Site icon Vistara News

Reason Of Dreams: ರಾತ್ರಿ ನಿಮಗೆ ಕನಸುಗಳು ಕಾಡುತ್ತಿವೆಯೇ? ಕಾರಣ ಇದು!

Reason Of Dreams

ನಾವು ನಿದ್ರೆಗೆ ಜಾರುತ್ತಿದ್ದಂತೆ, ನಮ್ಮ ದೇಹವೂ ವಿಶ್ರಾಂತಿಗೆ ಜಾರುವುದು ಹೌದಾದರೂ, ಮೆದುಳಿಗೆ ವಿಶ್ರಾಂತಿಯಿಲ್ಲ- ನಮ್ಮ ನಿದ್ರೆಯ ಬಹಳಷ್ಟು ಹೊತ್ತು ಕನಸುಗಳನ್ನು ಕಾಣುತ್ತಲೇ ಇರುತ್ತದೆ ನಮ್ಮ ಮೆದುಳು. ಬಾಲ್ಯದ ಗೆಳೆಯರು ಸಿಕ್ಕಂತೆ, ಹಳೆಯ ಶಾಲೆಗೆ ಹೋದಂತೆ, ಗುಡ್ಡದ ತುದಿಯಿಂದ ಇಣುಕಿದಂತೆ, ಯಾರೋ ಅಟ್ಟಿಸಿಕೊಂಡು ಬಂದಂತೆ, ಯಾವುದೋ ಚಕ್ರವ್ಯೂಹದಲ್ಲಿ ಸಿಕ್ಕಿದಂತೆ… ಹೀಗೆ ಗಾಢವಾದ ಭಾವನೆಗಳನ್ನು ಕೆರಳಿಸಿದ ಕನಸುಗಳು (Reason Of Dreams) ಮಾತ್ರವೇ ನೆನಪಿರುತ್ತವೆ.

ಕನಸು ಕಾಣದವರು ಯಾರಿದ್ದಾರೆ? ಕೂತಲ್ಲಿ, ನಿಂತಲ್ಲಿ, ನಡೆಯುವಲ್ಲಿ ಕನಸು ಕಾಣುವವರ ಬಗ್ಗೆ ಅಲ್ಲ ಇಲ್ಲಿ ಹೇಳುತ್ತಿರುವುದು. ಯಾವುದೋ ನನಸು ಮಾಡುವಂಥ ಕನಸನ್ನು ಕಣ್ಣಲ್ಲಿ ತುಂಬಿಕೊಂಡವರ ಬಗ್ಗೆಯೂ ಇಲ್ಲಿ ಮಾತಾಡುತ್ತಿಲ್ಲ. ರಾತ್ರಿ ಮಲಗಿ ನಿದ್ದೆಯಲ್ಲಿ ಯಾವ್ಯಾವುದೋ ಲೋಕಕ್ಕೆ ಕರೆದೊಯ್ಯುವ ಸ್ವಪ್ನಗಳ ಬಗ್ಗೆ ಇಲ್ಲೀಗ ಪ್ರಸ್ತಾಪ. ನಗಿಸುವ, ಅಳಿಸುವ, ಹೆದರಿಸುವ, ಚೀರಿಸುವ, ಎಬ್ಬಿಸುವ, ಖುಷಿ ಪಡಿಸುವ- ಹೀಗೆ ಹಲವು ಭಾವನೆಗಳನ್ನು ಕೆರಳಿಸಲು ಈ ಕನಸುಗಳಿಗೆ ಸಾಧ್ಯವಿದೆ.

ಆದರೆ ಕನಸುಗಳೇಕೆ ಬೀಳುತ್ತವೆ ಎಂಬುದನ್ನು ತಿಳಿದವರು ಮಾತ್ರ ಯಾರೂ ಇಲ್ಲ. ನಾವು ನಿದ್ರೆಗೆ ಜಾರುತ್ತಿದ್ದಂತೆ, ನಮ್ಮ ದೇಹವೂ ವಿಶ್ರಾಂತಿಗೆ ಜಾರುವುದು ಹೌದಾದರೂ, ಮೆದುಳಿಗೆ ವಿಶ್ರಾಂತಿಯಿಲ್ಲ- ನಮ್ಮ ನಿದ್ರೆಯ ಬಹಳಷ್ಟು ಹೊತ್ತು ಕನಸುಗಳನ್ನು ಕಾಣುತ್ತಲೇ ಇರುತ್ತದೆ ನಮ್ಮ ಮೆದುಳು. ನಿದ್ದೆ ಮುಗಿಸಿ ಎದ್ದಾಗ, ಕನಸುಗಳು ನೆನಪಿರುವುದು ಕಡಿಮೆ. ಗಾಢವಾದ ಭಾವನೆಗಳನ್ನು ಕೆರಳಿಸಿದ ಕನಸುಗಳು ಮಾತ್ರವೇ ಸಾಮಾನ್ಯವಾಗಿ ನೆನಪಿರುತ್ತವೆ. ಬಾಲ್ಯದ ಗೆಳೆಯರು ಸಿಕ್ಕಂತೆ, ಹಳೆಯ ಶಾಲೆಗೆ ಹೋದಂತೆ, ಗುಡ್ಡದ ತುದಿಯಿಂದ ಇಣುಕಿದಂತೆ, ಯಾರೋ ಅಟ್ಟಿಸಿಕೊಂಡು ಬಂದಂತೆ, ಯಾವುದೋ ಚಕ್ರವ್ಯೂಹದಲ್ಲಿ ಸಿಕ್ಕಿದಂತೆ… ಹೀಗೆ ತೀವ್ರವಾದ ಭಾವನೆಗಳನ್ನು ಕೆರಳಿಸಿದ ಕನಸುಗಳು (Vivid dreams) ಸಾಮಾನ್ಯವಾಗಿ ಎಚ್ಚರವಾದ ಮೇಲೂ ಕೆಲವು ಕಾಲ ನೆನಪಿನಲ್ಲಿ ಇರುತ್ತವೆ.

ಕನಸುಗಳೇಕೆ ಬೀಳುತ್ತವೆ ಎಂಬುದು ನಿಖರವಾಗಿ ಗೊತ್ತಿಲ್ಲದಿದ್ದರೂ, ನೆನಪಿಗೆ ಮತ್ತು ಕನಸಿಗೆ ಗಾಢವಾದ ನಂಟಿದೆ ಎನ್ನುತ್ತಾರೆ ವಿಜ್ಞಾನಿಗಳು. ಬೇಡದ್ದನ್ನು ಮೆದುಳಿನಿಂದ ಅಳಿಸಿ, ಬೇಕಾದ್ದನ್ನು ಮಾತ್ರವೇ ಇರಿಸಿಕೊಳ್ಳುವಲ್ಲಿ ಕನಸುಗಳಿಗೂ ಪಾತ್ರವಿದೆಯಂತೆ. ಹಾಗಾಗಿ ಕೆಲವೊಮ್ಮೆ ಗಾಢವಾದ ನಿದ್ದೆಯಿಂದ ಎದ್ದಾಗ, ಕನಸುಗಳು ನೆನಪಿಲ್ಲದಿದ್ದರೂ, ತೀವ್ರ ಲವಲವಿಕೆಯ ಅನುಭವವಾಗುತ್ತದೆ. ಎಲ್ಲಕ್ಕಿಂತ ಕಡೆಯದಾಗಿ ಬಿದ್ದ ಕನಸುಗಳು ಮಾತ್ರವೇ ಹೆಚ್ಚಾಗಿ ನೆನಪಿನಲ್ಲಿ ಉಳಿಯುವುದು. ಇದನ್ನೇ ನಾವು ಆಡುಮಾತಿನಲ್ಲಿ ಬೆಳಗಿನ ಜಾವದ ಕನಸು ಎಂಬಂತೆ ಹೇಳುತ್ತೇವೆ.

ಸ್ಪಷ್ಟ ಕನಸು

(Lucid dreaming) ಒಂದಲ್ಲಾ ಒಂದು ಬಾರಿ ಎಲ್ಲರಿಗೂ ಅನುಭವಕ್ಕೆ ಬಂದೇ ಇರುತ್ತದೆ. ಅಂದರೆ ಕನಸು ಕಾಣುತ್ತಿರುವ ವ್ಯಕ್ತಿಗೆ, ಇದು ನಿಜವಲ್ಲ- ಕನಸು ಎಂಬುದು ತಿಳಿದಿರುತ್ತದೆ. ಇಡೀ ಕನಸಿನ ವಿವರಗಳನ್ನು ತಾನೇ ನಿರ್ದೇಶಿಸಬಲ್ಲೆ ಎಂದು ಭಾಸವಾಗುತ್ತದೆ. ತನ್ನದೇ ನಿರ್ದೇಶನದ ಸಿನೆಮಾ ಇದು ಎಂಬಂತೆ, ಎಚ್ಚರವೋ ಅಥವಾ ನಿದ್ದೆಯೋ ತಿಳಿಯದ ಸ್ಥಿತಿಯಲ್ಲಿ ಕನಸು ಬೀಳುತ್ತಲೇ ಹೋಗುತ್ತದೆ. ಇವೆಲ್ಲವೂ ಕನಸು ಎಂಬುದು ಕಾಣುತ್ತಿರುವ ವ್ಯಕ್ತಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ.

ನಿದ್ದೆಯ ಆರ್‌ಇಎಂ (rapid eye movement ) ಹಂತದಲ್ಲಿ ಸ್ಪಷ್ಟ ಕನಸುಗಳು ಬೀಳುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಇದೇ ಕಾರಣಕ್ಕಾಗಿ ಕನಸು ನೆನಪಿರುತ್ತದೆ ಮತ್ತು ಅದನ್ನು ನಿರ್ದೇಶಿಸಲು ತನಗೆ ಸಾಧ್ಯ ಎಂಬ ಭಾವ ಕನಸುಗಾರನಿಗೆ ಬರುತ್ತದೆ. ತಮ್ಮ ಅನುಭವಕ್ಕೆ ಬಂದಿದ್ದು ನಿಜವೋ ಕನಸೋ ಎಂದು ಗೊಂದಲ ಮೂಡುವುದೂ ಇದೇ ಹಂತದಲ್ಲಿ. ಆದರೆ ಸ್ಪಷ್ಟ ಕನಸುಗಳಿಗೆ ಚಿಕಿತ್ಸಕ ಗುಣವಿದೆ. ಇಂಥ ಕನಸುಗಳ ಮೂಲಕ ಮಾನಸಿಕ ಚಿಕಿತ್ಸೆಯನ್ನೂ ನೀಡಬಹುದು ಎಂಬುದು ಮನೋಚಿಕಿತ್ಸಕರ ಮಾತು.

ಈ ಗಾಢ ಅಥವಾ ತೀವ್ರಭಾವದ ಕನಸುಗಳ ಪೂರ್ವಾಪರವನ್ನೊಮ್ಮೆ ನೋಡೋಣ. ಗಾಢ ಕನಸುಗಳು ಸಿಕ್ಕಾಪಟ್ಟೆ ಬೀಳುತ್ತಿದ್ದರೆ, ರಾತ್ರಿಗಳನ್ನು ಕಾಡುತ್ತಿದ್ದರೆ ಹಗಲಿನಲ್ಲಿ ಮನಸ್ಸಿನ ಮೇಲೆ ಬೀಳುವ ಒತ್ತಡಗಳು ಕಾರಣವಾಗಿರಬಹುದು. ಪೂರ್ಣ ಪ್ರಜ್ಞೆಯ ಅವಸ್ಥೆಯಲ್ಲಿ ನಡೆಯುವುದನ್ನು ಸುಪ್ತ ಮನಸ್ಸುಗಳು ತಮ್ಮದೇ ರೀತಿಯಲ್ಲಿ ಪ್ರತಿಫಲಿಸುತ್ತವೆ. ಇದರಿಂದಾಗಿ ಕನಸುಗಾರನಿಗೆ ಸಮಸ್ಯೆಗಳು ಬೆಂಬತ್ತಬಹುದು. ನಿದ್ದೆ ಅಪೂರ್ಣ ಎನಿಸಿ, ಹಗಲೆಲ್ಲಾ ಸುಸ್ತಾಗಿ, ಸರಿಯಾಗಿ ಯೋಚಿಸಲಾಗದೆ, ನಿರ್ಧಾರಗಳಲ್ಲಿ ಎಡವಿ, ದಿನಪೂರಾ ಹಾಳು ಎಂಬ ಸ್ಥಿತಿಗೆ ಬರಬಹುದು. ಏನೆಲ್ಲಾ ಸಮಸ್ಯೆಗಳಾಗಬಹುದು ಎಂಬ ವಿವರಗಳಿವು-

ಮಾನಸಿಕ ಆಯಾಸ

ದಿನದ ಸಮಯದಲ್ಲಿ ಒತ್ತಡ ಮಿತಿ ಮೀರಿದ್ದರೆ, ರಾತ್ರಿಯಲ್ಲಿ ತೀವ್ರಭಾವ ಕೆರಳಿಸುವ ಸ್ವಪ್ನಗಳು ಬೀಳಬಹುದು ಎನ್ನುತ್ತದೆ ವಿಜ್ಞಾನ. ಹಗಲಿನ ಒತ್ತಡದಿಂದ ರಾತ್ರಿಯೂ ನಿದ್ದೆಯಿಲ್ಲದೆ, ಮರುದಿನ ಮತ್ತೆ ಒತ್ತಡ ಹೆಚ್ಚಾಗಿ, ರಾತ್ರಿ ಪುನಃ ನಿದ್ದೆಯಿಲ್ಲದೆ… ವಿಷಮ ವೃತ್ತ ಮುಂದುವರಿಯುತ್ತದೆ. ಹಾಗಾಗಿ ಧ್ಯಾನ, ಸಂಗೀತ, ಪ್ರಾಣಾಯಾಮ, ಯೋಗ- ಅಂತೂ ದಾರಿ ಯಾವುದಾದರೂ ಸರಿ, ಒತ್ತಡವನ್ನು ಕಡಿಮೆ ಮಾಡಲೇಬೇಕು.

ಔಷಧಗಳು

ಕೆಲವು ಔಷಧಗಳು ನಮ್ಮ ನಿದ್ದೆಯನ್ನು ವ್ಯತ್ಯಾಸ ಮಾಡಿ, ಹೀಗೆ ವಿಚಿತ್ರ ಕನಸುಗಳನ್ನು ಉದ್ದೀಪಿಸುತ್ತವೆ. ಖಿನ್ನತೆ ನಿವಾರಕ ಔಷಧಗಳು ನಮ್ಮ ಕನಸುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ.

ನಿದ್ದೆ ಸಂಬಂಧೀ ಸಮಸ್ಯೆಗಳು

ಕೆಲವೊಂದು ನಿದ್ದೆ-ಸಂಬಂಧೀ ಸಮಸ್ಯೆಗಳು ಇಂಥ ತೊಂದರೆಗಳನ್ನು ಹುಟ್ಟುಹಾಕಬಲ್ಲವು. ರೆಸ್ಟ್‌ಲೆಸ್‌ ಲೆಗ್‌ ಸಮಸ್ಯೆ, ನಾರ್ಕೊಲೆಪ್ಸಿ ಮುಂತಾದವು ನಿದ್ದೆಯನ್ನು ಕನಸುಗಳ ಮೂಲಕ ದಿಸೆಗೆಡಿಸಬಲ್ಲವು.

ಜೀವನಶೈಲಿ

ಎರ್ರಾಬಿರ್ರಿ ಜೀವನಶೈಲಿಗಳೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪೋಷಕಾಂಶಗಳ ಕೊರತೆಯಿದ್ದರೆ, ಮಲಗುವುದಕ್ಕೆ ನಿಯಮಿತ ಸಮಯವೇ ಇಲ್ಲದಿದ್ದರೆ, ಅತಿಯಾದ ಕೆಫೇನ್‌ ಅಥವಾ ಆಲ್ಕೋಹಾಲ್‌ ಸೇವನೆ, ಮಾದಕವಸ್ತುಗಳ ವ್ಯಸನ ಮುಂತಾದವು ನಿದ್ದೆಯನ್ನು ಇನ್ನಿಲ್ಲದಂತೆ ಹಾಳು ಮಾಡುತ್ತವೆ. ಭೀಕರವಾದ ಕನಸುಗಳನ್ನು ತರುತ್ತವೆ.

ಹಳೆಯ ಮಾನಸಿಕ ಸಮಸ್ಯೆಗಳು

ಎಂದೋ ಮನಸ್ಸಿಗಾದ ಗಾಯ, ನೋವುಗಳು ದೇಹ ಮತ್ತು ಮನಸ್ಸುಗಳ ಮೇಲೆ ಸಿಕ್ಕಾಪಟ್ಟೆ ಒತ್ತಡವನ್ನು ಹಾಕಲು ಸಾಧ್ಯವಿದೆ. ದೇಹ ನಿದ್ದಗೆ ಜಾರಿದಾಗ ಸುಪ್ತ ಮನಸ್ಸು ಜಾಗೃತವಾಗಿಯೇ ಇರುವುದರಿಂದ ಹಳೆಯದ್ದೆಲ್ಲಾ ಕೆದಕಿ, ವಿವರವಾದ ಮತ್ತು ಕೆಲವೊಮ್ಮೆ ಅಸಂಬದ್ಧವಾದ ಕನಸುಗಳನ್ನು ಮೂಡಿಸಬಲ್ಲವು.

ಪರಿಹಾರವೇನು?

ನಿತ್ಯದ ಬದುಕನ್ನೇ ಬುಡಮೇಲು ಮಾಡುವಷ್ಟು ಕನಸುಗಳು ತೊಂದರೆ ಕೊಡುತ್ತಿವೆ ಎಂದಾದರೆ, ಇದಕ್ಕೆ ತಜ್ಞರಲ್ಲಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಆಪ್ತ ಸಮಾಲೋಚನೆ ಮುಖಾಂತರ ಯಾವ ಕಾರಣಕ್ಕಾಗಿ ನಮ್ಮ ಸುಪ್ತ ಮನಸ್ಸು ಇಂಥ ಕನಸುಗಳನ್ನು ನಮ್ಮತ್ತ ತಳ್ಳುತ್ತಿದೆ ಎಂಬುದನ್ನು ಒಂದು ಹಂತದವರೆಗೆ ಅರ್ಥ ಮಾಡಿಕೊಳ್ಳುವುದು ಸಾಧ್ಯವಿದೆ. ಒತ್ತಡ ನಿವಾರಣೆಯಂತೂ ನಿಜಕ್ಕೂ ಪರಿಣಾಮಕಾರಿ ಪರಿಹಾರಗಳನ್ನು ನೀಡಬಲ್ಲದು.

Exit mobile version