ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದೀದಿ ಭದ್ರಕೋಟೆಯನ್ನು ಧೂಳೀಪಟಗೈದು ಅಧಿಕಾರಕ್ಕೇರಿದ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿದ್ದಂತೆ ಮಹತ್ವದ ಆದೇಶ ಹೊರಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆರೋಗ್ಯವಂತ ಜಾನುವಾರುಗಳ ಹತ್ಯೆ ಮಾಡಿದರೆ ಶಿಕ್ಷೆ ನೀಡಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಪಶುವೈದ್ಯರು ನೀಡುವ ಫಿಟ್‌ನೆಸ್ ಪ್ರಮಾಣಪತ್ರವಿಲ್ಲದೆ ಹಸು, ಹೋರಿ, ಎಮ್ಮೆ ಮತ್ತು ಕರು ಸೇರಿ ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವಂತಿಲ್ಲ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ಹಸು 14 ವರ್ಷ ಮೇಲ್ಪಟ್ಟಿದ್ದು, ಕೆಲಸ ಮಾಡಲು ಅಥವಾ ಸಂತಾನೋತ್ಪತ್ತಿ ಮಾಡಲು ಯೋಗ್ಯವಿಲ್ಲದಿದ್ದರೆ ಅಥವಾ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿದ್ದು, ಶಾಶ್ವತವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೆ ಮಾತ್ರ ಸ್ಥಳೀಯ ನಾಗರಿಕ ಅಧಿಕಾರಿಗಳು ಅಥವಾ ಪಶುವೈದ್ಯರು ಜಂಟಿಯಾಗಿ ಪ್ರಮಾಣ ಪತ್ರವನ್ನು ನೀಡಬಹುದಾಗಿದೆ.
ನಿಯಮಗಳನ್ನು ಜಾರಿಗೊಳಿಸಲು ಅಧಿಕಾರಿಗಳು ನಡೆಸುವ ಯಾವುದೇ ಪರಿಶೀಲನೆಯನ್ನು ವ್ಯಕ್ತಿಗಳು ತಡೆಯುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಗಳಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 1 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ; ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ, ದಂಡ

