ನವದೆಹಲಿ: ಪ್ರಧಾನಿ (PM) ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹೊಸ ಮಂತ್ರಿಗಳ ಸೇರ್ಪಡೆಯೊಂದಿಗೆ ವಿಐಪಿ ಭದ್ರತೆಯಲ್ಲಿ (VIP Security) ಪ್ರಮುಖ ಬದಲಾವಣೆಗಳಾಗುವ ನಿರೀಕ್ಷೆ ಇದೆ. ಹನ್ನೆರಡು ಹೆಚ್ಚು ಅಪಾಯ ಇರುವ ವ್ಯಕ್ತಿಗಳ ಕಾವಲು ಕೆಲಸವನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯಿಂದ (NSG) ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮತ್ತು ಇತರ ಅರೆಸೇನಾ ಪಡೆಗಳಿಗೆ ವರ್ಗಾಯಿಸುವ ಸಾಧ್ಯತೆ ಇದೆ.
ಈ ಕುರಿತು ಗೃಹ ವ್ಯವಹಾರಗಳ ಸಚಿವಾಲಯವು ಶೀಘ್ರದಲ್ಲೇ ಪರಿಶೀಲಿಸಲಿದೆ. ಇದು ಹಲವಾರು ರಾಜಕೀಯ ವ್ಯಕ್ತಿಗಳು, ಮಾಜಿ ಮಂತ್ರಿಗಳು, ನಿವೃತ್ತರಿಗೆ ಭದ್ರತಾ ರಕ್ಷಣೆಯಲ್ಲಿ ಮಾರ್ಪಾಡು ಅಥವಾ ಉನ್ನತೀಕರಣ, ಕಡಿತ, ವಿಸ್ತರಣೆ, ಹಿಂತೆಗೆದುಕೊಳ್ಳುವಿಕೆಗೆ ಕಾರಣವಾಗಬಹುದು.
ಜವಾಬ್ದಾರಿ ವರ್ಗಾವಣೆ
ವಿಐಪಿ ಭದ್ರತಾ ಕರ್ತವ್ಯಗಳಿಂದ ಎನ್‌ಎಸ್‌ಜಿ ‘ಬ್ಲ್ಯಾಕ್ ಕ್ಯಾಟ್’ ಕಮಾಂಡೋಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಪ್ರಸ್ತಾಪವನ್ನು ಜಾರಿಗೆ ತರಲಾಗುವುದು ಎನ್ನಲಾಗಿದೆ. ಎಲ್ಲಾ ಒಂಬತ್ತು ಝಡ್-ಪ್ಲಸ್ ವರ್ಗದ ರಕ್ಷಕರನ್ನು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ವಿಐಪಿ ಭದ್ರತಾ ಘಟಕಕ್ಕೆ ವರ್ಗಾಯಿಸಲಾಗುತ್ತದೆ. ಪ್ರಸ್ತುತ ಐಟಿಬಿಪಿ ಸಿಬ್ಬಂದಿಯ ರಕ್ಷಣೆಯಲ್ಲಿರುವ ಕೆಲವು ವಿಐಪಿಗಳನ್ನು ಸಿಆರ್‌ಪಿಎಫ್ ಅಥವಾ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ವಿಐಪಿ ಭದ್ರತಾ ವಿಭಾಗಕ್ಕೆ ಮರು ನಿಯೋಜಿಸುವ ಸಾಧ್ಯತೆ ಇದೆ. ಇದನ್ನು ವಿಶೇಷ ಭದ್ರತಾ ಗುಂಪು (SSG) ಎಂದೂ ಕರೆಯಲಾಗುತ್ತದೆ.
ಎರಡು ದಶಕಗಳ ಹಿಂದೆ, ಅಂದರೆ 1984ರಲ್ಲಿ ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳನ್ನು ರಚಿಸಲಾಯಿತು. ಇದೀಗ ಅವರನ್ನು ವಿಐಪಿ ಭದ್ರತಾ ಕರ್ತವ್ಯಗಳಿಂದ ಹಿಂತೆಗೆದುಕೊಂಡ ಬಳಿಕ ಸುಮಾರು 450 ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳು ಕರ್ತವ್ಯದಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಎನ್ ಎಸ್ ಜಿ ಭದ್ರತೆ ಹೊಂದಿರುವ ವಿಐಪಿಗಳು
ಪ್ರಸ್ತುತ ಎನ್ ಎಸ್ ಜಿ ಭದ್ರತೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಎಸ್ಪಿ ಮುಖ್ಯಸ್ಥೆ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೋವಾಲ್, ಬಿಜೆಪಿ ನಾಯಕ ಮತ್ತು ಛತ್ತೀಸ್‌ಗಢದ ಮಾಜಿ ಸಿಎಂ ರಮಣ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮತ್ತು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್, ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರಿಗೆ ನೀಡಲಾಗಿದೆ.
ಐಟಿಬಿಪಿ ಭದ್ರತೆ ಹೊಂದಿರುವ ವಿಐಪಿಗಳು
ಬಿಜೆಪಿ ಮುಖಂಡ ಮುರಳಿ ಮನೋಹರ ಜೋಶಿ, ಎನ್ ಸಿ ನಾಯಕ ಒಮರ್ ಅಬ್ದುಲ್ಲಾ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ.
ವಿಐಪಿ ಭದ್ರತೆಯಿಂದ ಎನ್ ಎಸ್ ಜಿ ಅನ್ನು ಏಕೆ ತೆಗೆದುಹಾಕಲಾಗುತ್ತಿದೆ?
ವಿಐಪಿಗಳಿಗೆ ಭದ್ರತೆ ಒದಗಿಸುವ ಕಾರ್ಯದಿಂದ ಎನ್‌ಎಸ್‌ಜಿಯನ್ನು ಮುಕ್ತಗೊಳಿಸುವ ಯೋಜನೆಯು 2012ರಿಂದಲೇ ಪ್ರಸ್ತಾವನೆಯಲ್ಲಿದೆ. ದೇಶದ ಅನೇಕ ಸ್ಥಳಗಳಲ್ಲಿ ಏಕಕಾಲದಲ್ಲಿ ಭಯೋತ್ಪಾದಕ ದಾಳಿಗಳು ನಡೆಯುವ ಸಾಧ್ಯತೆ ಇರುವುದರಿಂದ ವಿವಿಧೆಡೆ ಎನ್‌ಎಸ್‌ಜಿ ಕಮಾಂಡೋಗಳ ನೇಮಕ ಅಗತ್ಯವಿದೆ.
ಇದನ್ನೂ ಓದಿ: Modi 3.0 Cabinet: ಮೈತ್ರಿ ಸರ್ಕಾರದಲ್ಲೂ ಮೋದಿಯದ್ದೇ ಪ್ರಾಬಲ್ಯ; 4 ಪ್ರಮುಖ ಖಾತೆಗಳು ಬಿಜೆಪಿ ಪಾಲು!
ಭಯೋತ್ಪಾದನಾ ನಿಗ್ರಹ ಮತ್ತು ಹೈಜಾಕ್ ಸೇರಿದಂತೆ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ಎನ್‌ಎಸ್‌ಜಿ ಗಮನಹರಿಸಬೇಕು ಮತ್ತು ಹೆಚ್ಚಿನ ಅಪಾಯದ ವಿಐಪಿಗಳನ್ನು ರಕ್ಷಿಸುವ ಕಾರ್ಯವು ಒಂದು ಹೊರೆ. ಇದರಿಂದ ಅವರ ವಿಶೇಷ ಸಾಮರ್ಥ್ಯಗಳು ಸೀಮಿತವಾಗುತ್ತದೆ ಎಂದು ಸರ್ಕಾರ ಪರಿಗಣಿಸಿದೆ.
ಪ್ರಸ್ತುತ ಸಿಆರ್‌ಪಿಎಫ್, ಸಿಐಎಸ್‌ಎಫ್ ವಿಐಪಿ ಭದ್ರತಾ ವಿಭಾಗಗಳು 200ಕ್ಕೂ ಹೆಚ್ಚು ವ್ಯಕ್ತಿಗಳಿಗೆ ರಕ್ಷಣೆ ನೀಡುತ್ತಿವೆ. ಸಿಆರ್‌ಪಿಎಫ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಗಾಂಧಿ ಕುಟುಂಬವನ್ನು ರಕ್ಷಿಸುವ ಕಾರ್ಯವನ್ನು ಹೊಂದಿದೆ. ಸಿಐಎಸ್‌ಎಫ್ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರ ಹಲವರಿಗೆ ರಕ್ಷಣೆ ನೀಡುತ್ತಿದೆ.