ಬೆಂಗಳೂರು: ಪ್ರೇಮಿಗಳ ವಾರ (Valentine’s Week) ಶುರುವಾಗಿಯೇಬಿಟ್ಟಿದೆ. ಪ್ರತಿಯೊಬ್ಬರೂ ತಮ್ಮ ಪ್ರೀತಿ ಪಾತ್ರರೊಂದಿಗೆ ಈ ವಾರವನ್ನು ಆಚರಿಸಲು ಆರಂಭಿಸಿದ್ದಾರೆ. ಈ ದಿನ ಶುರುವಾಗಿದ್ದಾದರೂ ಹೇಗೆ? ಯಾರಿಂದಾಗಿ ಮತ್ತು ಏಕೆ ಎನ್ನುವ ಬಗ್ಗೆ ನಿಮಗೆ ಗೊತ್ತಿದೆಯೇ? ಪ್ರೀತಿಯ ದಿನದ ಹೊಸ್ತಿಲಲ್ಲಿ ಇರುವಾಗ ಆ ದಿನದ ಮಹತ್ವವನ್ನೂ ತಿಳಿದು ಬರೋಣ ಬನ್ನಿ.
ಇದನ್ನೂ ಓದಿ: Valentine’s Week 2023: ಇಂದಿನಿಂದ ಪ್ರತಿದಿನವೂ ಹಬ್ಬ: ಪ್ರೇಮಿಗಳ ಈ ವಾರವಿಡೀ ಪ್ರೀತಿ ಮಾಡಿ!
ಈ ಪ್ರೇಮಿಗಳ ದಿನ ಆರಂಭವಾಗಿದ್ದು ವ್ಯಾಲೆಂಟೈನ್ ಹೆಸರಿನ ಸಂತನೊಬ್ಬನಿಂದ. ರೋಮ್ ಸಾಮ್ರಾಜ್ಯದಲ್ಲಿದ್ದ ಆ ಸಂತನ ಸಾವಿನ ದಿನವನ್ನೇ ಇಂದಿಗೂ ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ ಡೇ ಆಗಿ ಆಚರಿಸಲಾಗುತ್ತಿದೆ.
ಕ್ರಿ.ಶ.270ರ ಕಾಲದಲ್ಲಿ ರೋಮ್ ಸಾಮ್ರಾಜ್ಯದಲ್ಲಿ ವ್ಯಾಲೆಂಟೈನ್ ಹೆಸರಿನ ಸಂತನಿದ್ದ. ಆಗ ಎರಡನೇ ಕ್ಲಾಡಿಯಸ್ ಹೆಸರಿನ ರಾಜನ ಆಳ್ವಿಕೆಯಿತ್ತು. ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದ ಆತ ಯಾವೊಬ್ಬ ಸೈನಿಕನಿಗೂ ಮದುವೆ ಆಗುವುದಕ್ಕೆ ಬಿಡುತ್ತಿರಲಿಲ್ಲ. ಯುವಕರು ಮದುವೆಯಾಗದೆ ಒಬ್ಬಂಟಿಯಾಗಿಯೇ ಇದ್ದರೆ ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ ಎನ್ನುವ ಆಸೆ ಅವನದ್ದಾಗಿತ್ತು. ಇದರಿಂದಾಗಿ ಅನೇಕ ಸೈನಿಕರು ತಮ್ಮ ಪ್ರೀತಿಯನ್ನು ತ್ಯಾಗ ಮಾಡಬೇಕಾಗಿತ್ತು.
ರಾಜನ ಈ ನಿರ್ಧಾರದ ಬಗ್ಗೆ ಆತನ ಆಸ್ಥಾನದಲ್ಲಿದ್ದ ಸಂತ ವ್ಯಾಲೆಂಟೈನ್‌ಗೆ ಅಸಮಾಧಾನವಿತ್ತು. ಇಡೀ ಸಾಮ್ರಾಜ್ಯದಲ್ಲಿಯೇ ಈ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ವ್ಯಾಲೆಂಟೈನ್ ಮಾತ್ರ. ಅಷ್ಟದೇ ಅಲ್ಲದೆ ಆತ ರಾಜನಿಗೆ ತಿಳಿಯದಂತೆ ಸೈನಿಕರನ್ನು ಅವರ ಪ್ರೀತಿ ಪಾತ್ರರೊಂದಿಗೆ ಒಂದುಗೂಡಿಸುವ ಕೆಲಸವನ್ನೂ ಮಾಡುತ್ತಿದ್ದ. ಮದುವೆ ಆಗಬೇಕೆಂದುಕೊಂಡಿದ್ದವರಿಗೆ ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ.
ಈ ವಿಚಾರ ಒಂದ ದಿನ ರಾಜ ಕ್ಲಾಡಿಯಸ್‌ಗೆ ಗೊತ್ತಾಗುತ್ತದೆ. ರಾಜಧರ್ಮವನ್ನು ಮೀರಿದ ಕಾರಣಕ್ಕೆ ವ್ಯಾಲೆಂಟೈನ್ ಅನ್ನು ಅಪರಾಧಿ ಎಂದು ಘೋಷಿಸಲಾಗುತ್ತದೆ. ಅದೇ ಹಿನ್ನೆಲೆಯಲ್ಲಿ ಆತನನ್ನು ಫೆ.14ರಂದು ಸೆರೆಮನೆಗೆ ಹಾಕಲಾಗುತ್ತದೆ.
ಇದನ್ನೂ ಓದಿ: Valentine’s Week : ಪ್ರೇಮಿಗಳ ಈ ವಾರದಲ್ಲಿ ನೀವು ಕೇಳಲೇಬೇಕಾದ ಲೇಟೆಸ್ಟ್ ಲವ್ ಸಾಂಗ್‌ಗಳಿವು…
ಸೆರೆಮನೆಯಲ್ಲಿದ್ದರೂ ಹೆದರದ ವ್ಯಾಲೆಂಟೈನ್ ಅನೇಕ ಪವಾಡಗಳನ್ನು ಮಾಡಲಾರಂಭಿಸುತ್ತಾರೆ. ಸೆರೆಮನೆಯ ಅಧಿಕಾರಿಯ ಮಗಳಿಗೆ ದೃಷ್ಟಿ ಇಲ್ಲದಿರುವುದು ತಿಳಿದ ಅವರು ಆಕೆಗೆ ದೃಷ್ಟಿ ಬರುವಂತೆ ಮಾಡುತ್ತಾರೆ. ಇನ್ನೂ ಅನೇಕ ಪವಾಡಗಳು ಅವರಿಂದ ಆಗುತ್ತದೆ. ತಮ್ಮನ್ನು ಮದುವೆ ಮಾಡಿಸಿ, ಒಂದು ಮಾಡಿದ ವ್ಯಕ್ತಿ ಜೈಲಿನಲ್ಲಿ ಇರುವ ವಿಚಾರ ತಿಳಿದು ಅನೇಕ ಪ್ರೇಮಿಗಳು ವ್ಯಾಲೆಂಟೈನ್ ಅನ್ನು ನೋಡಲು ಸೆರೆಮನೆಗೆ ಬರುತ್ತಾರೆ.
ಇದೆಲ್ಲದರ ನಡುವೆ ಜೈಲಧಿಕಾರಿಯ ಮಗಳೊಬ್ಬಳಿಗೆ ವ್ಯಾಲೆಂಟೈನ್ ಮೇಲೆ ಪ್ರೀತಿ ಹುಟ್ಟುತ್ತದೆ. ಜೈಲಿನಲ್ಲಿದ್ದ ಆತನನ್ನು ಆಗಾಗ ಬಂದು ಭೇಟಿ ಮಾಡಿ ಹೋಗುತ್ತಿರುತ್ತಾಳೆ. ಆದರೆ ವ್ಯಾಲೆಂಟೈನ್ ಮುಂದೊಂದು ದಿನ ಜೈಲರ್ ಮಗಳಿಗಾಗಿ ಪ್ರೀತಿಯ ಪತ್ರವನ್ನು ಬರೆದಿಟ್ಟು ಇಹಲೋಕ ತ್ಯಜಿಸುತ್ತಾರೆ. ಪ್ರೇಮಿಗಳನ್ನು ಒಂದು ಮಾಡುತ್ತಲೇ ಪ್ರಾಣ ಬಿಟ್ಟ ವ್ಯಾಲೆಂಟೈನ್ ನೆನಪಿಗಾಗಿ ಪ್ರತಿ ವರ್ಷ ಫೆ.14ರಂದು ವ್ಯಾಲೆಂಟೈನ್ ಡೇ ಆಚರಿಸಬೇಕು ಎಂದು ಅಂದಿನ ರೋಮ್ ಫಾದರ್‌ಗಳು ನಿರ್ಧರಿಸುತ್ತಾರೆ. ಅದರಂತೆಯೇ ಇಂದಿಗೂ ಆ ಆಚರಣೆ ಚಾಲ್ತಿಯಲ್ಲಿದೆ.
ಈ ದಿನದಂದು ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ಪ್ರೀತಿಯನ್ನು ಹೇಳಿಕೊಳ್ಳುವ ಮೂಲಕ, ವಿಶೇಷವಾಗಿ ಆರೈಕೆ ಮಾಡುವ ಮೂಲಕ, ಭವಿಷ್ಯದಲ್ಲಿ ಜತೆಯಾಗಿರುವ ಪ್ರಮಾಣ ಮಾಡುವ ಮೂಲಕ ಪ್ರೀತಿಯನ್ನು ಆಚರಿಸುತ್ತಾರೆ.