ಮಂಗಳೂರು: ಪ್ರಯಾಣಿಕರು ಬರುವುದು ಸ್ವಲ್ಪ ತಡವಾದಾಗ ಅವರು ಗಡಿಬಿಡಿಯಲ್ಲಿ ಮುಂದಿನ ಅಪಾಯವನ್ನು ಗಮನಕ್ಕೆ ತೆಗೆದುಕೊಳ್ಳದೇ ಚಲಿಸುತ್ತಿದ್ದ ರೈಲನ್ನೇ ಕೆಲವೊಮ್ಮೆ ಹತ್ತಿ ಬಿಡುತ್ತಾರೆ. ಆದರೆ ಇದು ತುಂಬಾ ಅಪಾಯಕಾರಿ. ಇದರಿಂದ ಜೀವ ಕಳೆದುಕೊಳ್ಳುವುದು ಮಾತ್ರವಲ್ಲ ತಮ್ಮ ದೇಹದ ಅಂಗಗಳನ್ನು ಕಳೆದುಕೊಂಡವರು ಹಲವರಿದ್ದಾರೆ. ಇದೀಗ ಅಂತಹದೊಂದು ಘಟನೆ ಮಂಗಳೂರು ಜಂಕ್ಷನ್ ನಿಲ್ದಾಣದ ಪ್ಲಾಟ್‍ಫಾರ್ಮ್ ನಂ.1ರಲ್ಲಿ ನಡೆದಿದ್ದು, ಆದರೆ ಹೆಡ್ ಕಾನ್ಸ್ಟೇಬಲ್ ಅವರ ತಕ್ಷಣದ ಕ್ರಮದಿಂದ ಆತ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವಿಡಿಯೊದಲ್ಲಿ ಪ್ರಯಾಣಿಕನೊಬ್ಬ ತನ್ನ ಬೆನ್ನಿನ ಮೇಲೆ ಟೂರಿಸ್ಟ್ ಬ್ಯಾಗ್ ಹಿಡಿದುಕೊಂಡು ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿದ್ದಾನೆ. ಚಲಿಸುವ ರೈಲನ್ನು ಹತ್ತುವ ಪ್ರಯತ್ನದಲ್ಲಿ, ಆ ವ್ಯಕ್ತಿ ಪ್ಲಾಟ್‍ಫಾರ್ಮ್ ಮತ್ತು ರೈಲಿನ ನಡುವೆ ಬಿದ್ದಿದ್ದಾನೆ. ಇನ್ನೇನು ಆತ ರೈಲಿನ ಚಕ್ರಕ್ಕೆ ಸಿಲುಕುವ ವೇಳೆ ಇದನ್ನು ನೋಡುತ್ತಿದ್ದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಅಧಿಕಾರಿಯೊಬ್ಬರು ಅವರ ಕಡೆಗೆ ಓಡಿ ಅವರನ್ನು ಹೊರಗೆಳೆದರು. ಹೆಡ್ ಕಾನ್ಸ್ಟೇಬಲ್‍ನ ತಕ್ಷಣದ ಆಲೋಚನೆಯು ಆ ವ್ಯಕ್ತಿಯ ಜೀವವನ್ನು ಉಳಿಸಿತು. ಈ ಘಟನೆ ಪ್ಲಾಟ್‍ಫಾರ್ಮ್‍ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ವರದಿ ಪ್ರಕಾರ ಈ ಘಟನೆ 11:35 ಕ್ಕೆ ಸಂಭವಿಸಿದ್ದು, ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದ ವ್ಯಕ್ತಿ ಹೆಸರು ಸಸಾಂಗ್ ಎಂಬುದಾಗಿ ತಿಳಿದುಬಂದಿದೆ. ಆ ವೇಳೆ ಈತ ತನ್ನ ಸಮತೋಲನವನ್ನು ಕಳೆದುಕೊಂಡು ರೈಲು ಮತ್ತು ಪ್ಲಾಟ್‍ಫಾರ್ಮ್ ನಡುವೆ ಬಿದ್ದಿದ್ದಾನೆ. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಎಂ ರಾಘವನ್ ತಕ್ಷಣ ಅವರನ್ನು ಮೇಲಕ್ಕೆ ಎತ್ತಿದ್ದಾರೆ.
ಇದನ್ನೂ ಓದಿ:ಮಗನನ್ನು ಕೊಲ್ಲಲು ಕತ್ತಿ ಬೀಸಿದ ದುಷ್ಕರ್ಮಿಗಳನ್ನು ಕಲ್ಲೆಸೆದು ಓಡಿಸಿದ ತಾಯಿ! ವಿಡಿಯೊ ನೋಡಿ
ಮಂಗಳೂರು ಜಂಕ್ಷನ್‍ನಲ್ಲಿ ಬೀಡುಬಿಟ್ಟಿರುವ ರೈಲ್ವೆ ಸಂರಕ್ಷಣಾ ಪಡೆಯ ಸದಸ್ಯ ಎಂ. ರಾಘವನ್ ಅವರ ಈ ಜೀವ ಉಳಿಸುವ ಕಾರ್ಯವು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ರೈಲ್ವೆ ಸಿಬ್ಬಂದಿ ವಹಿಸುವ ನಿರ್ಣಾಯಕ ಪಾತ್ರವನ್ನು ನೆನಪಿಸುತ್ತದೆ. ಹಾಗೇ ಹೆಡ್ ಕಾನ್ಸ್ಟೇಬಲ್ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.