಗಳು ಎನ್‍ಸಿಸಿ ತರಬೇತಿಯ ಸೋಗಿನಲ್ಲಿ ಹತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್‌ಗೆ ಒಳಪಡಿಸಿದರು. ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಜೂನಿಯರ್‌ ಅನ್ನು ಕೋಲುಗಳಿಂದ ಹೊಡೆದಿದ್ದಾರೆ ಎಂದು ವರದಿಯಾಗಿದೆ. ವಿಡಿಯೊ ಕ್ಲಿಪ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ತಂಡವು ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿತು. ವಿದ್ಯಾರ್ಥಿಗಳ ಹೇಳಿಕೆಗಳು ಮತ್ತು ವಿಡಿಯೊ ಪುರಾವೆಗಳ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಒಬ್ಬನನ್ನು ಬಂಧಿಸಿದ್ದಾರೆ, ಉಳಿದವರನ್ನು ಬಂಧಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

Exit mobile version