ಮುಂಬೈ: ಜಹೀರ್ ಇಕ್ಬಾಲ್ ಜೊತೆ ಪುತ್ರಿ ಸೋನಾಕ್ಷಿ ಸಿನ್ಹಾ (Sonakshi Sinha) ಮದುವೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ತಂದೆ ಶತ್ರುಘ್ನ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ. ದ್ವೇಷವನ್ನು ಹರಡುವುದನ್ನು ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ತಮ್ಮ ಮಗಳು ಯಾವುದೇ ತಪ್ಪು ಮಾಡಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಜೂನ್ 23ರಂದು ಮುಂಬೈಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ ಜೊತೆ ವಿವಾಹಬಂಧನಕ್ಕೆ ಸಾಕ್ಷಿಯಾಗಿದ್ದರು. ಅವರ ಮದುವೆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಶತ್ರುಘ್ನ ಸಿನ್ಹಾ ಅವರ ತವರು ಬಿಹಾರದ ಪಾಟ್ನಾದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಹಿಂದೂ ಶಿವ ಭವಾನಿ ಸೇನೆ ಹೆಸರಿನ ಸಂಘಟನೆ ಈ ಅಂತಧರ್ಮಿಯ ವಿವಾಹವನ್ನು “ಲವ್ ಜಿಹಾದ್’ ಎಂದು ಕರೆದಿದೆ ಹಾಗೂ ರಾಜಧಾನಿಗೆ ಎಂದಿಗೂ ಭೇಟಿ ನೀಡದಂತೆ ಎಚ್ಚರಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶತ್ರುಘ್ನ ಸಿನ್ಹಾ “ವಿವಾಹವು ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ನಿರ್ಧಾರ. ಮಧ್ಯಪ್ರವೇಶಿಸಲು ಯಾರಿಗೂ ಹಕ್ಕಿಲ್ಲ. ಈ ಪ್ರತಿಭಟನೆ ಮೊದಲಾದವು ನಿರುದ್ಯೋಗಿಗಳ ಕೆಲಸ. ಜೀವನದಲ್ಲಿ ಉಪಯೋಗಕ್ಕೆ ಬರುವಂತಹ ಕೆಲಸದಲ್ಲಿ ತೊಡಗಿಕೊಳ್ಳಿ. ಇದಕ್ಕಿಂತ ಹೆಚ್ಚಿನದನ್ನು ಹೇಳಲು ನನಗೆ ಸಾಧ್ಯವಿಲ್ಲ’ ಎಂದು ಹಿರಿಯ ನಟ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಸುಷ್ಮಾ ಸ್ವರಾಜ್‌ರನ್ನು ನೆನಪಿಸಿದ ಮಗಳು! ವಿಡಿಯೊ ನೋಡಿ
ವಿವಾಹದ ಬಳಿಕ ಸೋನಾಕ್ಷಿ ಹಾಗೂ ಜಹೀರ್ ದಂಪತಿ ಬಾಂದ್ರಾ ನಿವಾಸದಲ್ಲಿ ಆತ್ಮೀಯ ಸಮಾರಂಭ ಆಯೋಜಿಸಿದ್ದರು. ಬಳಿಕ ಮದುವೆಯ ಚಿತ್ರಗಳನ್ನು ಆನ್ ಲೈನ್ ನಲ್ಲಿ ಹಂಚಿಕೊಂಡು “ಏಳು ವರ್ಷಗಳ ಹಿಂದೆ ಇದೇ ದಿನದಂದು ನಾವು ಪರಸ್ಪರರ ಕಣ್ಣುಗಳಲ್ಲಿ ಪ್ರೀತಿಯನ್ನು ಕಂಡುಕೊಂಡೆವು. ಅದನ್ನು ಶಾಶ್ವತವಾಗಿ ಹಿಡಿದಿಡಲು ವಿವಾಹವಾದೆವು. ಇಂದು ಆ ಪ್ರೀತಿ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ವಿಜಯಿಯಾಗಲು ಮಾರ್ಗದರ್ಶನ ನೀಡಿದೆ. ಎರಡೂ ಕುಟುಂಬಗಳ ಆರ್ಶೀವಾದದೊಂದಿಗೆ ನಾವು ಗಂಡ ಹೆಂಡತಿಯರಾಗಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.