Site icon Vistara News

World Red Cross Day: ದಾನ ಮತ್ತು ಸೇವೆಯಿಂದ ಸಂತೋಷ; ಇದು ರೆಡ್ ಕ್ರಾಸ್ ದಿನದ ಸಂದೇಶ

World Red Cross Day

ರೆಡ್ ಕ್ರೆಸೆಂಟ್ ಡೇ ಅಥವಾ ವಿಶ್ವ ರೆಡ್ ಕ್ರಾಸ್ ದಿನವನ್ನು (World Red Cross Day) ವಿಶ್ವದಾದ್ಯಂತ ಮೇ 8ರಂದು ಆಚರಿಸಲಾಗುತ್ತದೆ. ಸ್ವಿಸ್ ಉದ್ಯಮಿ ಮತ್ತು ವಿಶ್ವದ ಅತಿದೊಡ್ಡ ಮಾನವೀಯ ನೆರವು ಸಂಸ್ಥೆಯಾದ ರೆಡ್ ಕ್ರಾಸ್ ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ (Henry Dunant) ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ. 1901ರಲ್ಲಿ ಮೊದಲ ನೊಬೆಲ್ ಶಾಂತಿ ಪ್ರಶಸ್ತಿಯನ್ನು (Nobel Peace Prize) ಪಡೆದ ಅವರು, ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯ ಸ್ಥಾಪಕರಾಗಿದ್ದಾರೆ.

ತುರ್ತು ಮತ್ತು ಸಂಘರ್ಷದ ಸಮಯದಲ್ಲಿ ಅಗತ್ಯವಿರುವವರಿಗೆ ಬೆಂಬಲ ನೀಡುವ ಸಲುವಾಗಿ ರೆಡ್ ಕ್ರಾಸ್ ಅನ್ನು ಸ್ಥಾಪಿಸಲಾಗಿದೆ. ವಿಶ್ವ ರೆಡ್ ಕ್ರಾಸ್ ದಿನದಂದು ಸ್ವಯಂ ಸೇವಕರು 192 ದೇಶಗಳಲ್ಲಿ ರಾಷ್ಟ್ರೀಯ ಅಧ್ಯಾಯಗಳನ್ನು ಹೊಂದಿರುವ 161 ವರ್ಷ ಹಳೆಯ ಅಂತಾರಾಷ್ಟ್ರೀಯ ನೆರವು ಸಂಸ್ಥೆಯ ಧ್ಯೇಯ ಮತ್ತು ತತ್ತ್ವಗಳನ್ನು ಪ್ರಚಾರ ಮಾಡುತ್ತಾರೆ.

ವಿಶ್ವ ರೆಡ್ ಕ್ರಾಸ್ ದಿನದ ಇತಿಹಾಸ ಏನು?

ಇಟಲಿಯಲ್ಲಿನ ಸೋಲ್ಫೆರಿನೊ ಕದನದ ವೇಳೆ ಗಾಯಗೊಂಡ ಸೈನಿಕರು ಮತ್ತು ನಾಗರಿಕರಿಗೆ ಚಿಕಿತ್ಸೆ ನೀಡಲು ಕೊರತೆ ಉಂಟಾದ ಪರಿಣಾಮ ತೀವ್ರವಾಗಿ ಮನನೊಂದ ಸ್ವಿಸ್ ಉದ್ಯಮಿ ಹೆನ್ರಿ ಡ್ಯೂನಾಂಟ್ ಅವರು ಕೆಲವು ವರ್ಷಗಳ ಅನಂತರ 1863 ರಲ್ಲಿ ಡ್ಯುನಾಂಟ್ ಸ್ವಯಂಸೇವಕ-ಬೆಂಬಲಿತ ಪರಿಹಾರ ಸಂಘಗಳನ್ನು ಸಂಘಟಿಸಿದರು. ಅದು ಯುದ್ಧಕಾಲ ಅಥವಾ ಸಂಘರ್ಷದ ಸಮಯದಲ್ಲಿ ಗಾಯಗೊಂಡವರಿಗೆ ಪಕ್ಷಾತೀತ ಸಹಾಯವನ್ನು ಒದಗಿಸಲು ಬದ್ಧವಾಗಿದೆ.

ಅದೇ ವರ್ಷ ಡ್ಯೂನಾಂಟ್ ಮತ್ತು ಐದು ಸಹೋದ್ಯೋಗಿಗಳು ಗಾಯಗೊಂಡವರಿಗೆ ಪರಿಹಾರಕ್ಕಾಗಿ ಅಂತಾರಾಷ್ಟ್ರೀಯ ಸಮಿತಿಯನ್ನು ಸ್ಥಾಪಿಸಿದರು. ಇದು ರೆಡ್ ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿಯಾಗಿ ವಿಕಸನಗೊಂಡಿತು.

ಸ್ವಿಸ್ ರಾಷ್ಟ್ರೀಯ ಧ್ವಜದಿಂದ ಪ್ರೇರಿತವಾದ ಲಾಂಛನ ಪಡೆದ ಸಂಸ್ಥೆಯು ಶೀಘ್ರದಲ್ಲೇ ರೆಡ್ ಕ್ರಾಸ್ ಎಂದು ಜನಪ್ರಿಯವಾಯಿತು. ಮೊದಲನೇ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡ ನಾಗರಿಕರು ಮತ್ತು ಯುದ್ಧ ಕೈದಿಗಳಿಗೆ ಸಹಾಯ ಮಾಡುವಲ್ಲಿ ರೆಡ್ ಕ್ರಾಸ್ ಪ್ರಮುಖ ಪಾತ್ರ ವಹಿಸಿತು. ಇಂದು ಇದು ಪ್ರಪಂಚದಾದ್ಯಂತ ಅನೇಕ ಸ್ಥಳೀಯ ಮತ್ತು ರಾಷ್ಟ್ರೀಯ ಸಂಘಟನೆಗಳನ್ನು ಒಳಗೊಂಡಿದೆ.


ಪ್ರಾಮುಖ್ಯತೆ

ಮಾನವ ಹಕ್ಕುಗಳ ಸಂರಕ್ಷಣೆಗೆ ರೆಡ್‌ಕ್ರಾಸ್‌ನ ಪ್ರಾಮುಖ್ಯತೆ ಅಗಾಧವಾಗಿದೆ. ಲಾಭರಹಿತ ಸಂಸ್ಥೆಯ ಮುಖ್ಯ ಧ್ಯೇಯ “ಪರ್ ಹ್ಯುಮಾನಿಟೇಟಮ್ ಆಡ್ ಪೇಸೆಮ್” ಅಂದರೆ “ಮಾನವೀಯತೆಯೊಂದಿಗೆ, ಶಾಂತಿಯ ಕಡೆಗೆ” ಎಂಬುದಾಗಿದೆ. ಇದು ವಿಶ್ವ ಶಾಂತಿಯ ಸಂದೇಶವನ್ನು ಪ್ರತಿಪಾದಿಸುತ್ತದೆ. ಸಂಘಟನೆಯು ಸಂಘರ್ಷ ವಲಯಗಳು ಅಥವಾ ನೈಸರ್ಗಿಕ ವಿಕೋಪಗಳ ಸ್ಥಳಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ.

196 ದೇಶಗಳಲ್ಲಿ ಸಕ್ರಿಯ

ಯುದ್ಧದ ಸಮಯದಲ್ಲಿ ಸೈನಿಕರು ಮತ್ತು ನಾಗರಿಕರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಕುರಿತು ನಾಲ್ಕು ಅಂಶಗಳ ಒಪ್ಪಂದವಾದ ಜಿನೀವಾ ಒಪ್ಪಂದಗಳನ್ನು ಕ್ರೋಡೀಕರಿಸಿದ ಕೀರ್ತಿ ವಿಶ್ವ ಸಂಸ್ಥೆಗೆ ಸಲ್ಲುತ್ತದೆ. ಪ್ರಪಂಚದ ಎಲ್ಲಾ 196 ದೇಶಗಳು ನಾಲ್ಕು ಜಿನೀವಾ ಒಪ್ಪಂದಗಳನ್ನು ಅಂಗೀಕರಿಸಿವೆ.

ಇದನ್ನೂ ಓದಿ: Flights cancelled: 300 ಸಿಬ್ಬಂದಿ ಸಾಮೂಹಿಕ ರಜೆ; 86 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಕ್ಯಾನ್ಸಲ್‌

ಜಿನೀವಾ ಒಪ್ಪಂದದ ಪ್ರಕಾರ ಎಲ್ಲಾ ನಾಗರಿಕರು ಮತ್ತು ಆಕ್ರಮಿತ ಪ್ರದೇಶದಲ್ಲಿರುವವರನ್ನು ರಕ್ಷಿಸಬೇಕು. ಯುದ್ಧ ಕೈದಿಗಳನ್ನು ಮಾನವೀಯತೆಯಿಂದ ನಡೆಸಿಕೊಳ್ಳಬೇಕು, ಸಂಘರ್ಷದ ಸಮಯದಲ್ಲಿ ಅನಾರೋಗ್ಯ, ಗಾಯಗೊಂಡ, ವೈದ್ಯಕೀಯ ಮತ್ತು ಧಾರ್ಮಿಕ ಸಿಬ್ಬಂದಿ ಮೇಲೆ ದಾಳಿ ಮಾಡಬಾರದು, ಸಮುದ್ರದಲ್ಲಿ ಯುದ್ಧದ ಸಮಯದಲ್ಲಿ ಗಾಯಗೊಂಡವರು, ರೋಗಿಗಳು ಮತ್ತು ಹಡಗು ನಾಶವಾದವರು ರಕ್ಷಿಸಬೇಕು.

ವಿಶ್ವ ರೆಡ್ ಕ್ರಾಸ್ ದಿನದ ಥೀಮ್ ಏನು?

2024ರ ವಿಶ್ವ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನದ ಥೀಮ್ “ನಾನು ಸಂತೋಷದಿಂದ ನೀಡುತ್ತೇನೆ ಮತ್ತು ನಾನು ನೀಡುವ ಸಂತೋಷವು ಬಹುಮಾನವಾಗಿದೆ”. ಇದು ದಾನ ಮತ್ತು ಸೇವೆಯ ಸಂತೋಷವನ್ನು ಪ್ರೋತ್ಸಾಹಿಸುತ್ತದೆ.

Exit mobile version