ಹಾವೇರಿ: ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಸಂಬಂಧಪಟ್ಟಂತೆ ನೆರೆಯ ತಮಿಳುನಾಡಿನ ಡಿಎಂಕೆ ರೂಪಿಸಿರುವ ರಾಜಕೀಯ ಹುನ್ನಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಪಾದಿಸಿದ್ದಾರೆ.
ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ತಜ್ಞರ ಜೊತೆ ಚರ್ಚಿಸಿ, ಮರು ಚಿಂತನೆ ಮಾಡಿ, ತಮ್ಮ ಪಕ್ಷದ ನಾಯಕರನ್ನು ಒಪ್ಪಿಸಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಥಮ ರಾಜ್ಯಗಳಲ್ಲಿ ಒಂದಾಗಿದೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವಂತ ಅಧಿಕಾರ ವಿಕೇಂದ್ರಿಕರಣದ ಜೊತೆಗೆ ಮಹಿಳಾ ಮೀಸಲಾತಿಯನ್ನು ಜಾರಿ ಮಾಡಲಾಯಿತು. ನಂತರ 1993 ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಮತ್ತೊಮ್ಮೆ ಜಾರಿ ಮಾಡಲಾಯಿತು. ಅದರ ಆಧಾರದಲ್ಲಿ 1994 ರಲ್ಲಿ ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರ ಕೇಂದ್ರದಲ್ಲಿ ಸಂವಿಧಾನದ 73ನೇ ತಿದ್ದುಪಡಿ ಮಾಡಿ ಮಹಿಳಾ ಮೀಸಲಾತಿ ಜಾರಿಗೆ ತಂದರು ಎಂದು ಹೇಳಿದರು. ಮಹಿಳಾ ಮೀಸಲಾತಿಯನ್ನು ಮೊದಲು ಕಾಂಗ್ರೆಸ್ ತಂದಿದೆ ಎಂದು ಸಿದ್ದರಾಮಯ್ಯ ಹೇಳುತ್ತಿರುವುದು ಸುಳ್ಳು. ಕಾಂಗ್ರೆಸ್ಸೇತರ ಸರ್ಕಾರ ಮೊದಲು ಮಹಿಳಾ ಮೀಸಲಾತಿ ಜಾರಿಗೆ ತಂದಿದೆ ಎಂದರು.
ಸಂವಿಧಾನ ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಮೂರನೇ ಎರಡಷ್ಟು ಬಹುಮತ ಬೇಕು. ಕೆಲವು ಪ್ರಾದೇಶಿಕ ಪಕ್ಷಗಳು ವಿರೋಧ ಮಾಡುತ್ತ ಬಂದಿದ್ದವು. 1984 ರಿಂದ 89 ರಲ್ಲಿ ರಾಜೀವ್ ಗಾಂಧಿ ಪ್ರಧಾನಿ ಇದ್ದಾಗ ಅವರಿಗೆ ಮೂರನೇ ಎರಡರಷ್ಟು ಬಹುಮತ ಇತ್ತು. ಆಗಲೇ ಮಾಡಿದ್ದರೆ ಮೂವತ್ತು ವರ್ಷ ಆಗುತ್ತಿತ್ತು. ಆದರೆ, ಅವರು ಮಾಡಲಿಲ್ಲ. ಆ ಮೇಲೆ 1996 ರಲ್ಲಿ ದೇವೇಗೌಡರ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿದರು. ಆ ಸರ್ಕಾರವೂ ಹೋಯಿತು. 2023 ರಲ್ಲಿ ಈಗಿನ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ಹಾಗೂ ಲೋಕಸಭೆ ಹಾಗೂ ವಿಧಾಸಭೆಗಳ ಸಂಖ್ಯೆಯನ್ನು ಈಗಿರುವ ಕ್ಷೇತ್ರಗಳ ಶೇ 50 ರಷ್ಟು ಹೆಚ್ಚಳ ಮಾಡುವ ತಿದ್ದುಪಡಿ ಮಾಡಿ, ಅದನ್ನು ಮುಂದಿನ ಜನಗಣತಿ ನಂತರ ಜಾರಿ ಮಾಡಲು ತೀರ್ಮಾನಿಸಿತ್ತು ಎಂದು ಹೇಳಿದರು.
ದಕ್ಷಿಣಕ್ಕೆ ಅನ್ಯಾಯವಾಗಲ್ಲ:
ಸಿದ್ದರಾಮಯ್ಯ ಅವರು 2026 ರ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪನರ್ ವಿಂಗಡಣೆ ಆಗಲಿ ಎಂದು ಹೇಳುತ್ತಾರೆ. ಹೊಸ ಜನಗಣತಿ ಆಧಾರದ ಮೇಲೆ ಡಿಲಿಮಿಟೇಷನ್ ಆದರೆ ದಕ್ಷಿಣ ಭಾರತಕ್ಕೆ ಮತ್ತೆ ಅನ್ಯಾಯವಾಗಲಿದೆ. ಇದರ ಅರಿವಿದೆಯೋ ಇಲ್ಲವೋ ಕೇವಲ ರಾಜಕಾರಣಕ್ಕಾಗಿಯೇ ವಿತಂಡವಾದ, ಸತ್ಯಕ್ಕೆ ದೂರ ಇರುವ ವಾದ ಮಾಡಿ ದಕ್ಷಿಣ ಭಾರತದ ಜನರು, ಜನ ಪ್ರತಿನಿಧಿಗಳ ಆಯ್ಕೆಗೆ ಮತ್ತು ಕ್ಷೇತ್ರಗಳ ಸಂಖ್ಯೆಗೆ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ದೊಡ್ಡ ಅನ್ಯಾಯ ಮಾಡುತ್ತಿವೆ. ಕೇವಲ ರಾಜಕೀಯ ಕಾರಣಕ್ಕೆ ಡಿಎಂಕೆಯವರ ರಾಜಕೀಯ ಹುನ್ನಾರಕ್ಕೆ ನಮ್ಮ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಮ್ಮ ರಾಜ್ಯದ ಹಿತಾಸಕ್ತಿ ಬಲಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಮಹಿಳಾ ಮೀಸಲಾತಿ: ಡಿಎಂಕೆ ಹುನ್ನಾರಕ್ಕೆ ರಾಜ್ಯ ಬಲಿ ಕೊಡುತ್ತಿರುವ ಸಿಎಂ ಸಿದ್ದರಾಮಯ್ಯ: ಬಸವರಾಜ ಬೊಮ್ಮಾಯಿ ಆರೋಪ

