Site icon Vistara News

Bathroom Cleaning Tips: ಬಾತ್‌ರೂಮ್‌ ಕನ್ನಡಿ ಕೊಳಕಾಗಿದೆಯೇ? ಚಿಂತೆ ಬಿಡಿ, ಈ ಟಿಪ್ಸ್ ಬಳಸಿ

Bathroom Cleaning Tips

ಬೆಂಗಳೂರು: ಹಿಂದಿನವರು ಮನೆ ಕಟ್ಟುವಾಗ ತುಂಬಾ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ವಾಸಿಸುವುದಕ್ಕೆ ಮನೆ ಇದ್ದರೆ ಸಾಕು ಅನ್ನುವ ಹಾಗೇ ಇತ್ತು. ಕಾಲಕ್ರಮೇಣ ಇದು ಬದಲಾಗಿ ಈಗ ಮನೆಯ ಇಂಟಿರಿಯರ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಕನ್ನಡಿ ಮನೆಯ ಹೊರಗಡೆ ಇದ್ದರೆ ಈಗ ಬಾತ್ ರೂಂ ಒಳಗೂ ತನ್ನ ಅಧಿಪತ್ಯ ಸ್ಥಾಪಿಸಿಕೊಂಡಿದೆ. ಮನೆಯ ಬಾತ್ ರೂಂನಲ್ಲಿ ಕನ್ನಡಿ (Bathroom Cleaning Tips) ಹಾಕುವುದು ಈಗಿನ ಫ್ಯಾಷನ್. ಆದರೆ ಸ್ನಾನ ಮಾಡುವಾಗ ಧೂಳು, ನಮ್ಮ ದೇಹದ ಕೊಳೆ, ನೀರು ಅದರ ಮೇಲೆ ಬೀಳುತ್ತದೆ. ಇದರಿಂದ ಕನ್ನಡಿಯಲ್ಲಿ ಕಲೆಗಳು ಮೂಡುತ್ತದೆ. ಈ ಕಲೆಗಳನ್ನು ಎಷ್ಟೇ ಉಜ್ಜಿದರೂ ಅದು ಸುಲಭವಾಗಿ ಹೋಗುವುದಿಲ್ಲ. ಹಾಗಾಗಿ ಈ ಕನ್ನಡಿಯನ್ನು ಸ್ವಚ್ಛಗೊಳಿಸುವುದು ಕೆಲವರಿಗೆ ಚಿಂತೆಯ ವಿಷಯವಾಗಿದೆ. ಹಾಗಾಗಿ ಈ ಕಲೆಗಳನ್ನು ಸುಲಭವಾಗಿ ನಿವಾರಿಸಲು ಇವುಗಳನ್ನು ಟ್ರೈ ಮಾಡಿ.

1. ದಿನ ಪತ್ರಿಕೆಗಳು

ನಿಮ್ಮ ಬಾತ್ ರೂಮ್‌ ಕನ್ನಡಿಯನ್ನು ಸ್ವಚ್ಛಗೊಳಿಸಲು ದಿನಪತ್ರಿಕೆಗಳನ್ನು ಬಳಸಬಹುದು. ದಿನ ಪತ್ರಿಕೆಯನ್ನು ನೀರಿನಲ್ಲಿ ಅದ್ದಿ ನಂತರ ಗ್ಲಾಸ್‌ನ ಮೇಲೆ ನಿಧಾನವಾಗಿ ಒರೆಸಿ. ಇದು ಗ್ಲಾಸ್ ನ ಮೇಲಿರುವ ನೀರಿನ ಕಲೆಗಳನ್ನು ಸ್ವಚ್ಛಗೊಳಿಸುತ್ತದೆ. ಮತ್ತು ಹೊಳೆಯುವಂತೆ ಮಾಡುತ್ತದೆ.

2. ಟಾಲ್ಕಂ ಪೌಡರ್

ಟಾಲ್ಕಂ ಪೌಡರ್ ಅನ್ನು ಮುಖದ ಹೊಳಪಿಗೆ ಬಳಸುತ್ತಾರೆ. ಆದರೆ ಇದನ್ನು ಬಾತ್ ರೂಮ್‌ನಲ್ಲಿರುವ ಕನ್ನಡಿಯನ್ನು ಸ್ವಚ್ಛಗೊಳಿಸಲೂ ಬಳಸಬಹುದು. ಕನ್ನಡಿಯ ಮೇಲೆ ಸ್ವಲ್ಪ ಟಾಲ್ಕಂ ಪೌಡರ್ ಅನ್ನು ಸಿಂಪಡಿಸಿ ನಂತರ ಮೃದುವಾದ ಬಟ್ಟೆಯಿಂದ ಅದನ್ನು ಒರೆಸಿ. ಇದು ಕನ್ನಡಿಯ ಮೇಲಿರುವ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.

3. ಟೂತ್ ಪೇಸ್ಟ್

ಟೂತ್ ಪೇಸ್ಟ್ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮಾತ್ರವಲ್ಲ ನಿಮ್ಮ ಬಾತ್ ರೂಮ್‌ ಕನ್ನಡಿಯನ್ನು ಸ್ವಚ್ಛಗೊಳಿಸುತ್ತದೆ. ಬಿಳಿ ಬಣ್ಣದ ಟೂತ್ ಪೇಸ್ಟ್ ಅನ್ನು ನೀರಿನಲ್ಲಿ ಬೆರೆಸಿ ಅದನ್ನು ಕನ್ನಡಿಗೆ ಹಚ್ಚಿ ಒಣ ಬಟ್ಟೆಯಿಂದ ಒರೆಸಿ. ಇದರಿಂದ ಕಲೆಗಳು ಮಾಯವಾಗಿ ಕನ್ನಡಿ ಹೊಸದರಂತಾಗುತ್ತದೆ.

4. ಆಲ್ಕೋಹಾಲ್

ಕನ್ನಡಿಯ ಮೇಲೆ ನೀರಿನ ಗಡುಸಾದ ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಆಲ್ಕೋಹಾಲ್ ಬಳಸಿ. ಆಲ್ಕೋಹಾಲ್ ಅನ್ನು ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಕನ್ನಡಿಯ ಮೇಲೆ ಸ್ಟ್ರೇ ಮಾಡಿ. ನಂತರ ಸ್ವಲ್ಪ ಹೊತ್ತು ಹಾಗೇ ಬಿಟ್ಟು ಬಳಿಕ ಮೃದುವಾದ ಬಟ್ಟೆಯಲ್ಲಿ ಉಜ್ಜಿ ಗ್ಲಾಸ್ ಅನ್ನು ಸ್ವಚ್ಛಗೊಳಿಸಿ.

5. ಅಡುಗೆ ಸೋಡಾ, ವಿನೆಗರ್

ಬಿಳಿ ವಿನೆಗರ್ ಮತ್ತು ಅಡುಗೆ ಸೋಡಾವನ್ನು ಬಳಸಿ ನಿಮ್ಮ ಬಾತ್ ರೂಮ್‌ ಕನ್ನಡಿಯಲ್ಲಿರುವ ಕಲೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಸ್ವಲ್ಪ ಅಡುಗೆ ಸೋಡಾವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ವಿನೆಗರ್ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ ಅದನ್ನು ಕನ್ನಡಿಯ ಮೇಲೆ ಹಚ್ಚಿ ಹತ್ತು ನಿಮಿಷ ಹಾಗೇ ಬಿಟ್ಟು ನಂತರ ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ. ಇದರಿಂದ ಕನ್ನಡಿಯಲ್ಲಿರುವ ಕಲೆಗಳನ್ನು ನಿವಾರಣೆಯಾಗಿ ಕನ್ನಡಿ ಪಳಪಳನೆ ಹೊಳೆಯುತ್ತದೆ.

ಇದನ್ನೂ ಓದಿ: Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

6. ನಿಂಬೆ ಮತ್ತು ವಿನೆಗರ್

ಮೂರು ಚಮಚ ನಿಂಬೆ ರಸದಲ್ಲಿ ಬಿಳಿ ವಿನೆಗರ್ ಅನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ. ಅದನ್ನು ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಕನ್ನಡಿಯ ಮೇಲೆ ಸಿಂಪಡಿಸಿ. ನಂತರ ಎರಡು ಮೂರು ನಿಮಿಷ ಬಿಟ್ಟು ಗ್ಲಾಸ್ ಅನ್ನು ಸ್ವಚ್ಛಗೊಳಿಸಿ. ಇದರಿಂದ ಕನ್ನಡಿ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.

Exit mobile version