Site icon Vistara News

Viral Video: ಸೈಕಲ್‌ ಮೇಲೆ ಶಾಲೆಗೆ ಹೋಗುತ್ತಿದ್ದ ಮಕ್ಕಳಿಬ್ಬರಿಗೆ ವಿದ್ಯುತ್‌ ಶಾಕ್‌; ಕ್ಯಾಮೆರಾದಲ್ಲಿ ಸೆರೆಯಾಯ್ತು ಘೋರ ದೃಶ್ಯ

Viral Video


ಆಂಧ್ರಪ್ರದೇಶದ ಕಡಪದಲ್ಲಿ ಬುಧವಾರ ಬೆಳಗ್ಗೆ ಸೈಕಲ್‌ ಮೇಲೆ ಶಾಲೆಗೆ ತೆರಳುತ್ತಿದ್ದ ಇಬ್ಬರು ಪುಟ್ಟ ವಿದ್ಯಾರ್ಥಿಗಳು ವಿದ್ಯುತ್‌ ತಂತಿ ಸ್ಪರ್ಶಕ್ಕೆ ಒಳಗಾಗಿದ್ದಾರೆ. ಒಬ್ಬ ವಿದ್ಯಾರ್ಥಿ ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಂಟರ್ನ್ಯಾಷನಲ್ ವೆಲ್ಫೇರ್ ಮಂಟಪಂ ಬಳಿಯ ಅಂಗಡಿ ಬೀದಿಯಲ್ಲಿ ಜನರ ಕಣ್ಣ ಮುಂದೆಯೇ ಈ ಘೋರ ದುರಂತ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ. ವಿದ್ಯಾರ್ಥಿಗಳಿಬ್ಬರು ವಿದ್ಯಾಸಾಗರ್ ಶಾಲೆಯಲ್ಲಿ 10 ಮತ್ತು 8ನೇ ತರಗತಿಯಲ್ಲಿ ಓದುತ್ತಿದ್ದು, ಬೆಳಗ್ಗೆ ಒಂದೇ ಸೈಕಲ್‍ನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇದರಲ್ಲಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಇಬ್ಬರು ಹುಡುಗರು ಸೈಕಲ್‍ನಲ್ಲಿ ಬರುತ್ತಿರುವಾಗ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದು, ತಕ್ಷಣವೇ ಸೈಕಲ್‍ನಿಂದ ಕೆಳಗೆ ಬಿದ್ದಿದ್ದಾರೆ. ಕೆಲವು ಕ್ಷಣಗಳ ನಂತರ, ಒಬ್ಬ ವಿದ್ಯಾರ್ಥಿಯ ದೇಹಕ್ಕೆ ಮತ್ತು ಸೈಕಲ್ ಗೆ ಬೆಂಕಿ ಹೊತ್ತಿಕೊಂಡಿತು ಮತ್ತು ಇನ್ನೊಬ್ಬ ಹುಡುಗ ಅವನ ಪಕ್ಕದಲ್ಲಿ ಚಲನೆಯಿಲ್ಲದೆ ಬಿದ್ದಿದ್ದ.
ವರದಿಗಳ ಪ್ರಕಾರ, ವಿದ್ಯಾರ್ಥಿಗಳಲ್ಲಿ ಒಬ್ಬನನ್ನು ತನ್ವೀರ್ ಎಂದು ಗುರುತಿಸಲಾಗಿದ್ದು, ಆತ ತೀವ್ರ ಸುಟ್ಟಗಾಯಗಳಿಂದ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಅವನನ್ನು ಸ್ಥಳೀಯರು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಈ ಭಯಾನಕ ಘಟನೆಯ ವಿಡಿಯೊವನ್ನು ನಬಿಲಾ ಜಮಾಲ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಯೊಂದಿಗೆ ಆ ವಿಡಿಯೊಗೆ ಬೇಸರದಿಂದ , ಕೋಪದಿಂದ, ಅಳುತ್ತಾ ಕಾಮೆಂಟ್ ಮಾಡಿದ್ದಾರೆ, “ನೀವು ಮನೆಯಿಂದ ಹೊರಗೆ ಬರದಿದ್ದರೆ ಇಂತಹ ದುರಂತ ನಡೆಯದೆ ಸುರಕ್ಷಿತವಾಗಿರುತ್ತಿದ್ದೀರಿʼʼ ಎಂದು ವೀಕ್ಷಕರೊಬ್ಬರು ದುಃಖಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಅವರು ಇಂತಹ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಾಮೆಂಟ್‌ನಲ್ಲಿ ಒಬ್ಬರು ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ” ಇದು ತುಂಬಾ ದುಃಖಕರವಾಗಿದೆ. ಇಂಥ ದುರಂತ ಸಂಭವಿಸುವ ಮೊದಲು ಸುತ್ತಮುತ್ತಲಿನ ಜನ ವಿದ್ಯುತ್ ಇಲಾಖೆಗೆ ದೂರು ನೀಡಲು ಸಾಧ್ಯವಾಗಲಿಲ್ಲ ಏಕೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ:ಹೆಣ್ಣಿನ ಮೇಲೆ ಆಸೆಯಾದರೆ ನಮ್ಮ ಬಳಿ ಬನ್ನಿ; ಕಾಮುಕರಿಗೆ ಯುವತಿಯ ಮುಕ್ತ ಆಹ್ವಾನ!

ಈ ಘಟನೆಯು ಸಾರ್ವಜನಿಕ ಸುರಕ್ಷತೆ ಮತ್ತು ಮೂಲಸೌಕರ್ಯ ನಿರ್ವಹಣೆಯ ಬಗ್ಗೆ ಗಂಭೀರ ವಿಷಯವನ್ನು ಬೆಳಕಿಗೆ ತರುತ್ತದೆ. ಅಂತಹ ಜನನಿಬಿಡ ಸ್ಥಳಗಳಲ್ಲಿ ಕರೆಂಟ್ ತಂತಿ ಬಿದ್ದಿರುವುದು ಸ್ಥಳೀಯ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಇಂತಹ ದುರಂತಗಳನ್ನು ತಪ್ಪಿಸಲು ಜಾಗರೂಕತೆ ಮತ್ತು ತ್ವರಿತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಇಂತಹ ಸ್ಥಳಗಳಲ್ಲಿ ನಿಯಮಿತವಾಗಿ ಅಧಿಕಾರಿಗಳು ಕೆಲಸ ನಿರ್ವಹಿಸುವುದು ಮತ್ತು ತಪಾಸಣೆ ಮಾಡುತ್ತಿರುಬೇಕು ಎಂಬುದನ್ನು ತಿಳಿಸುತ್ತದೆ.

Exit mobile version