ಪಾಟ್ನಾ : ಹಾವು ಮತ್ತು ಮುಂಗುಸಿ ಆ ಜನ್ಮ ಶತ್ರುಗಳು ಎಂಬುದು ಎಲ್ಲರಿಗೂ ತಿಳಿದಿದೆ. ಹಾವನ್ನು ಎಲ್ಲಿ ನೋಡಿದರೂ ಮುಂಗುಸಿ ಬಿಡದೆ ಬೆನ್ನಟ್ಟಿ ಅದರ ಜೊತೆ ಸೆಣಸಾಡಿ ಅದನ್ನು ಕೊಂದು ಹಾಕಲು ಪ್ರಯತ್ನಿಸುತ್ತದೆ. ಎಷ್ಟೋ ಬಾರಿ ನಮ್ಮ ಮನೆಯ ಸುತ್ತಮುತ್ತಲೂ ಈ ರೀತಿ ಹಾವು ಮುಂಗುಸಿ ಕಾಳಗ ನಡೆದು ಅವುಗಳನ್ನು ಜನರು ಓಡಿಸುವುದನ್ನು ನಾವು ಕಂಡಿರುತ್ತೇವೆ. ಅದೇರೀತಿ ಇತ್ತೀಚೆಗೆ ಪಾಟ್ನಾ ವಿಮಾನ ನಿಲ್ದಾಣದ ರನ್ವೇಯಲ್ಲಿ ಮೂರು ಮುಂಗುಸಿಗಳು ಮತ್ತು ಹಾವಿನ ನಡುವೆ ದೊಡ್ಡ ಕಾಳಗವೇ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಈ ವೈರಲ್ ವಿಡಿಯೊದಲ್ಲಿ ಮೂರು ಮುಂಗುಸಿಗಳು ರನ್‌ವೇ ಪಕ್ಕದಲ್ಲಿ ಹಾವಿನ ಜೊತೆ ಹೋರಾಡುತ್ತಿವೆ. ಮುಂಗುಸಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಹಾವು ತನ್ನ ಹಲ್ಲುಗಳನ್ನು ಮುಂದಕ್ಕೆ ಚಾಚುತ್ತಿದೆ. ನಂತರ, ಇನ್ನೂ ಎರಡು ಮುಂಗುಸಿಗಳು ಸೇರಿಕೊಂಡು ಮೂರು ಕಡೆಯಿಂದ ಹಾವಿನ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತವೆ. ಮುಂಗುಸಿಯ ದಾಳಿಯನ್ನು ತಪ್ಪಿಸಲು ಹಾವು ಹೆಡೆ ಎತ್ತುತ್ತಿದೆ. ಆದರೆ ಮುಂಗುಸಿಗಳು ಹಾವನ್ನು ಮುಗಿಸಲೇ ಬೇಕು ಎಂದು ಪಣತೊಟ್ಟು ಅದರ ಮೇಲೆ ದಾಳಿ ಮುಂದುವರಿಸುತ್ತಿವೆ.
Snake Vs 3 Mongooses
— Vijay Singh (@VijaySikriwal) August 12, 2024
Epic Showdown At Patna Airport Runway.
Whenever a mongoose and a snake confront each other, the mongoose often tries to attack the snake's head, as it is the snake's most vulnerable point. If the mongoose succeeds in grabbing the snake's head, it usually wins… pic.twitter.com/SANHGtoXG3
ಪಾಟ್ನಾದ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೊವನ್ನು ಸೆರೆಹಿಡಿದಿದ್ದಾರೆ. ಮುಂಗುಸಿ ಮತ್ತು ಹಾವುಗಳು ಜಗಳವಾಡುವ ಈ ಅಪರೂಪದ ಘಟನೆಗಳು ಕಂಡು ಸೋಶಿಯಲ್ ಮಿಡಿಯಾದ ನೆಟ್ಟಿಗರು ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದಂತ ಕಸಿ ಮಾಡಲು ಮೂಳೆಗಳಿಗಾಗಿ ಸಾವಿರಾರು ಶವಗಳನ್ನು ಕದ್ದ ಚೀನಾ ಕಂಪನಿ!
“ಇದು ಪೈಪೋಟಿಯಂತೆ ಕಾಣುತ್ತಿರಬಹುದು ಆದರೆ ಆ ಮುಂಗುಸಿಗಳು ಈ ಹಾವನ್ನು ತಿನ್ನಲು ಬಯಸುತ್ತವೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಭಾರತ ದೇಶದಲ್ಲಿ ನಮ್ಮ ಮುಂಗುಸಿ ಕೂಡ ಒಲಿಂಪಿಕ್ ಪದಕಗಳನ್ನು ಗೆಲ್ಲಬಲ್ಲದು!” ಎಂದು ವ್ಯಂಕ್ಯವಾಗಿ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ನಾಗಿನ್ 6 ಚಿತ್ರದ ಟೀಸರ್ ಬಂದಿದೆ” ಎಂದು ಹೇಳಿದ್ದಾರೆ. ಇಬ್ಬರ ನಡುವೆ ಸಾಕಷ್ಟು ಪೈಪೋಟಿ ಇದೆ. ಆದರೆ ಇದರಲ್ಲಿ ನೋಡೋಕೆ ಏನಿದೆ? ಕೊನೆಯಲ್ಲಿ ಗೆಲ್ಲುವುದು ಮುಂಗುಸಿ. ಯಾಕೆಂದರೆ ಅದು ಎಂದಿಗೂ ಸೋಲುವುದಿಲ್ಲ ಎಂದು ಮತ್ತೊಬ್ಬರು ತಿಳಿಸಿದ್ದಾರೆ.