Site icon Vistara News

Viral Video: ಕುದಿಯುತ್ತಿರುವ ಹಾಲಿನ ಮಡಿಕೆಯೊಳಗೆ ಮಗುವನ್ನು ಮುಳುಗಿಸಿದ ಅರ್ಚಕ! ಗಾಬರಿಗೊಳಿಸುವ ವಿಡಿಯೊ

Viral Video


ಕೆಲವೊಂದು ಕಡೆ ದೇವಸ್ಥಾನದ ಜಾತ್ರೆಗಳ ಸಮಯದಲ್ಲಿ ಜನರು ನಾನಾ ರೀತಿಯ ಆಚರಣೆಗಳನ್ನು ನಡೆಸುತ್ತಾರೆ. ಕೆಂಡದ ಮೇಲೆ ನಡೆಯುವುದು, ಕುದಿಯುವ ಎಣ್ಣೆಯಲ್ಲಿ ಕೈ ಹಾಕುವುದು, ದೇಹಕ್ಕೆ ಭಾಗಕ್ಕೆ ಸೂಜಿಗಳಿಂದ ಚುಚ್ಚುವುದು ಹೀಗೆ ಹಲವಾರು ಜೀವಕ್ಕೆ ಅಪಾಯಕಾರಿಯಾದಂತಹ ಆಚರಣೆಗಳನ್ನು ದೇವರ ಹೆಸರಿನಲ್ಲಿ ಆಚರಿಸುತ್ತಾರೆ. ಇದರಿಂದ ದೇವರು ಪ್ರಸನ್ನರಾಗುತ್ತಾರೆ ಎಂಬುದು ಅವರ ನಂಬಿಕೆ. ಆದರೆ ಆತಂಕಕಾರಿ ಮತ್ತು ಅಪಾಯಕಾರಿ ಆಚರಣೆಗಳು ಕೆಲವೊಮ್ಮೆ ಜೀವವನ್ನೇ ತೆಗೆಯಬಹುದು. ಇತ್ತೀಚೆಗೆ ಜಾತ್ರೆಯೊಂದರಲ್ಲಿ ಕುದಿಯುವ ಹಾಲಿನಲ್ಲಿ ಮಗುವನ್ನು ಮುಳುಗಿಸುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದ್ದು, ಜನರ ಈ ಆಚರಣೆ ಮಕ್ಕಳ ಸುರಕ್ಷತೆ ಮತ್ತು ಮೂಢನಂಬಿಕೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ಈ ವಿಡಿಯೊದಲ್ಲಿ ಕುದಿಯುತ್ತಿರುವ ಹಾಲಿನ ಮಡಿಕೆಯೊಳಗೆ ಚಿಕ್ಕ ಮಗುವನ್ನು ಮುಳುಗಿಸಿದ ಅರ್ಚಕ ನಂತರ ಮಗುವನ್ನು ಎತ್ತಿಕೊಂಡು ಅದೇ ಬಿಸಿ ಹಾಲನ್ನು ತನ್ನ ಹಾಗೂ ಮಗುವಿನ ಮೈಮೇಲೆ ಸುರಿದಿದ್ದಾನೆ. ಈ ವೇಳೆ ಆ ಮಗು ಜೋರಾಗಿ ಅಳುತ್ತಿರುವುದು ಕಾಣಿಸುತ್ತದೆ. ಈ ವಿಡಿಯೊ ನೋಡಿದ ಜನರು ಗಾಬರಿಗೊಂಡಿದ್ದು, ಈ ಆಚರಣೆ ಭಾಗವಹಿಸುವ ಮಕ್ಕಳಿಗೆ ತೀವ್ರ ಅಪಾಯವನ್ನುಂಟು ಮಾಡುತ್ತದೆ ಎಂದು ಭಯಪಟ್ಟಿದ್ದಾರೆ.

ವಿಡಿಯೊದ ಈ ಆತಂಕಕಾರಿ ವಿಚಾರ ವ್ಯಾಪಕ ಖಂಡನೆಗೆ ಕಾರಣವಾಗಿದೆ, ಅಂತಹ ಅಭ್ಯಾಸಗಳು ಮಕ್ಕಳಿಗೆ ದೈಹಿಕ ಮತ್ತು ಮಾನಸಿಕವಾಗಿ ಹಾನಿಯನ್ನು ಉಂಟುಮಾಡುತ್ತದೆ ಎಂದು ಅನೇಕರು ಒತ್ತಿಹೇಳಿದ್ದಾರೆ. ಈ ವಿಡಿಯೊ ವೈರಲ್ ಆದ ಹಿನ್ನಲೆಯಲ್ಲಿ ಇದನ್ನು ನೋಡಿದ ವಕೀಲರೊಬ್ಬರು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‍ಸಿಪಿಸಿಆರ್) ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.

ಮಕ್ಕಳಿಗೆ ಕ್ರೂರ ಮತ್ತು ಅಪಾಯಕಾರಿ ಎಂದು ಪರಿಗಣಿಸಲಾದ ಇಂತಹ ಆಚರಣೆಗಳನ್ನು ನಿಲ್ಲಿಸುವ ಅಗತ್ಯವಿದೆ ಎಂದು ವಕೀಲರು ಎನ್‍ಸಿಪಿಸಿಆರ್ ರಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸಿ ಅಪರಾಧಿಗಳನ್ನು ಗುರುತಿಸಿ ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಅಪಾಯಗಳಿಂದ ಮಕ್ಕಳನ್ನು ರಕ್ಷಿಸಲು ಕ್ರಮಗಳನ್ನು ಜಾರಿಗೆ ತರುವಂತೆ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಈ ವಿಡಿಯೊಗೆ ಹಲವರು ಕಾಮೆಂಟ್ ಮಾಡಿದ್ದಾರೆ. “ಇಂತಹ ಮೂಢನಂಬಿಕೆ ಮತ್ತು ಬೂಟಾಟಿಕೆ ನಿಮ್ಮ ಮಗುವಿಗೆ ಮಾರಕವಾಗಬಹುದು” ಎಂದು ಒಬ್ಬರು ತಿಳಿಸಿದ್ದಾರೆ. ಹಳೆಯ ನಂಬಿಕೆಗಳು ಮತ್ತು ಆಚರಣೆಗಳಂತಹ ಹಾನಿಕಾರಕ ಅಭ್ಯಾಸಗಳಿಂದ ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಅಲ್ಲದೇ ವಿಡಿಯೊದಲ್ಲಿ ಕಂಡುಬಂದ ಇಂತಹ ಅಪಾಯಕಾರಿ ಅಭ್ಯಾಸಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಯಾವ ಹಬ್ಬ, ಯಾವ ದಿನ? ಈ ತಿಂಗಳ ಮಹತ್ವ ಏನು?

ಮಾಹಿತಿ ಪ್ರಕಾರ, 1999ರಿಂದ ಭಾರತದ ಕನಿಷ್ಠ ಎಂಟು ರಾಜ್ಯಗಳಲ್ಲಿ ಮಾಟಮಂತ್ರ ಅಥವಾ ವಾಮಾಚಾರ ಮತ್ತು ಇನ್ನಿತರ ಕ್ರೂರ ಅಪರಾಧಗಳ ರೂಪ ಪಡೆಯುವ ಇತರ ಮೂಢನಂಬಿಕೆ ಕೃತ್ಯಗಳ ಅಪರಾಧಗಳನ್ನು ಎದುರಿಸಲು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಅಲ್ಲದೇ ಇಂತಹ ಪ್ರಕರಣಗಳನ್ನು ತಡೆಯಲು 1999 ರಲ್ಲಿ ಕಾನೂನನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಬಿಹಾರ. ಜಾರ್ಖಂಡ್‍ನಲ್ಲಿಯೂ ಇದೇ ರೀತಿಯ ಕಾನೂನು ಅಸ್ತಿತ್ವದಲ್ಲಿದೆ, ಹಾಗೇ ಒಡಿಶಾ, ರಾಜಸ್ಥಾನ ಮತ್ತು ಛತ್ತೀಸ್‌ಘಡವು 2015 ರಲ್ಲಿ ಈ ಕಾನೂನನ್ನು ಜಾರಿಗೆ ತಂದರಲಾಗಿದೆ ಎನ್ನಲಾಗಿದೆ.

Exit mobile version