Site icon Vistara News

Viral Video: ಹೂ ಮಾರಿ ಜೀವನ ಮಾಡುವ ತಾಯಿ ಬಳಿ ಐಫೋನ್‌ಗಾಗಿ ಮಗ ಮಾಡಿದ ಬ್ಲ್ಯಾಕ್‌ಮೇಲ್‌ ಏನು ನೋಡಿ!

Viral Video


ಮುಂಬೈ: ಇಂದಿನ ಯುವಕರು ಸ್ಮಾರ್ಟ್‍ಫೋನ್‍ಗಳ ಬಗ್ಗೆ ವಿಪರೀತ ಗೀಳನ್ನು ಹೊಂದಿದ್ದಾರೆ. ತಮಗಿಷ್ಟವಾದ ಫೋನ್ ಪಡೆಯಲು ಏನು ಬೇಕಾದರೂ ಮಾಡುತ್ತಾರೆ. ಇದರಿಂದ ಪೋಷಕರು ತಮ್ಮ ಮಕ್ಕಳ ಆಸೆಗಳನ್ನು ಪೂರೈಸಲು ಒದ್ದಾಡುತ್ತಾರೆ. ತಮ್ಮ ಆಸೆಗಳನ್ನು ಬದಿಗೊತ್ತಿ ಮಕ್ಕಳ ಆಸೆ ಪೂರೈಸಲು ಹೆಣಗಾಡುತ್ತಾರೆ. ಅದರಲ್ಲೂ ಇತ್ತೀಚೆಗೆ ಮಾರುಕಟ್ಟೆಗೆ ಬಂದಂತಹ ದುಬಾರಿ ಬೆಲೆಯ ಐಫೋನ್ ಯುವ ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಇದು ಬಡವರು ಮತ್ತು ಮಧ್ಯಮವರ್ಗದವರಿಗೆ ಖರೀದಿಸಲು ಸಾಧ್ಯವಾಗದಷ್ಟು ದುಬಾರಿಯಾಗಿದೆ. ಆದರೆ ಇಲ್ಲೊಬ್ಬ ಹುಡುಗ ಇಂತಹ ದುಬಾರಿ ಫೋನ್ ಅನ್ನು ತನಗೆ ಕೊಡಿಸುವಂತೆ ದೇವಾಲಯದಲ್ಲಿ ಹೂ ಮಾರಿ ಜೀವನ ಸಾಗಿಸುತ್ತಿದ್ದ ತಾಯಿಯ ಬಳಿ ಹಠ ಹಿಡಿದಿದ್ದಾನೆ. ಕೊನೆಗೂ ಆ ತಾಯಿ ಐಫೋನ್ ಮಗನಿಗೆ ಕೊಡಿಸಲು ಮುಂದಾಗಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗುತ್ತಿದೆ.

ಚಿಕ್ಕ ಹುಡುಗನೊಬ್ಬ ತನಗೆ ಐಪೋನ್ ಬೇಕೆಂದು ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ತನ್ನ ತಾಯಿಯನ್ನು ನಾಚಿಕೆಯಿಲ್ಲದೆ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ತಾಯಿ ಅಂತಿಮವಾಗಿ ಅವನ ಬೇಡಿಕೆಗಳಿಗೆ ಮಣಿದು ಐಫೋನ್ ಖರೀದಿಸಿಕೊಡಲು ಮುಂದಾಗಿದ್ದಾಳೆ. ಇದೀಗ ತಾಯಿ ಮಗನಿಗೆ ಹಣ ನೀಡಿ ಅವನೊಂದಿಗೆ ಮೊಬೈಲ್ ಅಂಗಡಿಗೆ ಕರೆದೊಯ್ಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ.

ಘಟನೆ ನಡೆದ ನಿಖರವಾದ ಸ್ಥಳ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಐಫೋನ್‍ಗಾಗಿ ಹುಡುಗ ತಿನ್ನುವುದನ್ನು ನಿಲ್ಲಿಸಿದ್ದನು ಮತ್ತು ತನ್ನ ತಾಯಿಯ ಬಳಿ ಐಫೋನ್‍ಗಾಗಿ ಪದೇ ಪದೇ ಒತ್ತಾಯಿಸುತ್ತಿದ್ದನು. ಮೂರು ದಿನಗಳ ಉಪವಾಸ ಸತ್ಯಾಗ್ರಹದ ನಂತರ, ತಾಯಿ ಅಂತಿಮವಾಗಿ ಈ ದುಬಾರಿ ಫೋನ್ ಖರೀದಿಸಲು ಹಣವನ್ನು ನೀಡಿದಳು. ತಾಯಿ ಅವನಿಗೆ ಹಣವನ್ನು ನೀಡಿದರೂ ಕೂಡ ಅವಳು ನಿಜವಾಗಿಯೂ ಸಂತೋಷವಾಗಿಲ್ಲ ಎಂಬುದು ವಿಡಿಯೊದಲ್ಲಿ ಕಾಣಿಸುತ್ತದೆ. ಆದರೂ ಅವಳು ತನ್ನ ಮಗನಿಗಾಗಿ ಸಂತೋಷವಾಗಿದ್ದಾಳೆ ಎಂದು ತೋರಿಸಿಕೊಳ್ಳುತ್ತಿದ್ದಾಳೆ . ಆದರೆ ತನ್ನ ತಾಯಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಫೋನ್‍ಗಾಗಿ ವ್ಯರ್ಥ ಮಾಡಿದ್ದಕ್ಕಾಗಿ ಇಂಟರ್ನೆಟ್ ಬಳಕೆದಾರರು ಹುಡುಗನನ್ನು ಟೀಕಿಸಿದ್ದಾರೆ. ಮತ್ತು ತಾಯಿಯನ್ನು ನೋಡಿ ಮರುಗಿದ್ದಾರೆ.

ಈ ಘಟನೆಯನ್ನು ಅಂಗಡಿಯವರು ತಮ್ಮ ಅಂಗಡಿಯ ಬಗ್ಗೆ ಜನರ ಗಮನಸೆಳೆಯಲು ಅದನ್ನು ವಿಡಿಯೊ ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾರೆ. ಆದರೆ ಇಂಟರ್ನೆಟ್ ಬಳಕೆದಾರರು ಹುಡುಗ ಮತ್ತು ಅಂಗಡಿಯವರಿಬ್ಬರೂ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಬಳಕೆದಾರರು ವಿಡಿಯೊವನ್ನು “ದುಃಖಕರ” ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ಈ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡ ಅಂಗಡಿಯವರು ತುಂಬಾ ಮೂರ್ಖರು” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  12 ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆಯಾದ 62ರ ಮುದುಕ! ಹೃದಯ ಕರಗಿಸುತ್ತದೆ ಈ ವಿಡಿಯೊ

ಆದರೆ ಈ ವಿಡಿಯೊ ನೋಡಿದಾಗ ತಿಳಿಯುವುದೆನೆಂದರೆ ಪೋಷಕರು ಮಕ್ಕಳ ಪ್ರತಿಯೊಂದು ಬೇಡಿಕೆಯನ್ನು ಪೂರೈಸುವ ಬಗ್ಗೆ ಜಾಗರೂಕರಾಗಿರಬೇಕು. ಯಾಕೆಂದರೆ ಇದರಿಂದ ಅವರಿಗೆ ಪೋಷಕರ ಕಷ್ಟ ಅರ್ಥವಾಗುವುದಿಲ್ಲ. ಅಲ್ಲದೇ ತಮ್ಮ ಮಕ್ಕಳನ್ನು ಅತಿಯಾದ ಫೋನ್ ಬಳಕೆಯಿಂದ ದೂರವಿಡಬೇಕು. ಹಾಗಾಗಿ ಪೋಷಕರು ಮಕ್ಕಳಿಗೆ ಕಷ್ಟಪಟ್ಟು ಸಂಪಾದಿಸಿದ ಹಣದ ಮೌಲ್ಯದ ಬಗ್ಗೆ ತಿಳುವಳಿಕೆಯನ್ನು ನೀಡುವುದು ಬಹಳ ಮುಖ್ಯ.

Exit mobile version