ಕಿಮ್ ಕಾರ್ಡಶಿಯಾನ್, ಸೋಫಿಯಾ ಲೊರೆನ್, ಜೇನ್ ಫೋಂಡಾ, ಪಮೇಲಾ ಆಂಡರ್ಸನ್ ಅವರಂತಹ ಹಾಲಿವುಡ್‍ನ ಫೇಮಸ್ ಸೆಲೆಬ್ರಿಟಿಗಳನ್ನು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ನಡೆಯುವ ಐತಿಹಾಸಿಕ ಒಪೆರಾ ಬಾಲ್‍ನಲ್ಲಿ ಪರಿಚಯಿಸಿದ ಖ್ಯಾತ ಆಸ್ಟ್ರೀಯಾದ ಬಿಲಿಯನೇರ್ ಉದ್ಯಮಿ ರಿಚರ್ಡ್ ಲುಗ್ನರ್ (Richard Lugner) ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಲುಗ್ನರ್ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ನರಳುತ್ತಿದ್ದರು ಮತ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಕೇವಲ ಎರಡು ತಿಂಗಳ ಹಿಂದೆ ಆರನೇ ಬಾರಿಗೆ ವಿವಾಹವಾದ ಆಸ್ಟ್ರಿಯಾದ ಉದ್ಯಮಿ ವಿಯೆನ್ನಾದಲ್ಲಿನ ತಮ್ಮ ವಿಲ್ಲಾದಲ್ಲಿ ನಿಧನರಾದರು.
Richard Lugner war ein erfolgreicher Unternehmer und eine schillernde Persönlichkeit. Ein österreichisches Original, das sich nie verbogen hat. Er ruhe in Frieden! pic.twitter.com/tqp6Zau9fJ
— Karl Nehammer (@karlnehammer) August 12, 2024
ಲುಗ್ನರ್ ನಿಧನಕ್ಕೆ ಸಂತಾಪ ಸೂಚಿಸಿದ ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಎಕ್ಸ್ ನಲ್ಲಿ, “ರಿಚರ್ಡ್ ಲುಗ್ನರ್ ಯಶಸ್ವಿ ಉದ್ಯಮಿ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಅವರು ಆಸ್ಟ್ರೀಯಾ ಮೂಲದ ನಿರ್ಮಾಣ ಲೋಕದ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದಿದ್ದಾರೆ.
ರಿಚರ್ಡ್ ಲುಗ್ನರ್ ಯಾರು?
ಲುಗ್ನರ್ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ಯಶಸ್ವಿ ಆಸ್ಟ್ರಿಯಾದ ಉದ್ಯಮಿಯಾಗಿದ್ದರು. ಅವರು ತಮ್ಮ ಆಕರ್ಷಕ ಜೀವನಶೈಲಿ ಮತ್ತು ಹಾಲಿವುಡ್‍ನ ಫೇಮಸ್ ಸೆಲೆಬ್ರಿಟಿಗಳನ್ನು ಹೋಸ್ಟ್ ಮಾಡಿದ ಕಾರಣಕ್ಕೆ ಇವರು ಸಾಕಷ್ಟು ಹೆಸರುವಾಸಿಯಾಗಿದ್ದರು. 2014 ರಲ್ಲಿ ಕಿಮ್ ಕಾರ್ಡಶಿಯಾನ್ ಸೇರಿದಂತೆ ಹಲವು ಮಹಿಳಾ ಸೆಲೆಬ್ರಿಟಿಗಳಿಗೆ ವಾರ್ಷಿಕ ವಿಯೆನ್ನಾ ಒಪೆರಾ ಬಾಲ್ ಕಾರ್ಯಕ್ರಮಗಳಿಗೆ ಡೇಟಿಂಗ್ ಮಾಡಲು ಅವಕಾಶ ನೀಡಿದ್ದರು.
ಅಲ್ಲದೇ ಈ ಕಾರ್ಯಕ್ರಮದಲ್ಲಿ ಕಾರ್ಡಶಿಯಾನ್ ತನ್ನ ಡೇಟಿಂಗ್ ಗರ್ಲ್ ಆಗುವುದಕ್ಕಾಗಿ ಆಕೆಗೆ ಬರೋಬ್ಬರಿ 5 ಲಕ್ಷ ಡಾಲರ್ ನೀಡಿದ್ದರು ಎಂದು ಸುದ್ದಿಯಲ್ಲಿದ್ದರು. ಅಲ್ಲದೇ ಇವರು ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು ಮತ್ತು ಆಸ್ಟ್ರಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಎರಡು ಬಾರಿ ಅಂದರೆ ಒಮ್ಮೆ 1998 ರಲ್ಲಿ ಮತ್ತು ಮತ್ತೆ 2016 ರಲ್ಲಿ ಸ್ಪರ್ಧಿಸಿದ್ದರು.
ಇದನ್ನೂ ಓದಿ: ಭರತನಾಟ್ಯ ರಂಗಪ್ರವೇಶ ಮಾಡಿ ಇತಿಹಾಸ ನಿರ್ಮಿಸಿದ 13 ವರ್ಷದ ಚೀನೀ ಬಾಲಕಿ
ರಿಚರ್ಡ್ ಲುಗ್ನರ್ ಅಕ್ಟೋಬರ್ 11, 1932 ರಂದು ವಿಯೆನ್ನಾದಲ್ಲಿ ಜನಿಸಿದರು. ಅವರು ವಿಯೆನ್ನಾದಲ್ಲಿ ತಮ್ಮ “ಲುಗ್ನರ್ ಸಿಟಿ” ಶಾಪಿಂಗ್ ಕೇಂದ್ರವನ್ನು ನಿರ್ಮಿಸಿದರು. ಅವರು ಈ ಹಿಂದೆ ಕ್ರಿಸ್ಟೀನ್ ಗ್ಮೈನರ್ (1961-1978), ಕಾರ್ನೆಲಿಯಾ ಲಾಫರ್ಸ್ವೀಲರ್ (1979-1983), ಸುಸಾನೆ ಡೈಟ್ರಿಚ್ (1984-1989), ಕ್ರಿಸ್ಟಿನಾ ಲುಗ್ನರ್ (1990-2007) ಮತ್ತು ಪ್ಲೇಬಾಯ್ ರೂಪದರ್ಶಿ ಮತ್ತು ನಟಿ ಕ್ಯಾಥಿ ಶ್ಮಿಟ್ಜ್ (2014-2016) ಅವರನ್ನು ವಿವಾಹವಾದರು. ಅಲ್ಲದೇ ಜೂನ್ 1 2024ರಂದು ರಿಚರ್ಡ್ ಲುಗ್ನರ್ 42 ವರ್ಷದ ಸಿಮೊನೆ ರೈಲ್ಯಾಂಡರ್ ಎಂಬಾಕೆಯನ್ನು 6ನೇ ಬಾರಿ ಮದುವೆಯಾಗಿದ್ದರು. ಆ ಮದುವೆಯ ವೇಳೆ ಇದು ನನ್ನ ಕೊನೆಯ ಮದುವೆ ಎಂದು ಅವರು ಹೇಳಿದ್ದು, ಈಗ ಅವರು ಇಹಲೋಕ ತ್ಯಜಿಸುವ ಮೂಲಕ ಅದು ನಿಜವಾಗಿದೆ. ಈ ಸುದ್ದಿ ಓದಿದ ನೆಟ್ಟಿಗರು, ಕೊನೆಯ ಹೆಂಡತಿಯ ಅದೃಷ್ಟವೋ ಅದೃಷ್ಟ ಅಂತಿದ್ದಾರೆ!