Site icon Vistara News

Viral Video: ಫುಟ್ಬಾಲ್ ಪಂದ್ಯದಲ್ಲಿ ಸೋತಿದ್ದಕ್ಕೆ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ದೈಹಿಕ ಶಿಕ್ಷಕ; ವಿಡಿಯೊ ನೋಡಿ ಜನಾಕ್ರೋಶ

Viral Video


ಆಟದಲ್ಲಿ ಸೋಲು ಗೆಲುವುಗಳು ಇದ್ದೇ ಇರುತ್ತವೆ. ಸೋತಾಗ ಅಂಜಬಾರದು, ಗೆದ್ದಾಗ ಹಿಗ್ಗಬಾರದು ಎಂಬ ನೀತಿ ಮಾತಿದೆ. ವಿದ್ಯಾರ್ಥಿಗಳು ಆಟದಲ್ಲಿ ಗೆದ್ದಾಗ ಅವರನ್ನು ಪ್ರಶಂಸಿಸುವ ಶಿಕ್ಷಕರು ಅವರು ಸೋತಾಗ ಅವರಿಗೆ ಧೈರ್ಯ ಹೇಳಬೇಕು. ಅದನ್ನು ಬಿಟ್ಟು ಮಕ್ಕಳಿಗೆ ನೀತಿ ಪಾಠ ಹೇಳಿಕೊಡುವ ಶಿಕ್ಷಕರೇ ಅವರು ಸೋತಾಗ ಅವರನ್ನು ಹೀಯಾಳಿಸಿದರೆ, ಶಿಕ್ಷಿಸಿದರೆ ಅವರು ಶಿಕ್ಷಕರ ಸ್ಥಾನಕ್ಕೆ ಅರ್ಹರಲ್ಲ ಎಂದೇ ಹೇಳಬಹುದು. ಇದೀಗ ಅಂತಹದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಪಿಟಿ ಮಾಸ್ಟರೊಬ್ಬರು ವಿದ್ಯಾರ್ಥಿಗಳು ಫುಟ್ಬಾಲ್ ಆಟ ಆಡುವಾಗ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಅಸಮಾಧಾನಗೊಂಡು ಅವರನ್ನು ಥಳಿಸುತ್ತಿರುವ ಆಘಾತಕಾರಿ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಸಖತ್ ವೈರಲ್ (Viral Video)ಆಗಿದೆ.

ಸೇಲಂ ಜಿಲ್ಲೆಯ ಮೆಟ್ಟೂರು ಬಳಿಯ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ. ಎನ್ಎಚ್ಎಸ್ಎಸ್‍ನ ಫುಟ್ಬಾಲ್ ತಂಡವು ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಆದರೆ ನಿರೀಕ್ಷೆಗಳಂತೆ ಅವರು ಗೆಲುವು ಸಾಧಿಸಲಿಲ್ಲ. ಆಗ ಅಣ್ಣಾಮಲೈ ಎಂದು ಗುರುತಿಸಲ್ಪಟ್ಟ ಪಿಟಿ ಮಾಸ್ಟರ್ ವಿದ್ಯಾರ್ಥಿಗಳು ಆಟದಲ್ಲಿ ಸೋತರೆಂದು ಅವರನ್ನು ಕ್ರೂರವಾಗಿ ಥಳಿಸಿದ್ದಾರೆ. ಆಟಗಾರರ ಕೆನ್ನೆಗೆ ಹೊಡೆಯುವುದು, ಒದೆಯುವುದು ಮತ್ತು ಕೂದಲನ್ನು ಎಳೆಯುವುದನ್ನು ಮಾಡಿ ಅಮಾನುಷವಾಗಿ ವರ್ತಿಸಿದ್ದಾರೆ. ಅಣ್ಣಾಮಲೈ ಹುಡುಗರನ್ನು ಹೊಡೆಯುವ ಮೂಲಕ ಅನಾಗರಿಕ ವರ್ತನೆ ತೋರಿದ್ದಾರೆ ಎಂದು ಆಟಗಾರರೊಬ್ಬರ ಪೋಷಕರು ವಿಡಿಯೊ ಸಮೇತ ವರದಿ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ, ಅಣ್ಣಾಮಲೈ ಅವರು ತಂಡದ ಗೋಲ್ ಕೀಪರ್ ಆಗಿರುವ ವಿದ್ಯಾರ್ಥಿಯೊಬ್ಬನಿಗೆ, “ನೀನು ಗಂಡಸಾ ಅಥವಾ ಹೆಂಗಸಾ? ನೀನು ಎದುರಾಳಿಗೆ ಸ್ಕೋರ್ ಗಳಿಸಲು ಹೇಗೆ ಅವಕಾಶ ಕೊಟ್ಟೆ?, ಚೆಂಡು ನಿನ್ನನ್ನು ದಾಟಿ ಮುಂದೆ ಹೋಗಲು ಹೇಗೆ ಬಿಟ್ಟೆ?” ಎಂದು ಥಳಿಸಿದ್ದಾರೆ. ಹಾಗೇ ಮತ್ತೊಬ್ಬ ವಿದ್ಯಾರ್ಥಿಯನ್ನು ಪ್ರಶ್ನಿಸಿದ ಅವರು, “ನಿನಗೆ ಅವರ ಮೇಲೆ ಫ್ರೆಷರ್‌ ಹಾಕಿ ಆಡಲು ಸಾಧ್ಯವಿಲ್ಲವೇ? ಅಲ್ಲಿ ಯಾಕೆ ಕಮ್ಯೂನಿಕೇಷನ್ ಮಾಡಲಿಲ್ಲ?” ಎಂದು ಥಳಿಸಿದ್ದಾರೆ. ದೈಹಿಕ ಶಿಕ್ಷಕರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿಕ್ಷಕಿ, ಸಹಪಾಠಿಗಳ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಬಾಲಕ

ವಿಡಿಯೊ ವೈರಲ್ ಆದ ನಂತರ, ಈ ಬಗ್ಗೆ ಸಂಗಗಿರಿ ಜಿಲ್ಲಾ ಶಿಕ್ಷಣ ಅಧಿಕಾರಿ ತನಿಖೆ ನಡೆಸಿದ್ದಾರೆ. ನಂತರ ಡಿಇಒ ತಮ್ಮ ತನಿಖೆಯ ವಿವರಗಳನ್ನು ಇಲಾಖೆ ಮತ್ತು ಜಿಲ್ಲಾಧಿಕಾರಿ ಇಬ್ಬರಿಗೂ ಸಲ್ಲಿಸಿದ್ದಾರೆ. ಆ ಬಳಿಕ ಅಣ್ಣಾಮಲೈ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

Exit mobile version