ಮಳೆಗಾಲದಲ್ಲಿ, ವಿಷಕಾರಿ ಹಾವುಗಳು ತಾವು ಅವಿತುಕೊಂಡಿದ್ದ ಸ್ಥಳಗಳಿಂದ ಹೊರಬರುವುದು ಹೆಚ್ಚು. ಇದರಿಂದ ಅವು ರಸ್ತೆ, ದಾರಿಗಳಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುತ್ತವೆ. ಕೆಲವೊಮ್ಮೆ ಮನೆಯೊಳಗೂ ಪ್ರವೇಶಿಸುತ್ತವೆ. ಹಾಗಾಗಿ ಅವುಗಳು ಕಚ್ಚುವ ಅಪಾಯವೂ ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ. ಎಲ್ಲ ಹಾವುಗಳು ವಿಷಕಾರಿಯಲ್ಲ. ಆದರೆ ಕೆಲವು ಪ್ರಕಾರದ ಹಾವು ಕಚ್ಚಿದರೆ ಸಾವು ಸಂಭವಿಸಬಹುದು. ಆದರೆ ಅದಕ್ಕೆ ತ್ವರಿತವಾಗಿ ಚಿಕಿತ್ಸೆ ನೀಡುವುದರಿಂದ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ ಜೀವವನ್ನು ಉಳಿಸಬಹುದು. ವಿಷಕಾರಿ ಹಾವು ಕಚ್ಚಿದ (Snake Bite) ತಕ್ಷಣ ಏನು ಮಾಡಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಹಾವು ಕಚ್ಚಿದೆ ಎಂಬುದನ್ನು ತಿಳಿಯುವ ಲಕ್ಷಣಗಳೇನು?
ಹಾವು ಕಚ್ಚಿದೆ ಎಂಬುದನ್ನು ತ್ವರಿತವಾಗಿ ಪತ್ತೆ ಹಚ್ಚಿದರೆ ಅದಕ್ಕೆ ತಕ್ಷಣ ಕ್ರಮ ಕೈಗೊಳ್ಳಬಹುದು. ಹಾಗಾಗಿ ಹಾವು ಕಚ್ಚಿದ ಸುತ್ತಲಿನ ಸ್ಥಳದಲ್ಲಿ ಆಗಾಗ ನೋವು ಕಾಣಿಸುತ್ತದೆ ಮತ್ತು ಊದಿಕೊಂಡಿರುತ್ತದೆ. ಹಾಗೇ ಹಾವು ಕಡಿತಕ್ಕೊಳಗಾದ ವ್ಯಕ್ತಿಯಲ್ಲಿ ಸ್ನಾಯು ಬಿಗಿತ ಮತ್ತು ಅನಿಯಂತ್ರಿತ ನಡುಕ ಉಂಟಾಗುತ್ತದೆ. ಕಚ್ಚಿದ ನಂತರ ವಾಕರಿಕೆ ಮತ್ತು ವಾಂತಿ ಸಮಸ್ಯೆ ಕಂಡುಬರಬಹುದು. ಅಲ್ಲದೇ ಹಾವು ಕಚ್ಚಿದ ಸ್ಥಳದಲ್ಲಿ ಚರ್ಮದ ಬಣ್ಣ ಬದಲಾವಣೆಯಾಗುತ್ತದೆ. ಚರ್ಮದ ಬಣ್ಣ ಹೆಚ್ಚಾಗಿ ನೀಲಿ ಅಥವಾ ಹಸಿರಾಗುತ್ತದೆ. ಇದು ವಿಷದ ಹರಡುವಿಕೆಯನ್ನು ಸೂಚಿಸುತ್ತದೆ. ಆಗ ರಕ್ತದೊತ್ತಡದಲ್ಲಿ ಕುಸಿತ ಮತ್ತು ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ವ್ಯಕ್ತಿ ಅತಿಯಾದ ಬೆವರುವುದು ಮತ್ತು ನಿಶ್ಯಕ್ತಿತನ ಕಾಣಿಸಿಕೊಳ್ಳಬಹುದು.
ಹಾವು ಕಚ್ಚಿದ ತಕ್ಷಣ ಈ ರೀತಿ ಪ್ರಥಮ ಚಿಕಿತ್ಸೆ ಮಾಡಿ:
ಹಾವು ಕಚ್ಚಿದಾಗ ಹೆದರದೆ ಶಾಂತವಾಗಿರಬೇಕು. ಯಾಕೆಂದರೆ ಆತಂಕ ಹೆಚ್ಚಾದೆ ರಕ್ತ ಸಂಚಾರ ವೇಗವಾಗಿ ವಿಷ ದೇಹಕ್ಕೆ ಬೇಗ ಹರಡುತ್ತದೆ. ಹಾಗಾಗಿ ಹಾವು ಕಡಿತಕ್ಕೊಳಗಾದ ವ್ಯಕ್ತಿಗೆ ಸಾಧ್ಯವಾದಷ್ಟು ಶಾಂತವಾಗಿರಲು ಹೇಳಿ. ರಕ್ತ ಸಂಚಾರದ ಮೂಲಕ ವಿಷ ದೇಹಕ್ಕೆ ಹರಡುವುದನ್ನು ತಡೆಯಲು ಹಾವು ಕಚ್ಚಿದ ಭಾಗದಿಂದ ರಕ್ತ ಮೇಲಕ್ಕೆ ಹೋಗದಂತೆ ದಾರದಿಂದ ಬಿಗಿಯಾಗಿ ಕಟ್ಟಿ. ಹಾವು ಕಚ್ಚಿದ ಪ್ರದೇಶವನ್ನು ಶುದ್ಧ ನೀರಿನಿಂದ ನಿಧಾನವಾಗಿ ಸ್ವಚ್ಛಗೊಳಿಸಿ. ಆದರೆ ಕಠಿಣ ರಾಸಾಯನಿಕಗಳು ಅಥವಾ ಸೋಂಕು ನಿವಾರಕಗಳನ್ನು ಬಳಸಬೇಡಿ.
ಹಾವು ಕಚ್ಚಿದ ಗಾಯವನ್ನು ಕತ್ತರಿಸಬೇಡಿ ಅಥವಾ ವಿಷವನ್ನು ಹೀರಲು ಪ್ರಯತ್ನಿಸಬೇಡಿ. ಗಾಯಕ್ಕೆ ಐಸ್ ಹಚ್ಚಬೇಡಿ. ಯಾಕೆಂದರೆ ಐಸ್ ಅಂಗಾಂಶದ ಹಾನಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
ವೈದ್ಯರ ಬಳಿ ಕರೆದುಕೊಂಡು ಹೋಗುವ ಮೊದಲು ಈ ಮನೆಮದ್ದು ಮಾಡಬಹುದು
ಹಾವು ಕಚ್ಚಿದ ವ್ಯಕ್ತಿಗೆ ತುಪ್ಪವನ್ನು ನೀಡುವುದರಿಂದ ವಾಂತಿಯನ್ನು ಪ್ರಚೋದಿಸಬಹುದು. ಇದು ಹೊಟ್ಟೆಯಿಂದ ಸ್ವಲ್ಪ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಲಭ್ಯವಿದ್ದರೆ ಕಚ್ಚಿದ ಪ್ರದೇಶಕ್ಕೆ ಕಾಂಟೋಲಾ (ಸ್ಥಳೀಯ ಗಿಡಮೂಲಿಕೆ) ಪೇಸ್ಟ್ ಅನ್ನು ಹಚ್ಚಿ. ಇದು ವಿಷದ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಪೇಸ್ಟ್ ಮತ್ತು ಜೇನುತುಪ್ಪದ ಮಿಶ್ರಣವನ್ನು ಹಾವು ಕಚ್ಚಿದ ಪ್ರದೇಶಕ್ಕೆ ಹಚ್ಚಬಹುದು.
ಸಾಧ್ಯವಾದಷ್ಟು ಬೇಗ ಹತ್ತಿರದ ಆಸ್ಪತ್ರೆ ಅಥವಾ ವೈದ್ಯರ ಬಳಿ ಕರೆದುಕೊಂಡು ಹೋಗಿ ವೈದ್ಯಕೀಯ ಚಿಕಿತ್ಸೆ ಕೊಡಿಸಿ. ಮನೆಯಲ್ಲೇ ಗಾಯಕ್ಕೆ ಚಿಕಿತ್ಸೆ ನೀಡಲು ಪ್ರಯತ್ನಿಸಬೇಡಿ. ಕಚ್ಚಿದ ಪ್ರದೇಶದಲ್ಲಿ ರಕ್ತಸ್ರಾವವಾಗುತ್ತಿದ್ದರೆ ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಬೇಡಿ. ಇದು ಸ್ವಲ್ಪ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹಾವನ್ನೇ ಮಣಿಸಿ ʼಸ್ನೇಹಿತʼನ ಜೀವ ಉಳಿಸಿದ ಹಲ್ಲಿ! ಅದ್ಭುತ ವಿಡಿಯೊ; ತಪ್ಪದೇ ನೋಡಿ!
ಹಾವು ಕಡಿತದ ಅಪಾಯ ತಡೆಗಟ್ಟಲು ಈ ಕ್ರಮ ಪಾಲಿಸಿ
ಮಳೆಗಾಲದಲ್ಲಿ ಹಾವು ಹೆಚ್ಚು ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ನಡೆಯುವಾಗ ಜಾಗರೂಕರಾಗಿರಿ. ಇಂತಹ ಪ್ರದೇಶಗಳಲ್ಲಿ ನಡೆಯುವಾಗ ಬೂಟುಗಳು ಮತ್ತು ಉದ್ದನೆಯ ಪ್ಯಾಂಟ್‌ಗಳನ್ನು ಬಳಸಿ. ಮನೆಗಳು ಮತ್ತು ತೋಟಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ. ನಿಮ್ಮ ಮನೆಯ ಸುತ್ತಲೂ ಹಾವು ಅಡಗಿರುವ ಪೊದೆಗಳನ್ನು ತೆಗೆದುಹಾಕಿ.