Site icon Vistara News

Viral Video: ಜಾರಿ ಬಿದ್ದ ವಧುವನ್ನು ಎತ್ತದ ವರ; ಸಹೋದರನಿಂದ ಮದುವೆ ಮಂಟಪದಲ್ಲೇ ಬಿತ್ತು ಗೂಸಾ!

Viral Video


ಶುಭ ಕಾರ್ಯಕ್ಕೆ ನೂರೆಂಟು ವಿಘ್ನಗಳು ಎಂಬಂತೆ ಒಂದು ಮದುವೆ ಮಾಡಿಸುವಾಗ ಒಂದಲ್ಲ ಒಂದು ಸಮಸ್ಯೆ ಬಂದು ಕಾಡುತ್ತಿರುತ್ತದೆ. ವರನ ಕಡೆಯವರಿಗೆ ಸರಿಯಾದ ಗೌರವ ಸಿಗಲಿಲ್ಲ, ಊಟ ಉಪಚಾರ ಸರಿಯಾಗಲಿಲ್ಲವೆಂದು ಕಿರಿಕಿರಿ ಮಾಡುವುದು ಅಥವಾ ಚಿನ್ನ ಕಡಿಮೆ, ಕಾರು ಕೊಟ್ಟಿಲ್ಲ ಹೀಗೆ ಒಂದಲ್ಲ ಒಂದು ಕಿರಿಕ್‌ ತೆಗೆದು ಜಗಳವಾಡುತ್ತಿರುತ್ತಾರೆ. ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಕೆಲವು ಮದುವೆ ನಡೆದರೆ, ಕೆಲವು ಮುರಿದು ಬೀಳುತ್ತದೆ. ಇದೀಗ ಮದುವೆಯ ದಿನ ಅಂತಹದೊಂದು ವಿಘ್ನ ಎದುರಾಗಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral video) ಆಗಿದೆ.

ಮದುವೆಯ ಮಂಟಪಕ್ಕೆ ವಧುವನ್ನು ಕರೆದುಕೊಂಡು ಹೋಗುವಾಗ ವರನು ಸ್ವಲ್ಪವೂ ಕನಿಕರವಿಲ್ಲದೇ ವಧುವಿನ ಜೊತೆ ಕೆಟ್ಟದಾಗಿ ವರ್ತಿಸಿದ್ದಕ್ಕೆ ಕೋಪಗೊಂಡ ವಧುವಿನ ಸಹೋದರ ಮದುವೆ ಮಂಟಪದಲ್ಲಿಯೇ ವರನ ಗ್ರಹಚಾರ ಬಿಡಿಸಿದ್ದಾನೆ. ವರ, ವಧುವನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಬರುವಾಗ ಧರಧರನೆ ಎಳೆದುಕೊಂಡು ದುರಂಹಕಾರಿಯಂತೆ ವರ್ತಿಸಿದ್ದಾನೆ.. ಇದರಿಂದ ವಧು ಆಯ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಇಷ್ಟಾದರೂ ಆಕೆಯನ್ನು ಮೇಲೆತ್ತದೆ ವರ ಆಕೆಯನ್ನು ಅದೇ ಸ್ಥಿತಿಯಲ್ಲೇ ಎಳೆದಾಡಿದ್ದಾನೆ. ನಂತರ ಮಂಟಪಕ್ಕೆ ಬಂದು ಸೋಫಾದ ಮೇಲೆ ತಾನೊಬ್ಬನೇ ಕುಳಿತಿದ್ದಾನೆ. ಇದನ್ನು ಕಂಡು ಕುಟುಂಬಸ್ಥರು ಸಹಿಸಿಕೊಂಡು ಸುಮ್ಮನಿದ್ದರೆ ವಧುವಿನ ಸಹೋದರ ಮಾತ್ರ ರೊಚ್ಚಿಗೆದ್ದು ನೇರವಾಗಿ ಮಂಟಪಕ್ಕೆ ಹೋಗಿ ವರನನ್ನು ಚೆನ್ನಾಗಿ ಥಳಿಸಿದ್ದಾನೆ. ವಧುವಿನ ಸಹೋದರ ವರನನ್ನು ಥಳಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ ವಧು ಮತ್ತು ವರ ಒಟ್ಟಿಗೆ ವೇದಿಕೆಗೆ ಬರುವಾಗ ವಧು ಎಡವಿ ನೆಲದ ಮೇಲೆ ಬಿದ್ದಿದ್ದಾಳೆ. ಆಗ ವರ ವಧುವನ್ನು ಮೇಲೆತ್ತುವ ಬದಲು, ಅವಳನ್ನು ಎಳೆದಾಡಿ ಮಂಟಪಕ್ಕೆ ಬಂದಿದ್ದಾನೆ. ಆಗ ಎಲ್ಲರಿಗೂ ಆಘಾತವಾಗುತ್ತದೆ. ನಂತರ ವರನು ನಡೆದು ಬಂದು ಸೋಫಾದ ಮೇಲೆ ಕುಳಿತನು. ಸಹೋದರಿಗೆ ಅಗೌರವವನ್ನು ತೋರಿದ ವರನ ಮೇಲೆ ಕೋಪಗೊಂಡ ವಧುವಿನ ಸಹೋದರ ವೇದಿಕೆಗೆ ಬಂದು ವರನಿಗೆ ಹೊಡೆದನು. ಆಗ ವಧುವಿನ ಕಡೆಯವರು ಆಕೆಯನ್ನು ಮೇಲೆತ್ತಿದ್ದಾರೆ.

ಸಫಿ ಮೊಹಮ್ಮದ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇದಕ್ಕೆ “ವಧುವಿನ ಸಹೋದರ ದೀರ್ಘಕಾಲ ಬಾಳಲಿ” ಎಂದು ಶೀರ್ಷಿಕೆ ನೀಡಿದೆ. ಈ ವಿಡಿಯೊಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ವರನ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್ ಮಾಡಿ ಅವನನ್ನು ನಿಂದಿಸಿದರೆ, ಕೆಲವರು ಆ ವ್ಯಕ್ತಿಗೆ ಪಾಠ ಕಲಿಸಿದ್ದಕ್ಕಾಗಿ ವಧುವಿನ ಸಹೋದರನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಪತಿ ಜೊತೆ ಸೇರಿ ಪ್ರೇಮಿಯನ್ನು ತುಂಡು ತುಂಡಾಗಿ ಕತ್ತರಿಸಿದ ಯುವತಿ! ಸ್ನೇಹಿತೆಯ ಮನೆಯೊಳಗೆ ಸಮಾಧಿ!

ಈ ವಿಡಿಯೊಗೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, ತನ್ನ ಮಗಳು ತನ್ನ ಜೀವನದಲ್ಲಿ ಅಂತಹ ವ್ಯಕ್ತಿಯನ್ನು ಮದುವೆಯಾಗುವುದಕ್ಕಿಂತ ಮನೆಯಲ್ಲಿ ವಯಸ್ಸಾಗುವವರೆಗೂ ಇರುವುದೇ ಲೇಸು ಎಂದು ಕಾಮೆಂಟ್ ಮಾಡಿದ್ದಾರೆ. ಕುಟುಂಬದವರು ಆಕೆಯ ರಕ್ಷಣೆಗೆ ಬಂದಿರುವುದನ್ನು ಕಂಡು ಮತ್ತೊಬ್ಬರು ಸಂತೋಷ ವ್ಯಕ್ತಪಡಿಸಿದ್ದಾರೆ. ಮತ್ತು ವರನ ವರ್ತನೆಯ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. ವಧುವಿಗೆ ನ್ಯಾಯ ಒದಗಿಸಲಾಗಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಆದರೆ ಈ ಮದುವೆ ಮುರಿದು ಬಿತ್ತೆ ಅಥವಾ ಮುಂದುವರಿಯಿತೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

Exit mobile version