Site icon Vistara News

Viral Video: ವೇಗವಾಗಿ ಬಂದು ಅಪ್ಪಳಿಸಿದ ಸ್ಕಾರ್ಪಿಯೋ; ಒಂದೇ ಕುಟುಂಬದ ಮೂವರು ಪಾರಾಗಿದ್ದೇ ಅಚ್ಚರಿ!

Viral Video


ಅತಿ ವೇಗ ಅಪಘಾತಕ್ಕೆ ಕಾರಣ ಎಂದು ತಿಳಿದರೂ ಕೂಡ ಜನರು ವೇಗವಾಗಿ ವಾಹನಗಳನ್ನು ಚಲಾಯಿಸುವುದನ್ನು ಬಿಡುತ್ತಿಲ್ಲ. ಇದರಿಂದ ಅನೇಕ ಸಾವು-ನೋವುಗಳಾಗಿವೆ. ಇದೀಗ ಆಂಧ್ರಪ್ರದೇಶದ ನರಸಪುರಂನಲ್ಲಿ ಬುಧವಾರ ಸ್ಕಾರ್ಪಿಯೋ ವಾಹನವೊಂದು ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯಲ್ಲಿ ನಿಂತಿದ್ದ ಹಲವಾರು ಜನರ ಮೇಲೆ ಹರಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಈ ಘೋರ ದೃಶ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಕಾರು ಜನರಿಗೆ ಡಿಕ್ಕಿ ಹೊಡೆದ ಘೋರ ದೃಶ್ಯ ಸೆರೆಯಾಗಿದೆ. ಈ ವಿಡಿಯೊದಲ್ಲಿ ತೋರಿಸುವಂತೆ, ತಾಯಿಯೊಬ್ಬಳು ತನ್ನ ಮಗುವಿನೊಂದಿಗೆ ಬೈಕಿನಲ್ಲಿ ಕುಳಿತುಕೊಳ್ಳಲು ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಆದರೆ ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಒಬ್ಬ ವ್ಯಕ್ತಿ ಕಾರಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಬಿದ್ದಿದ್ದಾನೆ. ವರದಿಗಳ ಪ್ರಕಾರ, ಸೀತಾರಾಮಪುರಂನಿಂದ ನರಸಪುರಂಗೆ ಬರುತ್ತಿದ್ದ ಕಾರು ಆಂಜನೇಯಸ್ವಾಮಿ ದೇವಾಲಯದ ಬಳಿ ನಿಯಂತ್ರಣ ಕಳೆದುಕೊಂಡಾಗ ಈ ಘಟನೆ ಸಂಭವಿಸಿದೆ ಎಂಬುದಾಗಿ ತಿಳಿದುಬಂದಿದೆ.

ಮಂಗಳಗುಂಟಪಲೇನಿಯ ಗೋರಿಂಕಲಾ ವಾಲಿವಾರ್ ಎಂಬುವವರು ತನ್ನ ಚಿಕ್ಕಮ್ಮ ಮೇಕಲಾ ಮೇರಿಬಾಯಿ (58) ಅವರನ್ನು ಸ್ಕೂಟರ್‌ನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ಕಾರು ಡಿಕ್ಕಿ ಹೊಡೆದಿದೆ. ಮೇರಿಬಾಯಿ ಸ್ಥಳದಲ್ಲೇ ಮೃತಪಟ್ಟರೆ, ವಾಲಿವರ್ ಗಂಭೀರವಾಗಿ ಗಾಯಗೊಂಡರು. ಇದಲ್ಲದೆ, ನಂತರ ಅದೇ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಪೆದ್ದಿರೆಡ್ಡಿ ಅರುಣಾ, ಅವರ ಪತಿ ಏಸು ಮತ್ತು ಅವರ 13 ವರ್ಷದ ಮಗ ಸಾಯಿಮಣಿಕಂಠಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕೂಡ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ವಾಲಿವರ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೆ, ಗಾಯಗೊಂಡ ಇತರ ಮೂವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.

ಇದನ್ನೂ ಓದಿ: ರೀಲ್ಸ್‌ಗಾಗಿ ಬೆಡ್‌ರೂಮ್‌ನಲ್ಲಿ ಅರೆನಗ್ನ ಗೆಳತಿ ಕೈಗೆ ಪಿಸ್ತೂಲ್ ಕೊಟ್ಟ ಪೊಲೀಸ್ ಅಧಿಕಾರಿ!

ಈ ಅಪಘಾತದಲ್ಲಿ ಆರು ದ್ವಿಚಕ್ರ ವಾಹನಗಳು ಸಹ ಹಾನಿಯಾಗಿವೆ ಎಂಬುದಾಗಿ ತಿಳಿದುಬಂದಿದೆ. ವಾಲಿವಾರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ನರಸಪುರಂ ಪಟ್ಟಣ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಯಲಕ್ಷ್ಮಿ ಖಚಿತಪಡಿಸಿದ್ದಾರೆ. ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ.

Exit mobile version