ಜನರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹಲವು ಬಗೆಯ ರೀಲ್ಸ್‌ಗಳನ್ನ ಮಾಡಿ ಹರಿಬಿಡುತ್ತಾರೆ. ಈ ರೀಲ್ಸ್ ಮೂಲಕ ಅನೇಕ ಪ್ರತಿಭೆಗಳು ಹೊರಗೆ ಬರುತ್ತವೆ. ಇದೀಗ ದಂಪತಿಯ ಅಂತಹದೊಂದು ಪ್ರತಿಭೆ ಹೊರಗೆ ಬಂದಿದೆ. ಇನ್ನೇನು ನಾಗರ ಪಂಚಮಿ ಹಬ್ಬ ಹತ್ತಿರ ಬರುತ್ತಿದೆ. ಜನರು ನಾಗದೇವರನ್ನು ನೆನೆದು ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ಸಮಯದಲ್ಲಿ ಇದೀಗ ದಂಪತಿ ನಾಗಿನಿ ಡ್ಯಾನ್ಸ್ ಮೂಲಕ ಜನರಿಗೆ ನಾಗದೇವರ ದರ್ಶನ ನೀಡಿದ್ದಾರೆ. ಅವರ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಅವರ ಡ್ಯಾನ್ಸ್ ವೀಕ್ಷಕರ ಮುಖದಲ್ಲಿ ನಗುವನ್ನು ಮೂಡಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೊದಲ್ಲಿ, ದಂಪತಿ ನೀರಿನಿಂದ ತುಂಬಿರುವ ಹೊಲದಲ್ಲಿ ಹಾವಿನಂತಹ ಚಲನೆಗಳಿಂದ ಸ್ಫೂರ್ತಿ ಪಡೆದ ನಾಗಿನ್ ಡ್ಯಾನ್ಸ್ ಅನ್ನು ಪ್ರದರ್ಶಿಸಿದ್ದಾರೆ. ಅವರಿಬ್ಬರು ಹೊಲದಲ್ಲಿನ ಕೆಸರಿನಲ್ಲಿ ಮಲಗಿಕೊಂಡು, ನಂತರ ನಿಂತು ಹಾವಿನಂತೆ ಬಳಕುತ್ತಾ ನೃತ್ಯ ಮಾಡಿದ್ದಾರೆ. ಇಲ್ಲಿ ಮಹಿಳೆ ರೊಮ್ಯಾಂಟಿಕ್ ಭಂಗಿಗಳನ್ನು ನೀಡಿದ್ದಾಳೆ. ಆ ಹೊಲದಲ್ಲಿ ಕೆಸರೇ ತುಂಬಿರುವುದರಿಂದ ದಂಪತಿಯ ಬಟ್ಟೆ, ಮೈ ಕೇಸರಿನಿಂದ ಬಳಿದುಕೊಂಡಿದೆ. ಈ ದೃಶ್ಯವು ಅನೇಕ ವೀಕ್ಷಕರನ್ನು ರಂಜಿಸಿದೆ ಮತ್ತು ಗೊಂದಲಕ್ಕೀಡು ಮಾಡಿದೆ.
ವಿನಯ್ ವಿಕೆ 9351 ಎಂಬ ಬಳಕೆದಾರರು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಶೀಘ್ರದಲ್ಲೇ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅನೇಕರು ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಲೈಕ್‌ಗಳು ಮತ್ತು ವೀಕ್ಷಣೆಗಳ ಹಸಿವು ಜನರನ್ನು ಹುಚ್ಚರನ್ನಾಗಿ ಮಾಡುತ್ತಿದೆ” ಎಂದು ಒಬ್ಬ ವೀಕ್ಷಕರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ನಾಗಿನ್ ಈ ರೀತಿ ನೃತ್ಯ ಮಾಡುತ್ತಾರೆಯೇ” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: 1 ಸಾವಿರ ರೂ. ಲಂಚ ಪ್ರಕರಣ 25 ವರ್ಷಗಳ ಬಳಿಕ ಇತ್ಯರ್ಥ! ಹಿಂಗಾಂದ್ರೆ ಹೆಂಗೆ ಅಂತಿದ್ದಾರೆ ಜನ!
ಸಾಮಾನ್ಯವಾಗಿ ಜನರು ಕೆಸರು ಕಾಲಿಗೆ ತಗುಲಿದರೆ ಅದನ್ನು ಕಂಡು ಅಸಹ್ಯಪಟ್ಟುಕೊಂಡು ಬೇಗನೆ ಹೋಗಿ ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಅಂತಹದರಲ್ಲಿ ಈ ದಂಪತಿ ಕೆಸರು ಗದ್ದೆಯಲ್ಲೇ ಬಿದ್ದು ಉರುಳಾಡುತ್ತಿದ್ದಾರೆ. ಇದನ್ನು ನೋಡಿದರೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಎಷ್ಟು ದೂರ ಹೋಗುತ್ತಾರೆ ಮತ್ತು ಯಾವ ಕೆಲಸಕ್ಕೂ ಮುಂದಾಗುತ್ತಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. ಕೆಲವು ವೀಕ್ಷಕರು ವಿಡಿಯೊವನ್ನು ಮನರಂಜನೆಯಾಗಿ ಕಂಡುಕೊಂಡರೆ, ಇತರರು ಆನ್‍ಲೈನ್ ಖ್ಯಾತಿಯಗಾಗಿ ಜನರು ಎಷ್ಟು ದೂರ ಹೋಗಬಹುದು ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.