–ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಟ್ರಾಬೆರಿ ಹಣ್ಣು ಆರೋಗ್ಯಕರ ಮಾತ್ರವಲ್ಲ, ಸೌಂದರ್ಯ ವರ್ಧಕ ಕೂಡ. ಇದರಲ್ಲಿ ಅಧಿಕ ಪ್ರಮಾಣದ ವಿಟಮಿನ್ ಗಳು ಮತ್ತು ಕಬ್ಬಿಣಾಂಶವಿದೆ. ಸ್ಟ್ರಾಬೆರಿ ಸೇವಿಸುವವರಿಗೆ ಆ್ಯಂಟಿ ಏಜಿಂಗ್ ಕ್ರೀಮ್ ಅವಶ್ಯಕತೆ ಉಂಟಾಗುವುದಿಲ್ಲ. ಬೇಗನೇ ಮುಖದಲ್ಲಿ ನೆರಿಗೆಯೂ ಬರುವುದಿಲ್ಲ. ತ್ವಚೆಯ ಹಾಗೂ ಕೂದಲಿನ ಸೌಂದರ್ಯಕ್ಕೂ ಇದನ್ನು ನಾನಾ ವಿಧದಲ್ಲಿ ಬಳಸಬಹುದು. ಈ ಬಗ್ಗೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್ ಒಂದಿಷ್ಟು ಸಲಹೆ ನೀಡಿದ್ದಾರೆ.
ಸ್ಟ್ರಾಬೆರಿ ಮಾಸ್ಕ್
ಸುಮಾರು ಏಳೆಂಟು ಸ್ಟ್ರಾಬೆರಿ ಹಣ್ಣುಗಳನ್ನು ಒಂದು ಬೌಲ್ ನಲ್ಲಿ ಸ್ಮ್ಯಾಶ್ ಮಾಡಿ. ಅದಕ್ಕೆ 3 ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ. ಪೇಸ್ಟ್ ಮಾಡಿ. ಅದನ್ನು ಮುಖಕ್ಕೆ ಲೇಪಿಸಿ. ಹತ್ತು ನಿಮಿಷದ ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ. ಆಗಾಗ ಮಾಸ್ಕ್ ಹಾಕುವುದರಿಂದ ಮುಖದ ಜಿಡ್ಡಿನಂಶ ಕಡಿಮೆಯಾಗುವುದು.
ತ್ವಚೆಯ ಫ್ರೆಶ್ನೆಸ್ ಕಾಪಾಡಲು
ಒಂದು ದೊಡ್ಡ ಸ್ಟ್ರಾಬೆರಿ ಹಣ್ಣಿಗೆ ಒಂದು ಟೇಬಲ್ ಸ್ಪೂನ್ ಆಲಿವ್ ಆಯಿಲ್ ಸೇರಿಸಿ. ಬಳಿಕ ಈ ಮಿಶ್ರಣವನ್ನು ಒಣಚರ್ಮಕ್ಕೆ ಲೇಪಿಸಿ. ಐದು ನಿಮಿಷ ಬಿಟ್ಟು ವಾಶ್ ಮಾಡಿ. ತ್ವಚೆ ಹೊಳಪು ಪಡೆಯುವುದು.
ಕಂಗಳ ಸೌಂದರ್ಯಕ್ಕಾಗಿ
ಸ್ಟ್ರಾಬೆರಿಯನ್ನು ತೆಳುವಾಗಿ ಸ್ಲೈಸ್ ಮಾಡಿ ಅದನ್ನು ಮುಚ್ಚಿದ ಕಣ್ಣಿನ ಮೇಲಿಟ್ಟುಕೊಂಡು ಒಂದತ್ತು ವಿಶ್ರಮಿಸಿ. ಬಳಿಕ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. ತಂಪಾಗುವುದು. ಆಗಾಗ ಹೀಗೆ ಮಾಡುವುದರಿಂದ ಕಣ್ಣಿನ ಸುತ್ತ ಇರುವ ಬ್ಕ್ಯಾಕ್ ಸರ್ಕಲ್ ಕಡಿಮೆಯಾಗುವುದು.
ಸಿಲ್ಕಿ ಕೂದಲಿಗಾಗಿ
ಮಾಗಿದ 7-8 ಸ್ಟ್ರಾಬೆರಿ ಹಣ್ಣಿನ ಪ್ಯಾಕ್ ಕೂದಲಿಗೆ ಹಾಕುವುದರಿಂದ ಕೂದಲು ಹೊಳಪು ಪಡೆಯುವುದು. ಇದು ಅತ್ಯುತ್ತಮ ನೈಸರ್ಗಿಕ ಹೇರ್ ಕಂಡೀಷನರ್ ಆಗಿಯೂ ಅದು ಕಾರ್ಯನಿರ್ವಹಿಸುತ್ತದೆ.
ಸುಂದರ ನಗುವಿಗಾಗಿ
ಸ್ಟ್ರಾಬೆರಿಗೆ ನೈಸರ್ಗಿಕವಾಗಿ ಹಲ್ಲನ್ನು ಬಿಳಿಗೊಳಿಸುವ ಗುಣವಿದೆ. ಸ್ಟ್ರಾಬೆರಿ ತಿರುಳು ಮತ್ತು ಒಂದು ಟೇಬಲ್ ಲ ಸ್ಪೂನ್ ಅಡುಗೆ ಸೋಡಾ ಮಿಶ್ರಣವನ್ನು ಮಿಶ್ರ ಮಾಡಿ. ವಾರಕ್ಕೆ ಒಂದು ಬಾರಿ ಹಲ್ಲಿನ ಮೇಲೆ ಕೆಲವು ಸೆಕೆಂಡ್ ಗಳ ಕಾಲ ಮಸಾಜ್ ಮಾಡಿ ತೊಳೆಯುವುದರಿಂದ ಹಲ್ಲು ನೈಸರ್ಗಿಕವಾಗಿ ಬಿಳಿಯಾಗುವ ಜತೆಗೆ ಸ್ವಚ್ಛವಾಗುತ್ತದೆ. ಇದೇ ವಿಧಾನದ ಮೂಲಕ ಹಲ್ಲಿನ ಮೇಲಿರುವ ಕಲೆಯನ್ನೂ ಪರಿಣಾಮಕಾರಿಯಾಗಿ ನಿವಾರಿಸಬಹುದು.
ಇದನ್ನೂ ಓದಿ: ಆಕರ್ಷಕ ತ್ವಚೆಗಾಗಿ ಸೀಸನ್ ಮ್ಯಾಂಗೋ ಫೇಸ್ಪ್ಯಾಕ್