ಲಖನೌ: ಸಂಜು ಸ್ಯಾಮ್ಸನ್ ಬಾರಿಸಿದ ಅಜೇಯ 71 ರನ್ (ಅರ್ಧ ಶತಕ) ಹಾಗೂ ಧ್ರುವ್ ಜುರೆಲ್ ಬಾರಿಸಿದ ಅಜೇಯ 52 ರನ್ (ಅರ್ಧ ಶತಕ) ನೆರವಿನಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ನ 44ನೇ ಪಂದ್ಯದಲ್ಲಿ (IPL 2024) ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್ ಭರ್ಜರಿ ವಿಜಯ ದಾಖಲಿಸಿದೆ. ಈ ಮೂಲಕ ರಾಜಸ್ಥಾನ್ ತಂಡ ಹಾಲಿ ಆವೃತ್ತಿಯಲ್ಲಿ 8ನೇ ವಿಜಯವನ್ನು ತನ್ನದಾಗಿಸಿಕೊಂಡಿದೆ. ಒಟ್ಟು 16 ಅಂಕಗಳನ್ನು ಪಡೆದಿರುವ ರಾಜಸ್ಥಾನ್ ಬಳಗ ಬಹುತೇಕ ಪ್ಲೇ ಆಫ್ ಹಂತಕ್ಕೇರಿದೆ. ಆದರೆ, ಅದಿನ್ನೂ ಅಧಿಕೃತಗೊಂಡಿಲ್ಲ. ಅತ್ತ ಲಕ್ನೊ ತಂಡ ಸತತ ಎರಡು ಗೆಲುವಿನ ಬಳಿಕ ಸೋಲಿಗೆ ಸಿಲುಕಿದೆ. ಇದು ಆ ತಂಡಕ್ಕೆ ಒಟ್ಟು 9 ಪಂದ್ಯಗಳಲ್ಲಿ 4ನೇ ಸೋಲು. ಆದಾಗ್ಯೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.
Winning streak continues 🩷
— IndianPremierLeague (@IPL) April 27, 2024
A Sanju Samson special & Dhruv Jurel's attractive innings propel Rajasthan Royals to their 8th win this season🙌
Scorecard ▶️ https://t.co/Dkm7eJqwRj#TATAIPL | #LSGvRR | @rajasthanroyals pic.twitter.com/cam0GepXVo
ಇಲ್ಲಿನ ಶ್ರೀ ಅಟಲ್ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯಿತು. ಟಾಸ್ ಗೆದ್ದ ರಾಜಸ್ಥಾನ್ ಆಯ್ಕೆ ಮಾಡಿಕೊಂಡರೆ ಮೊದಲು ಬ್ಯಾಟ್ ಮಾಡಿದ ಲಕ್ನೊ ಬಳಗ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 196 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ಗೆ 199 ರನ್ ಬಾರಿಸಿ ಭರ್ಜರಿಗೆ ಗೆಲವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ: KL Rahul : ಐಪಿಎಲ್ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಕೆಎಲ್ ರಾಹುಲ್; ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?
ಸಂಜು ಉತ್ತಮ ಬ್ಯಾಟಿಂಗ್
ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ರಾಜಸ್ಥಾನ್ ತಂಡ ರನ್ ಗಳಿಸುತ್ತಲೇ ಸಾಗಿತು. ಯಶಸ್ವಿ ಜೈಸ್ವಾಲ್ 24 ರನ್ ಬಾರಿಸಿದರೆ ಜೋಸ್ ಬಟ್ಲರ್ 34 ರನ್ಗಳ ಕೊಡುಗೆ ಕೊಟ್ಟರು. ಆ ಬಳಿಕ ಬಂದ ಸಂಜು ಸ್ಯಾಮ್ಸನ್ ವಿಕೆಟ್ ಉರುಳದಂತೆ ನೋಡಿಕೊಂಡ ಜತೆಗೆ 33 ಎಸೆತಗಳಲ್ಲಿ 71 ರನ್ ಬಾರಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್ 14 ರನ್ಗೆ ಸೀಮಿತಗೊಂಡರು. ಆದರೆ ಐದನೇ ಕ್ರಮಾಂಕದಲ್ಲಿ ಆಡಿದ ಧ್ರುವ್ ಜುರೆಲ್ ಅಮೋಘ ಇನಿಂಗ್ಸ್ ಆಡಿದರು. ಅವರು 34 ಎಸೆತಕ್ಕೆ 52 ರನ್ ಕೊಡುಗೆ ಕೊಟ್ಟರು. ಇದು ಹಾಲಿ ಅವೃತ್ತಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ.
ಕಳಪೆ ಆರಂಭ
ಹಿಂದಿನ ಗೆಲುವಿನ ಉತ್ಸಾಹದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಲಕ್ನೊ ತಂಡಕ್ಕೆ ಕ್ವಿಂಟನ್ ಡಿ ಕಾಕ್ 8 ರನ್ಗೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಕೆ. ಎಲ್ ರಾಹುಲ್ 76 ರನ್ ಬಾರಿಸುವ ಮೂಲಕ ತಂಡವನ್ನು ಕಾಪಾಡಿದರು. ಆದರೆ, ಹಿಂದಿನ ಪಂದ್ಯದ ಹೀರೊ ಮಾರ್ಕಸ್ ಸ್ಟೊಯ್ನಿಸ್ ಶೂನ್ಯಕ್ಕೆ ಔಟಾಗಿ ಹಿನ್ನಡೆ ಉಂಟು ಮಾಡಿದರು. ದೀಪಕ್ ಹೂಡ 50 ರನ್ ಬಾರಿಸಿದರು. ಕೊನೆಯ ಬ್ಯಾಟರ್ಗಳ ಸಣ್ಣ ಪುಟ್ಟ ರನ್ಗಳ ಕೊಡುಗೆಗಳೊಂದಿಗೆ ಸ್ಪರ್ಧಾತ್ಮ ಮೊತ್ತ ಪೇರಿಸಿತು.