Site icon Vistara News

Viral Video: ಮಳೆಯಲಿ ಜೊತೆಯಲಿ… ಆನೆ-ಮಾವುತ ನಡುವಿನ ಮಾಂತ್ರಿಕ ಕ್ಷಣ! ಹೃದಯ ತಟ್ಟುವ ವಿಡಿಯೊ

Viral Video


ಬೆಂಗಳೂರು: ದೇಶದ ಹಲವೆಡೆ ಮಳೆ ಧಾರಕಾರವಾಗಿ ಸುರಿಯುತ್ತಿದೆ. ಬಿಸಿಲಿನ ಬೇಗೆಯಿಂದ ದಣಿದು ಬಾಡಿದ ಭೂಮಿ, ಪ್ರಕೃತಿ, ಮನುಷ್ಯರು, ಪ್ರಾಣಿಪಕ್ಷಿಗಳಿಗೂ ಇದು ಆನಂದ ನೀಡಿದೆ. ಭೂಮಿ ತಂಪಾಗಿ, ಪ್ರಕೃತಿ ಹಚ್ಚ ಹಸಿರಾಗಿ ಕಂಗೊಳಿಸುತ್ತಿದೆ. ಈ ಪ್ರಕೃತಿಯ ಸೌಂದರ್ಯವನ್ನು ಕಂಡು ಪ್ರಾಣಿಪಕ್ಷಿಗಳು ಆನಂದಿಸುತ್ತಿವೆ. ಇದೀಗ ಈ ಹಚ್ಚ ಹಸಿರಾದ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುತ್ತಾ ಆನೆಯೊಂದು ತನ್ನ ಮಾವುತನ ಜೊತೆಗೆ ಸಾಗುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಈ ವಿಡಿಯೊಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಆನೆ ಮತ್ತು ಅದರ ಮಾವುತನ ನಡುವಿನ “ಮಾಂತ್ರಿಕ ಕ್ಷಣಗಳನ್ನು” ಸೆರೆಹಿಡಿದಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಮಿಳುನಾಡಿನ ಅಣ್ಣಾಮಲೈ ಹುಲಿ ಮೀಸಲು ಪ್ರದೇಶವಾದ ಕೋಝಿಕಮುತಿ ಆನೆ ಶಿಬಿರದಲ್ಲಿ ಆನೆ ತನ್ನ ಮಾವುತನ ಜೊತೆ ನಡೆಯುತ್ತಾ ಆ ಸುಂದರ ಕ್ಷಣವನ್ನು ಆನಂದಿಸುವುದನ್ನು ವನ್ಯಜೀವಿ ಛಾಯಾಗ್ರಾಹಕ ಧನು ಪರನ್ ಅವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. 27 ಸೆಕೆಂಡುಗಳ ಈ ವಿಡಿಯೊ ಅನೇಕ ಜನರ ಮನಗೆದ್ದಿದೆ.

ಈ ವಿಡಿಯೊದಲ್ಲಿ ಮಳೆಗಾಲದ ಮಧ್ಯಾಹ್ನದ ವೇಳೆ ಮಾವುತನು ತನ್ನ ಒಂದು ಕೈಯಲ್ಲಿ ಛತ್ರಿಯನ್ನು ಹಿಡಿದು ಇನ್ನೊಂದು ಕೈಯಿಂದ ಆನೆಯ ಕಿವಿ, ದೇಹವನ್ನು ಮೃದುವಾಗಿ ಸವರುತ್ತಾ ನಡೆದು ಬರುತ್ತಿದ್ದಾನೆ. ಈ ವಿಡಿಯೊದಲ್ಲಿ ಆನೆ ಮತ್ತು ಮಾವುತನ ನಡುವಿನ ಬಾಂಧ್ಯವ್ಯ ಸ್ಪಷ್ಟವಾಗಿ ಕಾಣಿಸುತ್ತದೆ. ಮತ್ತು ಅವರ ನಡುವಿನ ಪ್ರೀತಿ ಮತ್ತು ಪರಸ್ಪರ ಗೌರವ ಎದ್ದು ಕಾಣುತ್ತದೆ.

“ತಮಿಳುನಾಡಿನ ಅಣ್ಣಾಮಲೈ ಹುಲಿ ಮೀಸಲು ಪ್ರದೇಶದ ಕೋಝಿಕಮುತಿ ಆನೆ ಶಿಬಿರದಲ್ಲಿ ಮಾನ್ಸೂನ್ ಮಳೆಯಲ್ಲಿ ಮಾವುತ ಮತ್ತು ಅವನ ಆನೆಯ ನಡುವಿನ ಮಾಂತ್ರಿಕ ಕ್ಷಣಗಳು” ಎಂದು ಸಾಹು ತನ್ನ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಹಲವರು ಕಾಮೆಂಟ್‍ಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಶಾಂತವಾದ ಈ ದೈವಿಕ ಕ್ಷಣವನ್ನು ಹಂಚಿಕೊಂಡಿದ್ದಕ್ಕಾಗಿ ಅನೇಕರು ಸುಪ್ರಿಯಾ ಸಾಹು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

ಬಳಕೆದಾರರು, “ಮಾವುತ ಮತ್ತು ಆನೆಯ ನಡುವಿನ ಬಂಧವು ನಂಬಲಾಗದ ಸಂಗತಿಯಾಗಿದೆ. ಇದನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.” ಎಂದು ತಿಳಿಸಿದ್ದಾರೆ. “ಇದು ತುಂಬಾ ಸುಂದರವಾಗಿದೆ.” ಎಂದು ಇನ್ನೊಬ್ಬರು ಬರೆದಿದ್ದಾರೆ. ಮತ್ತೊಬ್ಬರು “ಈ ವಿಡಿಯೊ ನೋಡಿ ನನ್ನ ಈ ದಿನ ಬಹಳ ಸುಂದರವೆನಿಸಿತು” ಎಂದು ಹೇಳಿದ್ದಾರೆ.

Exit mobile version