ಹೈದರಾಬಾದ್: ಸಾಮಾನ್ಯವಾಗಿ ಗಂಡಸರು ಕುಡಿದು ರಸ್ತೆಯಲ್ಲಿ ಅವಾಂತರಗಳನ್ನು ಸೃಷ್ಟಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ಕುಡಿದು ಅದರ ಮತ್ತಿನಲ್ಲಿ ಬಸ್ ಕಂಡಕ್ಟರ್ ಜೊತೆ ರೌಡಿ ಹಾಗೇ ವರ್ತಿಸಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಮಹಿಳೆ ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ಬಸ್ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ್ದಲ್ಲದೇ ಬಸ್ಸಿನ ಮಹಿಳಾ ಕಂಡಕ್ಟರ್‌ನ ಮೇಲೆ ಹಾವನ್ನು ಎಸೆದಿದ್ದಾಳೆ. ಈ ಘಟನೆ ವಿದ್ಯಾನಗರದಲ್ಲಿ ಗುರುವಾರ ಸಂಜೆ ನಡೆದಿದ್ದು ಇದು ಎಲ್ಲೆಡೆ ವೈರಲ್ (Viral News)ಆಗಿದೆ.
ಟಿಜಿಎಸ್‍ಆರ್‌ಟಿಸಿ ಬಸ್ ವಿದ್ಯಾನಗರದ ಮೂಲಕ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ 50 ವರ್ಷ ವಯಸ್ಸಿನ ಬೇಗಂ ಎಂಬ ಮಹಿಳೆ ಬಸ್ ಅನ್ನು ನಿಲ್ಲಿಸಲು ಹೇಳಿದ್ದಾಳೆ. ಆದರೆ ಕಂಡಕ್ಟರ್ ಹಾಗೂ ಡ್ರೈವರ್ ಬಸ್ ನಿಲ್ಲಿಸಲಿಲ್ಲ. ಇದರಿಂದ ಕೋಪಗೊಂಡ ಮಹಿಳೆ ಬಸ್ಸಿನ ಹಿಂಭಾಗಕ್ಕೆ ಬಿಯರ್ ಬಾಟಲಿಯನ್ನು ಎಸೆದು ಹಿಂಭಾಗದ ವಿಂಡ್ ಶೀಲ್ಡ್ ಗೆ ಹಾನಿಮಾಡಿದ್ದಾಳೆ. ಆಗ ಬಸ್ ನಿಲ್ಲಿಸಿ ಡ್ರೈವರ್, ಮಹಿಳಾ ಕಂಡೆಕ್ಟರ್ ಹಾಗೂ ಪ್ರಯಾಣಿಕರು ಅವಳನ್ನು ಹಿಡಿದು ತರಾಟೆಗೆ ತೆಗೆದುಕೊಂಡಾಗ ಮಹಿಳೆ ತನ್ನ ಚೀಲದಲ್ಲಿದ್ದ ನಾಗರಹಾವನ್ನು ಮಹಿಳಾ ಕಂಡಕ್ಟರ್ ಮೈಮೇಲೆ ಎಸೆದಿದ್ದಾಳೆ. ಆಗ ಕಂಡಕ್ಟರ್ ಮೈಮೇಲೆ ಬಿದ್ದ ಹಾವು ಅವರಿಗೆ ಯಾವುದೇ ಹಾನಿ ಮಾಡದೆ ಪಕ್ಕಕ್ಕೆ ಸರಿದುಕೊಂಡು ಹೋಗಿದೆ. ಇದರಿಂದ ಕಂಡಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಟಿಜಿಎಸ್‍ಆರ್‌ಟಿಸಿ ಎಂಡಿ ವಿಸಿ ಸಜ್ಜನರ್, ಇಂತಹ ಘಟನೆಗಳನ್ನು ನೋಡುವುದು ದುಃಖಕರವಾಗಿದೆ ಎಂದು ತಿಳಿಸಿ ಆರ್‌ಟಿಸಿ ನೌಕರರು ಮತ್ತು ಬಸ್‍ಗಳ ಮೇಲೆ ಇಂತಹ ದಾಳಿಗಳನ್ನು ಮಾಡದಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. ಮತ್ತು ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ಪೊಲೀಸರ ಸಹಾಯದಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಜ್ಜನರ್ ಹೇಳಿದ್ದಾರೆ.
ಇದನ್ನೂ ಓದಿ: ತನ್ನ ಹಸ್ತಮೈಥುನದ ವಿಡಿಯೊ ಕಳುಹಿಸಿ ವಿದ್ಯಾರ್ಥಿಯನ್ನು ಕಾಮದ ಬಲೆಗೆ ಸಿಲುಕಿಸಿದ್ದ ಶಿಕ್ಷಕಿಯ ಬಂಧನ!
ಈ ಬಗ್ಗೆ ಮಾತನಾಡಿದ ಮಹಿಳಾ ಕಂಡಕ್ಟರ್, “ನಾನು ಅವಳನ್ನು ಹಿಡಿದು ಅವಳೊಂದಿಗೆ ಮಾತನಾಡುತ್ತಿದ್ದೆ, ಅವಳ ಬಳಿ ಬಸ್ ಮೇಲೆ ಏಕೆ ದಾಳಿ ಮಾಡಿದೆ ಎಂದು ಕೇಳುತ್ತಿದ್ದೆ, ಆಗ ಅವಳು ಇದ್ದಕ್ಕಿದ್ದಂತೆ ತನ್ನ ಚೀಲದಿಂದ ಹಾವನ್ನು ಹೊರತೆಗೆದು ನನ್ನ ಮೇಲೆ ಎಸೆದಳು. ಅಲ್ಲಿದ್ದ ಎಲ್ಲರೂ ಓಡಿಹೋದರು” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮಹಿಳೆಯನ್ನು ವಿಚಾರಣೆ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.