Site icon Vistara News

Elephant: ಜರ್ಮನಿಯೊಳಗೆ 20,000 ಆನೆಗಳನ್ನು ನುಗ್ಗಿಸುವುದಾಗಿ ಬೆದರಿಕೆ!

Threat

ದಕ್ಷಿಣ ಆಫ್ರಿಕಾ: ಜರ್ಮನಿಯೊಳಗೆ (Germany) 20,000 ಆನೆಗಳನ್ನು (elephant) ನುಗ್ಗಿಸುವುದಾಗಿ ದಕ್ಷಿಣ ಆಫ್ರಿಕಾ ಖಂಡದ ಬೋಟ್ಸ್‌ ವಾನಾ (Botswana) ದೇಶದ ಅಧ್ಯಕ್ಷರು ಬೆದರಿಕೆ (threat) ಹಾಕಿದ್ದಾರೆ.

ಬೇಟೆಯಾಡುವ ಪ್ರಾಣಿಗಳ ಆಮದು ವಿವಾದದ ಮಧ್ಯೆ ಬೋಟ್ಸ್‌ವಾನಾದ ಅಧ್ಯಕ್ಷ ಮೊಕಿಗ್ ವೀಟ್ಸ್ ಮಸಿಸಿ, ಇದು ತಮಾಷೆಯಲ್ಲ ಎಂದು ಹೇಳಿದ್ದು, ಜರ್ಮನಿಯೊಳಗೆ 20,000 ಆನೆಗಳನ್ನು ಕಳುಹಿಸುವುದಾಗಿ ಎಚ್ಚರಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಜರ್ಮನಿಯ ಪರಿಸರ ಸಚಿವಾಲಯವು ಪ್ರಾಣಿಗಳ ಬೇಟೆಯಾಡುವಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿ, ಬೇಟೆಯಾಡುವ ಪ್ರಾಣಿಗಳ ಆಮದಿನ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಲು ಸೂಚಿಸಿತ್ತು. ಈ ವಿವಾದದ ಮಧ್ಯೆಯೇ ಈಗ ಬೋಟ್ಸ್‌ವಾನಾ ಈ ಬೆದರಿಕೆ ಹಾಕಿದೆ.

ಇದನ್ನು ಓದಿ: Pig kidney: ಮನುಷ್ಯನಿಗೆ ಹಂದಿಯ ಕಿಡ್ನಿ ಅಳವಡಿಕೆ ಸಕ್ಸೆಸ್! ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಗ್ರೀನ್ ಪಾರ್ಟಿಯ ಸ್ಟೆಫಿ ಲೆಮ್ಕೆ ನೇತೃತ್ವದ ಜರ್ಮನಿಯ ಪರಿಸರ ಸಚಿವಾಲಯವು ಬೇಟೆಯಾಡುವ ಪ್ರಾಣಿಗಳ ಆಮದಿನ ಮೇಲೆ ಕಠಿಣ ನಿರ್ಬಂಧ ಹೆಚ್ಚಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಸಿಸಿ, ಬರ್ಲಿನ್‌ನಲ್ಲಿ ಕುಳಿತು ಬೋಟ್ಸ್‌ವಾನಾದ ವ್ಯವಹಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ತುಂಬಾ ಸುಲಭ. ಈ ಪ್ರಾಣಿಗಳನ್ನು ಜಗತ್ತಿಗಾಗಿ ಸಂರಕ್ಷಿಸಲು ನಾವು ಬೆಲೆ ತೆರಬೇಕಾಗಿದೆ ಎಂದು ಹೇಳಿದ್ದಾರೆ.


ಪ್ರಾಣಿಗಳೊಂದಿಗೆ ನಾವು ಒಟ್ಟಿಗೆ ವಾಸಿಸಬೇಕು ಎಂದು ಜರ್ಮನ್ನರು ನಮಗೆ ಹೇಳುತ್ತಿದ್ದಾರೆ. ಬೇಟೆಯಾಡುವ ಪ್ರಾಣಿಗಳ ಆಮದಿನ ಮೇಲಿನ ನಿರ್ಬಂಧಗಳು ದೇಶದಲ್ಲಿ ಆನೆಗಳ ಸಂಖ್ಯೆ ಸ್ಫೋಟವಾಗಿ ಆಫ್ರಿಕನ್ ರಾಷ್ಟ್ರವನ್ನು ಬಡವಾಗಿಸುತ್ತದೆ ಎಂದು ಮಸಿಸಿ ತಿಳಿಸಿದ್ದಾರೆ.

ಮಾನವ- ಆನೆ ಸಂಘರ್ಷ

ಬೋಟ್ಸ್ ವಾನಾದಲ್ಲಿ ಆನೆಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿರುವುದರಿಂದ ಮಾನವ- ಆನೆ ಸಂಘರ್ಷವು ಹೆಚ್ಚಾಗಿದೆ. ಈಗಾಗಲೇ ದೇಶದಲ್ಲಿ 1,30,000 ಆನೆಗಳಿದ್ದು, ವಿಶ್ವದ ಮೂರನೇ ಒಂದು ಭಾಗವನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಆನೆ ಹಿಂಡುಗಳು ಜನರು, ಮನೆಗಳು, ಬೆಳೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಾಶಮಾಡುತ್ತಿವೆ ಎಂದು ಮಸಿಸಿ ತಿಳಿಸಿದ್ದಾರೆ.

ಈ ಸಮಸ್ಯೆಯನ್ನು ನಿಭಾಯಿಸಲು ಮಸಿಸಿಯ ಸರ್ಕಾರವು 2019ರಲ್ಲಿ ಐದು ವರ್ಷಗಳ ಹಿಂದೆ ವಿಧಿಸಲಾದ ಆನೆಗಳ ಬೇಟೆಯ ಮೇಲಿನ ನಿಷೇಧವನ್ನು ತೆಗೆದುಹಾಕಿತು.

ಬೋಟ್ಸ್ ವಾನಾ ಈ ಹಿಂದೆ 8,000 ಆನೆಗಳನ್ನು ಅಂಗೋಲಾಕ್ಕೆ ಮತ್ತು 500 ಆನೆಗಳನ್ನು ಮೊಜಾಂಬಿಕ್‌ಗೆ ಕಳುಹಿಸಿತ್ತು. ಜರ್ಮನಿಗೂ ಹೀಗೆ ನೀಡಲು ಬಯಸಿದ್ದು, ಇದಕ್ಕೆ ಪ್ರತಿಯಾಗಿ ಏನೂ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ!

ನಮ್ಮ ಆನೆಗಳು ಮುಕ್ತವಾಗಿ ತಿರುಗಾಡಬೇಕೆಂದು ನಾವು ಬಯಸುತ್ತೇವೆ. ಜರ್ಮನಿಯ ಹವಾಮಾನವು ಅದಕ್ಕೆ ಸಾಕಷ್ಟು ಕೆಟ್ಟದಾಗಿದೆ. ಒಂದು ವೇಳೆ ಜರ್ಮನಿ ತುಂಬಾ ಇಷ್ಟಪಟ್ಟರೆ ದಯವಿಟ್ಟು ಆನೆಗಳನ್ನು ಉಡುಗೊರೆಯಾಗಿ ಸ್ವೀಕರಿಸಿ ಎಂದವರು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜರ್ಮನ್ ಪರಿಸರ ಸಚಿವಾಲಯವು, ಈ ಬಗ್ಗೆ ಬೋಟ್ಸ್ ವಾನಾ ನಮ್ಮನ್ನು ಸಂಪರ್ಕಿಸಿಲ್ಲ. ವನ್ಯಜೀವಿ ರಕ್ಷಣೆಗೆ ಅವಕಾಶ ಸಿಕ್ಕರೆ ಖಂಡಿತ ಬೋಟ್ಸ್ ವಾನಾದ ಆಹ್ವಾನವನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ.

ಲಂಡನ್‌ಗೂ ಬೆದರಿಕೆ

ಮಾರ್ಚ್‌ನಲ್ಲಿ ಬೋಟ್ಸ್‌ವಾನ ಆನೆಗಳನ್ನು ಆಮದು ಮಾಡಿಕೊಳ್ಳುವ ಸಫಾರಿ ಬೇಟೆಗಾರರ ಮೇಲೆ ಯುಕೆ ನಿಷೇಧವನ್ನು ವಿರೋಧಿಸಿ ಲಂಡನ್‌ನ ಹೈಡ್ ಪಾರ್ಕ್‌ಗೆ 10,000 ಆನೆಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿತ್ತು.

Exit mobile version