ಭಾರೀ ಮಳೆಯಿಂದಾಗಿ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ ಅನೇಕ ಸಾವು ನೋವಾಗಿದೆ. ಸಾವನಪ್ಪಿದವರ ಸಂಖ್ಯೆ ದಿನ ದಿನಕ್ಕೇ ಏರುತ್ತಿದೆ. ಇದರಿಂದ ಅನೇಕ ಮಕ್ಕಳು ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡು ಗೋಳಾಡುತ್ತಿದ್ದಾರೆ. ವಯನಾಡ್ (Wayanad Tragedy )ಜಿಲ್ಲೆಯಲ್ಲಿ ಜನರ ಗೋಳಾಟ ಮುಗಿಲು ಮುಟ್ಟುತ್ತಿದೆ.
ಈ ನಡುವೆ ತಾಯಿಯೊಬ್ಬಳು ಅನಾಥರಾದ ಮಕ್ಕಳಿಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದಿದ್ದಾಳೆ. ತಾಯಿ ಎಂದರೆ ಕರುಣಾಮಯಿ ಎಂಬುದಕ್ಕೆ ಆಕೆ ಉದಾಹರಣೆಯಾಗಿದ್ದಾಳೆ. ಈಕೆ ಇಡುಕ್ಕಿಯ ನಿವಾಸಿ, ಇಬ್ಬರು ಮಕ್ಕಳ ತಾಯಿ. ನೂರಾರು ಜನರನ್ನು ಬಲಿ ತೆಗೆದುಕೊಂಡ ದುರಂತದಲ್ಲಿ ತಾಯಿಯನ್ನು ಕಳೆದುಕೊಂಡ ಶಿಶುಗಳಿಗೆ ನಿಸ್ವಾರ್ಥವಾಗಿ ಎದೆ ಹಾಲನ್ನು ನೀಡಿದ್ದಾಳೆ. ಈ ಮಹಿಳೆಯ ಈ ಮಹಾ ಕಾರ್ಯಕ್ಕೆ ಕೇರಳಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಹಿಳೆ, ಆಕೆಯ ಪತಿ ಮತ್ತು 4 ವರ್ಷ ಮತ್ತು 4 ತಿಂಗಳ ಇಬ್ಬರು ಮಕ್ಕಳು ಈಗಾಗಲೇ ಮಧ್ಯ ಕೇರಳದ ಇಡುಕ್ಕಿಯಲ್ಲಿರುವ ತಮ್ಮ ಮನೆಯಿಂದ ವಯನಾಡ್‌ಗೆ ಹೋಗಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆ ಮಹಿಳೆ, ಇಬ್ಬರು ಮಕ್ಕಳ ತಾಯಿಯಾದ ತನಗೆ ತಾಯಿ ಇಲ್ಲದ ಮಕ್ಕಳ ನೋವು, ಅವರನ್ನು ನೋಡಿಕೊಳ್ಳುವುದು ಎಷ್ಟು ಕಷ್ಟ ಎಂದು ತಿಳಿದಿದೆ. ಈ ದುರಂತದಲ್ಲಿ ಚಿಕ್ಕ ಮಕ್ಕಳು ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಈ ಬಗ್ಗೆ ಪತಿಯ ಬಳಿ ಚರ್ಚಿಸಿ ಅವರ ಬೆಂಬಲದೊಂದಿಗೆ ತಾನು ಈ ನಿರ್ಧಾರ ತೆಗೆದುಕೊಂಡೆ ಎಂಬುದಾಗಿ ಹೇಳಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಜುಲೈ 30ರಂದು ಕೇರಳದ ಗುಡ್ಡಗಾಡು ವಯನಾಡ್ ಜಿಲ್ಲೆಯ ವೈತಿರಿ ತಾಲ್ಲೂಕಿನ ಸುಮಾರು ಮೂರು ಹಳ್ಳಿಗಳಾದ ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 200 ದಾಟಿದೆ. ಇನ್ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಜಾನೆ 2 ಮತ್ತು 4.10ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈ ಸಮಯದಲ್ಲಿ ಜನರು ಮಲಗಿದ್ದರಿಂದ ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಈ ಮುದ್ದು ವಿದ್ಯಾರ್ಥಿನಿಯರ ನಗು, ಸೈಕಲ್ ಸವಾರಿ ಇನ್ನೆಲ್ಲಿ? ಮಣ್ಣಿನಡಿ ಸಮಾಧಿ; ಕಣ್ಣಂಚಲಿ ನೀರು ತರಿಸುವ ವಿಡಿಯೊ
ಸಂತ್ರಸ್ತ ಮುಂಡಕ್ಕೈ, ಚೂರಲ್ಮಾಲಾ ಮತ್ತು ಅತ್ತಮಾಲಾ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಪಡೆಗಳನ್ನು ಒಳಗೊಂಡ ತೀವ್ರ ರಕ್ಷಣಾ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.