–ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾದಾಮಿ ಎಣ್ಣೆಯ ಬಳಕೆ ತ್ವಚೆಯ ಹಾಗೂ ಚರ್ಮದ ಸುಕೋಮಲತೆಯನ್ನು ಹೆಚ್ಚಿಸುತ್ತದೆ. ಇದರ ಬಳಕೆಯಿಂದ ಚರ್ಮದ ನಾನಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಬಗ್ಗೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ.
- ಮಗುವಿನ ಸುಕೋಮಲ ತ್ವಚೆಗಾಗಿ
ಮಗುವಿನ ಚರ್ಮವನ್ನು ಸುಕೋಮಲವಾಗಿಸಲು ಸ್ನಾನಕ್ಕೂ ಮುನ್ನ ಮುಖಕ್ಕೆ ಬಾದಾಮಿ ಎಣ್ಣೆ ಲೇಪಿಸಿ, ನಿಧಾನವಾಗಿ ಮಸಾಜ್ ಮಾಡಿ. ನಂತರ ಸಿದ್ಧಪಡಿಸಿದ ಕಡಲೆ ಹಿಟ್ಟಿನ ಪೇಸ್ಟನ್ನು ಸವರಿ, ಇಪ್ಪತ್ತು ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಮುಖ ಕಾಂತಿಯುಕ್ತವಾಗುವುದು. ಮಗುವಿನ ಚರ್ಮ ಸುಕೋಮಲವಾಗುವುದು.
- ಸುಂದರ ಅಧರಕ್ಕಾಗಿ
ಕೆಲವರಿಗೆ ಆಗಾಗ ತುಟಿ ಬಿರುಕು ಮೂಡುತ್ತದೆ. ಈ ಸಮಸ್ಯೆ ಇರುವವರು ಬಾದಾಮಿ ಎಣ್ಣೆಯನ್ನು ಪ್ರತಿ ದಿನ ತುಟಿಗಳಿಗೆ ಲೇಪಿಸುತ್ತಾ ಬಂದಲ್ಲಿ ಮೃದುವಾದ ತುಟಿ ನಿಮ್ಮದಾಗುವುದು.
- ಮುಖದ ಮೇಲಿನ ನೆರಿಗೆ
ವಿಟಮಿನ್ ಎ ಮತ್ತು ಬಿ ಇರುವ ಆಹಾರ ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ. ಬಾದಾಮಿ ಎಣ್ಣೆಯಲ್ಲಿಈ ಎರಡು ಅಂಶಗಳು ಇರುವುದರಿಂದ ಇದನ್ನು ಮುಖಕ್ಕೆ ಲೇಪಿಸಿದಲ್ಲಿ ಮುಖದಲ್ಲಿ ಅಕಾಲಿಕ ನೆರಿಗೆ ಉಂಟಾಗುವ ಸಮಸ್ಯೆಯನ್ನು ತಪ್ಪಿಸಬಹುದು.
- ಡಾರ್ಕ್ ಸರ್ಕಲ್
ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತ ಹಚ್ಚಿ. ಈ ರೀತಿ ಮಾಡುತ್ತಾ ಬಂದರೆ ಕ್ರಮೇಣ ಡಾರ್ಕ್ ಸರ್ಕಲ್ ಮಾಯವಾಗುವುದು.
- ಕಾಂತಿಗಾಗಿ ತ್ವಚೆಯ ಸ್ಕ್ರಬ್
ನಿರ್ಜೀವ ತ್ವಚೆಯ ಚರ್ಮವನ್ನು ಹೋಗಲಾಡಿಸಲು ಸ್ಕ್ರಬ್ ಮಾಡಬಹುದು. ಒಂದು ಚಮಚ ಬಾದಾಮಿ ಎಣ್ಣೆಗೆ ಸ್ವಲ್ಪ ಪುಡಿ ಚಮಚ ಸಕ್ಕರೆ ಹಾಕಿ, ಮಿಶ್ರ ಮಾಡಿ. ನಂತರ ಅದರಿಂದ ಮುಖವನ್ನು ಸ್ಕ್ರಬ್ ಮಾಡಿದಲ್ಲಿ ಮುಖದ ಕಾಂತಿ ಹೆಚ್ಚುವುದು.
- ಕೂದಲ ಸೌಂದರ್ಯ
ಬಾದಾಮಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿದರೆ ಕೂದಲಿನ ಆರೋಗ್ಯ ಹೆಚ್ಚುವುದು. ಕೂದಲಿನ ಪೋಷಣೆಗೆ ಇದು ಸಹಕಾರಿ. ತಲೆ ಹೊಟ್ಟು ನಿವಾರಣೆಯಾಗುವುದು. ಕೂದಲಿನ ಹೊಳಪು ಹೆಚ್ಚುವುದು. ಕೂದಲಿನ ಬೆಳವಣಿಗೆಗೂ ಬಾದಾಮಿ ಎಣ್ಣೆ ತುಂಬಾ ಸಹಕಾರಿ. ಬಾದಾಮಿ ಎಣ್ಣೆಯ ನಿರಂತರ ಬಳಕೆ ಮಾಡಿದಲ್ಲಿ ಕೂದಲು ಬಲು ಬೇಗ ಬೆಳೆಯುತ್ತದೆ ಎನ್ನಲಾಗಿದೆ.
ಇನ್ನು ಹೊಟ್ಟಿನಿಂದ ಮುಕ್ತಿ ಪಡೆಯಲು ಮತ್ತು ಕೂದಲಿನ ಕಾಂತಿ ಹೆಚ್ಚಿಸಲು, ವಾರಕ್ಕೊಮ್ಮೆಯಾದರೂ ಕೊಂಚ ಬಾದಾಮಿ ಎಣ್ಣೆಯನ್ನು ನೆತ್ತಿಗೆ ಹಚ್ಚಿ. ಮಸಾಜ್ ಮಾಡಿ. ಸುಮಾರು ಇಪ್ಪತ್ತು ನಿಮಿಷದ ನಂತರ ತೊಳೆಯಿರಿ.
ಇದನ್ನೂ ಓದಿ: Beauty Care: ತ್ವಚೆಯ ಸೌಂದರ್ಯ ಹೆಚ್ಚಿಸುವ ಸ್ಟ್ರಾಬೆರಿ