ಮಕ್ಕಳನ್ನು ಸೈಕಲ್ ಹತ್ತಿಸಿ ರಸ್ತೆಗೆ ಬಿಡುವ ಪೋಷಕರು ತುಂಬಾ ಎಚ್ಚರಿಕೆಯಿಂದ ಮಕ್ಕಳನ್ನು ನೋಡಿಕೊಳ್ಳಬೇಕು. ಇಲ್ಲವಾದರೆ ಇದರಿಂದ ಅನಾಹುತಗಳೇ ಸಂಭವಿಸುತ್ತದೆ. ಪೋಷಕರ ನಿರ್ಲಕ್ಷತನ ಮತ್ತು ಕಾರು ಚಾಲಕನ ಬೇಜವಾಬ್ದಾರಿತನದ ಚಾಲನೆಯಿಂದಾಗಿ, ಬಾಳಿ ಬದುಕಬೇಕಾಗಿದ್ದ ಪುಟ್ಟ ಕಂದಮ್ಮಗಳು ಜೀವ ಕಳೆದುಕೊಳ್ಳಬೇಕಾಗುವ ಪರಿಸ್ಥಿತಿ ಎದುರಾಗಿದೆ. ಇದೀಗ ಅಂತಹದೊಂದು ಘಟನೆ ಗುಜರಾತ್‍ನಲ್ಲಿ ನಡೆದಿದೆ. ಗುಜರಾತ್‍ನ ಮೆಹ್ಸಾನಾ ಜಿಲ್ಲೆಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಘೋರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಮೆಹ್ಸಾನಾದ ಸ್ಪರ್ಶ್ ವಿಲ್ಲಾ ಸೊಸೈಟಿಯಲ್ಲಿ ಈ ದುರಂತ ಘಟನೆ ನಡೆದಿದೆ. ಮೃತ ಬಾಲಕಿಯನ್ನು ದಿಶಾ ಪಟೇಲ್ ಎಂದು ಗುರುತಿಸಲಾಗಿದೆ. ಈ ಘಟನೆಯು ನಗರದ ಜನರಲ್ಲಿ ಆಘಾತವನ್ನು ಉಂಟುಮಾಡಿದೆ. ಈ ಹೃದಯ ವಿದ್ರಾವಕ ಅಪಘಾತವು ಸೊಸೈಟಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
#WATCH | गुजरात के मेहसाणा स्थित स्पर्श विला सोसाइटी में एक चार साल की बच्ची साइकिल चला रही थी। अचानक कार को करीब आता देख बच्ची साइकिल से गिर गई। बच्ची के गिरने के बाद कार उसे कुचलते हुए आगे बढ़ गई। इस हादसे में बच्ची की मौत हो गई।#Gujarat #Mehsana pic.twitter.com/xVVGBr1kG7
— Hindustan (@Live_Hindustan) August 19, 2024
ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ಅಪ್ರಾಪ್ತ ಬಾಲಕಿ ಹೌಸಿಂಗ್ ಸೊಸೈಟಿಯೊಳಗೆ ಸೈಕಲ್‍ನಲ್ಲಿ ಆಟವಾಡುತ್ತಿದ್ದಾಳೆ. ಇನ್ನೊಂದು ಬದಿಯಿಂದ ಬರುತ್ತಿದ್ದ ಕಾರನ್ನು ನೋಡಿದ ನಂತರ ಹುಡುಗಿ ಇದ್ದಕ್ಕಿದ್ದಂತೆ ಸೈಕಲ್ ಅನ್ನು ಟರ್ನ್ ಮಾಡಲು ಹೋಗಿ ಸಮತೋಲನವನ್ನು ಕಳೆದುಕೊಂಡು ಅಲ್ಲೇ ಕೆಳಗೆ ಬೀಳುತ್ತಾಳೆ. ಆದರೆ ಇದನ್ನು ಗಮನಿಸದ ಕಾರು ಚಾಲಕ ಹುಡುಗಿ ಎದ್ದೇಳುವ ಮೊದಲು, ಕಾರನ್ನು ಅವಳ ಮೇಲೆ ಹರಿಸಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ನಂತರ ಚಾಲಕ ತನ್ನ ವಾಹನವನ್ನು ನಿಲ್ಲಿಸಿ ಅವಳನ್ನು ಪರೀಕ್ಷಿಸಲು ವಾಹನದಿಂದ ಇಳಿದಿದ್ದಾನೆ. ಹಾಗೇ ಅಲ್ಲೇ ಇದ್ದ ಇಬ್ಬರು ಮಹಿಳೆಯರು ಹುಡುಗಿಗೆ ಸಹಾಯ ಮಾಡಲು ಅವಳ ಬಳಿಗೆ ಬಂದಿದ್ದಾರೆ, ಆದರೆ ಏನು ಪ್ರಯೋಜನ? ಆಕೆ ಆಗಲೇ ಮೃತಪಟ್ಟಿದ್ದಳು.
ಇದನ್ನೂ ಓದಿ:ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ ಮಗಳು! ಮನಕಲಕುವ ವಿಡಿಯೊ
ವರದಿಯ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಘಟನೆಯ ನಂತರ, ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರು ಚಾಲಕನನ್ನು ಗುರುತಿಸಲಾಗುತ್ತಿದೆ. ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.