ಬೆಂಗಳೂರು: ಇದು ಪ್ರೇಮಿಗಳ ವಾರ(Valentines week). ಪ್ರೀತಿ ಪಾತ್ರರಿಗೆ ಪ್ರೀತಿ ಹೇಳಿಕೊಳ್ಳುವುದರಲ್ಲಿ, ಪ್ರೀತಿ ತೋರಿಸುವುದರಲ್ಲಿ ಇಡೀ ಜಗತ್ತೇ ನಿರತವಾಗಿದೆ. ಫೆ.14ಕ್ಕೆ ಬರುವ ಪ್ರೇಮಿಗಳ ದಿನಕ್ಕೂ ಮೊದಲೇ ಕಿಸ್ ಡೇ, ಪ್ರಾಮಿಸ್ ಡೇ, ಚಾಕೋಲೇಟ್ ಡೇನಂತಹ ವಿಶೇಷ ದಿನಗಳಲ್ಲಿ ಆಚರಿಸಿ, ವಿಶೇಷವಾಗಿ ಪ್ರೀತಿ ಹೇಳಿಕೊಳ್ಳಲಾಗುತ್ತಿದೆ. ಅದರಲ್ಲಿ ಒಂದು ವಿಶೇಷವೆಂದರೆ ಈ ಹಗ್ ಡೇ.
ಇದನ್ನೂ ಓದಿ: Cow Hug Day: ಪ್ರೇಮಿಗಳ ದಿನದಂದು ‘ಗೋವುಗಳನ್ನು ಅಪ್ಪುವ ದಿನ’ ಆಚರಿಸಿ, ಅನಿಮಲ್ ವೆಲ್‌ಫೇರ್ ಬೋರ್ಡ್ ನೋಟಿಸ್
ಹಗ್ ಡೇ ಅಥವಾ ಅಪ್ಪುಗೆಯ ದಿನವನ್ನು ಪ್ರೇಮಿಗಳ ವಾರದ ಆರನೇ ದಿನವಾಗಿ ಆಚರಿಸಲಾಗುತ್ತದೆ. ಪ್ರಾಮಿಸ್ ಡೇ ನಂತರ ಹಾಗೂ ಕಿಸ್ ಡೇಗೂ ಮೊದಲು ಬರುವ ಈ ದಿನ ಅದರದ್ದೇ ಆದ ವಿಶೇಷತೆಯನ್ನು ಹೊಂದಿದೆ.
ಪ್ರೀತಿಯೇ ಒಂದು ರೀತಿಯಲ್ಲಿ ಪವಾಡ. ಅದು ಮನಸ್ಸಿನಲ್ಲಿ ತುಂಬಿದ್ದಾಗ ಮಾತುಗಳೂ ಹೊರಡುವುದು ಕಷ್ಟವೇ. ಹೀಗಿರುವಾಗ ಪ್ರೀತಿ ಹೇಳಿಕೊಳ್ಳುವುದು ದೊಡ್ಡದೊಂದು ಸಾಹಸವಿದ್ದಂತೆ. ಆದರೆ ಎಷ್ಟೋ ಬಾರಿ ಬಾಯಿಯಲ್ಲಿ ಹೇಳಲಾಗದ್ದನ್ನು ಈ ಪ್ರೀತಿಯ ಅಪ್ಪುಗೆ ಮಾಡಿ ತೋರಿಸುತ್ತದೆ. ಪ್ರೀತಿಯ ಆಳ ಎಷ್ಟಿದೆ ಎನ್ನುವುದನ್ನೂ ಅಪ್ಪುಗೆಯಲ್ಲೇ ಹೇಳಬಹುದು ಹಾಗೆಯೇ ನಾನೆಂದೆಂದಿಗೂ ನಿನ್ನೊಡನಿದ್ದೇನೆ ಎನ್ನುವುದನ್ನೂ ಇದೇ ಅಪ್ಪುಗೆಯಲ್ಲೇ ತಿಳಿಸಬಹುದು. ಅಂತಹ ವಿಶೇಷವಾದ ಅಪ್ಪುಗೆಯನ್ನು ನೀಡಿ, ಪ್ರೀತಿ ಪಾತ್ರರ ಬದುಕನ್ನು ಹಂಚಿಕೊಳ್ಳುವ ಭರವಸೆ ನೀಡುವುದಕ್ಕೆಂದೇ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ವೈಜ್ಞಾನಿಕ ಕೊಡುಗೆ:
ಅಂದ ಹಾಗೆ ಅಪ್ಪುಗೆಯಿಂದ ಮನಸ್ಸು ಹಗುರಾಗುತ್ತದೆ ಎನ್ನುವ ವಿಚಾರವನ್ನು ನಾವೆಲ್ಲರೂ ಒಪ್ಪಿಯೇ ಒಪ್ಪುತ್ತೇವೆ. ಅದಕ್ಕೆ ವೈಜ್ಞಾನಿಕ ಕಾರಣ ಇದೆ ಕೂಡ. ಎರಡು ದೇಹಗಳು ಅಪ್ಪಿಕೊಂಡಾಗ ದೇಹದಲ್ಲಿ ಆಕ್ಸಿಟೋಸಿಸ್ ಬಿಡುಗಡೆಯಾಗುತ್ತದೆ. ಇದು ಮನಸ್ಸಿನ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಹಾಗೆಯೇ ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡುವುದಕ್ಕೆ ಮತ್ತು ಇಮ್ಯೂನಿಟಿ ಸಿಸ್ಟಂ ಅನ್ನು ಹೆಚ್ಚಿಸುವುದಕ್ಕೂ ಸಹಕಾರಿ. ಈ ಕಾರಣಗಳಿಂದಾಗಿ ನಮಗೆ ಅಪ್ಪುಗೆಯಿಂದಾಗಿ ಮನಸ್ಸಿಗೆ ಉಲ್ಲಾಸವುಂಟಾಗುತ್ತದೆ. ಅಪ್ಪುಗೆಯು ಪ್ರೀತಿ, ಸಾಂತ್ವನ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ಮೌಖಿಕ ಮಾರ್ಗವಾಗಿದೆ. ಇದು ಸರಳವಾದ ವಿಚಾರವೇ ಆದರೂ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಬಹುದಾಗಿದೆ.
ಅಪ್ಪುಗೆಯಲ್ಲೂ ಇದೆ ವಿಧಗಳು:
ಅಪ್ಪುಗೆ ಎಂದ ಮಾತ್ರಕ್ಕೆ ಒಂದೇ ಬಗೆಯ ಅಪ್ಪುಗೆ ಎಂದೇನಲ್ಲ. ಅಪ್ಪಿಕೊಳ್ಳುವುದಕ್ಕೂ ಹಲವಾರು ಬಗೆಯಿದೆ. ಹಾಗೆಯೇ ಪ್ರತಿಯೊಂದು ಬಗೆಗೂ ಅದರದ್ದೇ ಆದ ಅರ್ಥವಿದೆ.
ಬೀರ್ ಹಗ್:
ಈ ರೀತಿಯ ಅಪ್ಪುಗೆಯು ಆರೋಗ್ಯಕರ ಸಂಬಂಧದ ಅತ್ಯುತ್ತಮ ಸೂಚನೆಯಾಗಿದೆ. ಲೈಂಗಿಕತೆಯನ್ನು ಮೀರಿದ ಅನ್ಯೋನ್ಯತೆ, ನಂಬಿಕೆ ಮತ್ತು ರಕ್ಷಣೆಯ ಸಂಕೇತವಾಗಿದೆ.
ಬ್ಯಾಕ್ ಹಗ್:
ಬೀರ್ ಹಗ್‌ನಂತೆಯೇ, ಹಿಂದಿನಿಂದ ಯಾರನ್ನಾದರೂ ಬಿಗಿಯಾಗಿ ತಬ್ಬಿಕೊಳ್ಳುವುದು ಸಂಬಂಧದ ಮತ್ತೊಂದು ನಿರ್ಣಾಯಕ ತೋರಿಕೆಯಾಗಿದೆ. ಈ ರೀತಿ ಸಂಗಾತಿಯನ್ನು ತಬ್ಬಿಕೊಳ್ಳುವುದು ಜೀವನದಲ್ಲಿ ತಮ್ಮ ರಕ್ಷಕನಾಗಿರುತ್ತೇನೆ ಹಾಗೂ ಯಾವುದೇ ಸಮಸ್ಯೆ ಆಗುವುದಕ್ಕೆ ಬಿಡುವುದಿಲ್ಲ ಎಂದು ಹೇಳುವ ಈ ದೈಹಿಕ ಭಾಷೆಯಾಗಿದೆ.
ಫ್ರೆಂಡ್ಲಿ ಹಗ್:
ಈ ಅಪ್ಪುಗೆಯು ನಿಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ನೀವು ನೀಡಬಹುದಾದ ಸುರಕ್ಷಿತ ರೀತಿಯ ಅಪ್ಪುಗೆಗಳಲ್ಲಿ ಒಂದು. ಬೆನ್ನನ್ನು ತಟ್ಟಿ ಅಪ್ಪಿಕೊಳ್ಳುವುದು ಯಾರಿಗಾದರೂ ನೀವು ಅವರಿಗಾಗಿ ಇದ್ದೀರಿ, ನೀವು ಅವರ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದು ತೋರಿಸುವ ಮಾರ್ಗವಾಗಿದೆ.
ಸೈಡ್ ಹಗ್:
ವ್ಯಕ್ತಿಯ ಒಂದು ಬದಿಯಲ್ಲಿ ನಿಂತು ಅವರ ಸೊಂಟ ಅಥವಾ ಭುಜದ ಸುತ್ತ ತೋಳುಗಳಿಂದ ತಬ್ಬಿಕೊಳ್ಳುವುದನ್ನು ಸೈಡ್ ಹಗ್ ಎಂದು ಕರೆಯಲಾಗುತ್ತದೆ. ಈ ಅಪ್ಪುಗೆಯು ಹೆಚ್ಚೇನು ಸ್ನೇಹಿತರಲ್ಲದ ಪರಿಚಯಸ್ಥರಲ್ಲಿ ಸಾಮಾನ್ಯವಾಗಿದೆ.
ವೈಸ್ಟ್ ಹಗ್:
ಈ ರೀತಿಯ ಅಪ್ಪುಗೆಯಲ್ಲಿ ಇಬ್ಬರ ಸೊಂಟಗಳು ಸಂಪೂರ್ಣವಾಗಿ ತಬ್ಬಿಕೊಂಡಿರುತ್ತವೆ. ಅವರ ತೋಳುಗಳು ಪರಸ್ಪರರ ಸೊಂಟದ ಸುತ್ತಲೂ ಇರುತ್ತದೆ. ಇದು ಪ್ರಣಯದ ಅಪ್ಪುಗೆಯಾಗಿದೆ. ಇದು ನಿಮ್ಮ ಸಂಬಂಧದಲ್ಲಿ ಎಷ್ಟು ಪ್ರೀತಿ ಮತ್ತು ವಾತ್ಸಲ್ಯ ಇದೆ ಎನ್ನುವುದನ್ನು ತೋರಿಸುತ್ತದೆ.
ಐ ಕಾಂಟ್ಯಾಕ್ಟ್ ಹಗ್:
ಇದು ನಿಮ್ಮ ಸಂಬಂಧದ ಭೌತಿಕ ಅಂಶಗಳನ್ನು ಮೀರಿ ಹೋಗಲು ಅನುಮತಿಸುವ ರೀತಿಯ ಅಪ್ಪುಗೆಗಳಲ್ಲಿ ಒಂದಾಗಿದೆ.
ಹಗ್ ಡೇ ಆಚರಣೆ ಹೇಗೆ?
ಈ ವರ್ಷದ ಹಗ್ ಡೇ ಫೆ.12ರಂದು ಇದೆ. ಭಾನುವಾರವಾಗಿರುವ ಈ ದಿನ ನೀವು ನಿಮ್ಮ ಅದೆಷ್ಟೇ ಬಿಜಿ ಇದ್ದರೂ ನಿಮ್ಮ ಪ್ರೀತಿ ಪಾತ್ರರಿಗಾಗಿ ಬಿಡುವು ಮಾಡಿಕೊಳ್ಳಿ. ಅವರ ಬಳಿಗೆ ಹೋಗಿ ಪ್ರೀತಿಯಿಂದ ಅಪ್ಪುಗೆ ನೀಡಿ. ಈ ರೀತಿ ಮಾಡಿದಾಗ ಬೇರೆ ಯಾವುದೇ ಮಾತಿನ ಅವಶ್ಯಕತೆಯೂ ಇರುವುದಿಲ್ಲ. ನಿಮ್ಮ ಅಪ್ಪುಗೆಯೇ ನಿಮ್ಮ ಪ್ರೀತಿಯನ್ನು ಅವರಿಗೆ ತಿಳಿಸಿರುತ್ತದೆ.