Site icon Vistara News

Viral News: ಸಾಯುವ ಮುನ್ನ ವಿದ್ಯಾರ್ಥಿಗಳ ಜೀವ ಕಾಪಾಡಿದ ಶಾಲಾ ಬಸ್ ಚಾಲಕ!

Viral News

ಚೆನ್ನೈ: ನಾವು ಪ್ರತಿದಿನ ನೋಡುವ ಹಾಗೆ ಕೆಲವೊಂದು ಶಾಲಾ ಬಸ್‍ಗಳು ಬಹಳ ವೇಗವಾಗಿ ಚಲಿಸುತ್ತಿರುತ್ತವೆ. ಆ ಬಸ್ಸಿನ ಚಾಲಕರಿಗೆ ತಮ್ಮ ವಾಹನದಲ್ಲಿ ಚಿಕ್ಕ ಮಕ್ಕಳು ಇರುತ್ತಾರೆ ಎಂಬ ಪ್ರಜ್ಞೆ ಕೂಡ ಇರುವುದಿಲ್ಲ. ಅಷ್ಟು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಆದರೆ ತಮಿಳುನಾಡಿನ ತಿರುಪ್ಪೂರಿನಲ್ಲಿ ಶಾಲಾ ಬಸ್ ಚಾಲಕನೊಬ್ಬ ಶಾಲಾ ವಿದ್ಯಾರ್ಥಿಗಳನ್ನು ರಕ್ಷಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಅದಕ್ಕೆ ಸಂಬಂಧಪಟ್ಟ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral news) ಆಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ತಿರುಪುರ್ ಜಿಲ್ಲೆಯ ಗಂಗೇಯಂ ನಿವಾಸಿ ಮಲಯಪ್ಪನ್ ಖಾಸಗಿ ಶಾಲಾ ಬಸ್ ಚಾಲನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಅವರ ಸಾಯುವ ಸ್ಥಿತಿಯಲ್ಲಿದ್ದರೂ ಕೂಡ ಮಕ್ಕಳಿಗೆ ಯಾವುದೇ ಹಾನಿಯಾಗಬಾರದೆಂದು ಅವರು ವಾಹನವನ್ನು ರಸ್ತೆಯ ಬದಿಗೆ ತಂದು ನಿಲ್ಲಿಸಿ ತಮ್ಮ ಪ್ರಾಣಬಿಟ್ಟಿದ್ದಾರೆ. ಶಾಲಾ ಬಸ್ ಚಾಲಕನ ಈ ನಿಸ್ವಾರ್ಥ ಕಾರ್ಯವು ಅನೇಕ ವಿದ್ಯಾರ್ಥಿಗಳ ಜೀವವನ್ನು ಉಳಿಸಿತು.

ಮಲಯಪ್ಪನ್ ಅವರನ್ನು ಆಸ್ಪತ್ರೆ ಕರೆದುಕೊಂಡು ಹೋದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂಬುದಾಗಿ ತಿಳಿದುಬಂದಿದೆ. ಅವರ ನಿಸ್ವಾರ್ಥ ಕಾರ್ಯವನ್ನು ವೀರೋಚಿತ ಎಂದು ಶ್ಲಾಘಿಸಲಾಗಿದ್ದು, ಶಾಲಾ ಮಕ್ಕಳ ಸುರಕ್ಷತೆಗಾಗಿ ಅವರ ಸಮರ್ಪಣೆಯನ್ನು ಅನೇಕರು ಹೊಗಳಿದ್ದಾರೆ.

ಇದನ್ನೂ ಓದಿ: ʼಸಾಫ್ಟ್ ಟಚ್ʼ ಸ್ಪಾಗೆ ಹೋಗಿದ್ದ ಕ್ರಿಮಿನಲ್‌ನನ್ನು ಪ್ರೇಯಸಿ ಎದುರೇ ತುಂಡು ತುಂಡಾಗಿ ಕತ್ತರಿಸಿದರು!

ಮೃತ ವ್ಯಕ್ತಿ ವೆಲ್ಲಕೋಯಿಲ್‌ನ ಎಎನ್‍ವಿ ಮೆಟ್ರಿಕ್ ಶಾಲೆಯಲ್ಲಿ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು . ಗುರುವಾರ ಸಂಜೆ ಶಾಲಾ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ವೆಲ್ಲಕೋಯಿಲ್-ಕರೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಅವರು ತಕ್ಷಣ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮಕ್ಕಳ ಜೀವವನ್ನು ಉಳಿಸಿದರು, ಮತ್ತು ತಮ್ಮ ಪ್ರಾಣಬಿಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಸ್ ಚಾಲಕನ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದು, ‘ಸಾವಿನ ಅಂಚಿನಲ್ಲಿದ್ದರೂ ಅವರು ಮಕ್ಕಳ ಜೀವವನ್ನು ಉಳಿಸಿದ್ದಾರೆ ಎಂದು ಹೊಗಳಿದ್ದಾರೆ. ಈ ಘಟನೆಯು ಅವರ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ, ಅನೇಕರು ಮಲಯಪ್ಪನ್ ಅವರ ಧೈರ್ಯಕ್ಕೆ ಗೌರವ ಸಲ್ಲಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.

Exit mobile version